ಶಕ್ತಿ ಯೋಜನೆ ಹೊಸ ಮೈಲಿಗಲ್ಲು – 17 ದಿನದಲ್ಲೇ 200 ಕೋಟಿ ರೂ. ದಾಟಿದ ಮಹಿಳೆಯರ ಉಚಿತ ಪ್ರಯಾಣದ ಮೊತ್ತ

17 ದಿನಗಳ ಹಿಂದೆ ಜಾರಿಯಾದ ಶಕ್ತಿ ಯೋಜನೆಯಲ್ಲಿ ಮಹಿಳೆಯರ ಉಚಿತ ಪ್ರಯಾಣದ ಸಂಖ್ಯೆ 8 ಕೋಟಿ ದಾಟಿದೆ.

ಶಕ್ತಿ ಯೋಜನೆಯಡಿಯಲ್ಲಿ ನಾಲ್ಕು ಸಾರಿಗೆ ನಿಗಮಗಳು ಮಹಿಳಾ ಪ್ರಯಾಣಿಕರಿಗೆ ನೀಡಿರುವ ಟಿಕೆಟ್​ ಮೌಲ್ಯ 200 ಕೋಟಿ ರೂಪಾಯಿ ದಾಟಿದೆ. ಈ ಮೂಲಕ ಶಕ್ತಿ ಯೋಜನೆ ಅದ್ಭುತ ಯಶಸ್ಸು ಕಂಡಿದೆ.

ಕೆಎಸ್​ಆರ್​ಟಿಸಿ ಇವತ್ತು ಹಂಚಿಕೊಂಡಿರುವ ಮಾಹಿತಿ ಪ್ರಕಾರ ಮಂಗಳವಾರ ಒಂದೇ ದಿನ 4 ನಿಗಮಗಳಲ್ಲಿ ಬಸ್​ಗಳಲ್ಲಿ 60 ಲಕ್ಷದ 63 ಸಾವಿರದ 632 ಮಂದಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇವರಿಗೆ ನೀಡಲಾದ ಉಚಿತ ಟಿಕೆಟ್​ನ ಮೌಲ್ಯ ಬರೋಬ್ಬರೀ 13 ಕೋಟಿ 86 ಲಕ್ಷ ರೂಪಾಯಿ.

ಜೂನ್​ 11ರಿಂದ ಜೂನ್​ 27ರ ಮಧ್ಯರಾತ್ರಿವರೆಗೆ ಉಚಿತ ಪ್ರಯಾಣದಡಿ ಮಹಿಳೆಯರಿಗೆ ನೀಡಲಾಗಿರುವ 8 ಕೋಟಿ 85 ಲಕ್ಷದ 57 ಸಾವಿರದ 269. ಈ ಟಿಕೆಟ್​ಗಳ ಒಟ್ಟು ಮೌಲ್ಯ 208 ಕೋಟಿ 36 ಲಕ್ಷದ 36 ಸಾವಿರದ 666 ಕೋಟಿ ರೂಪಾಯಿ.

ಶಕ್ತಿ ಯೋಜನೆಯಡಿಯಲ್ಲಿ ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿತರಿಸುವ ಟಿಕೆಟ್​ ಮೊತ್ತವನ್ನು ರಾಜ್ಯ ಸರ್ಕಾರವೇ ತನ್ನ ಬೊಕ್ಕಸದಿಂದ ಈ ನಿಗಮಗಳಿಗೆ ಪಾವತಿಸಲಿದೆ.

ಈ ಮೂಲಕ ನಿಗಮಗಳಿಗೆ ಶಕ್ತಿ ಯೋಜನೆಯಡಿಯಲ್ಲಿ ಪ್ರಯಾಣಿಕರ ಹೆಚ್ಚಳದಿಂದ ಹಣದ ಹರಿವು ಹೆಚ್ಚಳವಾಗಿದೆ.