ಮಹತ್ವದ ನಿರ್ಧಾರವೊಂದರಲ್ಲಿ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಅನ್ನಭಾಗ್ಯ ಯೋಜನೆಯಡಿಯಲ್ಲಿ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ಬದಲು ಹಣ ನೀಡಲು ನಿರ್ಧಾರ ಮಾಡಿದೆ.
ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈಗಾಗಲೇ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ಅಂದರೆ ಒಟ್ಟು 10 ಕೆಜಿ ಅಕ್ಕಿ ನೀಡುವ ನಿರ್ಧಾರವನ್ನು ಕಾಂಗ್ರೆಸ್ ಘೋಷಿಸಿತ್ತು.
ಆದರೆ ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿಯಾಗಿ ಅಕ್ಕಿ ನೀಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಈಗ ಸಿಎಂ ಸಿದ್ದರಾಮಯ್ಯನವರು ತಮ್ಮ ಘೋಷಣೆಯ ಜಾರಿಗೆ ಪ್ರತಿತಂತ್ರ ರೂಪಿಸಿದ್ದಾರೆ.
ಪ್ರತಿ ಕೆಜಿಗೆ 34 ರೂಪಾಯಿಯಂತೆ ಐದು ಕೆಜಿ ಹಣವನ್ನು ಸರ್ಕಾರ ಬಿಪಿಎಲ್ ಪಡಿತರ ಖಾತೆದಾರರ ಖಾತೆಗೆ ಜಮೆ ಮಾಡಲಿದೆ.
ಒಂದು ವೇಳೆ ಒಂದು ಮನೆಯಲ್ಲಿ ಐವರು ಸದಸ್ಯರಿದ್ದರೆ ಆಗ ಅವರ ಖಾತೆಗೆ 25 ಕೆ ಜಿ ಅಕ್ಕಿಯ ಹಣವನ್ನು ಕೆಜಿಗೆ 34 ರೂಪಾಯಿಯಂತೆ ಜಮೆ ಮಾಡಲಾಗುತ್ತದೆ. ಅಂದರೆ ಬಿಪಿಎಲ್ 1 ಕುಟುಂಬದಲ್ಲಿ 5 ಮಂದಿ ಇದ್ದರೆ ಆ ಕುಟುಂಬಕ್ಕೆ ಪ್ರತಿ ತಿಂಗಳು 850 ರೂಪಾಯಿ ಲಭಿಸುತ್ತದೆ.
ಜುಲೈ 1ರಿಂದಲೇ ಯೋಜನೆ ಜಾರಿ ಮಾಡ್ತೀವಿ ಎಂದು ಆಹಾರ ಸಚಿವ ಕೆ ಎಚ್ ಮುನಿಯಪ್ಪ ಅವರು ಘೋಷಿಸಿದ್ದಾರೆ.
ಒಂದು ವೇಳೆ ಆಗಸ್ಟ್ ವೇಳೆಗೆ ಅಕ್ಕಿ ಲಭ್ಯವಾದ ಕೂಡಲೇ ಹಣದ ಬದಲು ಅಕ್ಕಿ ಪೂರೈಸುವುದಾಗಿ ಸಿಎಂ ಸಿದ್ದರಾಮಯ್ಯ ಸರ್ಕಾರ ಘೋಷಿಸಿದೆ.
ADVERTISEMENT
ADVERTISEMENT