ಪಠ್ಯಪುಸ್ತಕದಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ, ನಾಡಗೀತೆಯನ್ನು ತಿರುಚಿದ ಮತ್ತು ಬಸವಣ್ಣ ಮತ್ತು ಅಂಬೇಡ್ಕರ್ ಅವರ ಬಗ್ಗೆ ಸುಳ್ಳು ಪಠ್ಯಗಳನ್ನು ತುಂಬಿಸಿದ್ದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥರನ್ನು ಅಧ್ಯಕ್ಷ ಸ್ಥಾನದಿಂದ ಸರ್ಕಾರ ವಜಾಗೊಳಿಸಬಹುದು ಎಂದು ವರದಿ ಆಗಿದೆ.
ವಜಾ ಬದಲು ತಾವೇ ರಾಜೀನಾಮೆ ನೀಡುವ ಸಲುವಾಗಿ ಚಕ್ರತೀರ್ಥ ಸರ್ಕಾರದ ಬಳಿ ಸಮಯ ಕೇಳಿದ್ದಾರೆ ಎಂದು ಪ್ರತಿಕ್ಷಣ ನ್ಯೂಸ್ಗೆ ಮೂಲಗಳು ತಿಳಿಸಿವೆ.
ರಾಷ್ಟ್ರಕವಿ ಕುವೆಂಪು ಮತ್ತು ನಾಡಗೀತೆಗೆ ಅವಮಾನ ಮಾಡಿದ್ದರ ವಿರುದ್ಧ ನಿರ್ಮಲಾನಂದ ಸ್ವಾಮೀಜಿ, ಬಸವಣ್ಣ ಅವರ ಬಗ್ಗೆ ಸುಳ್ಳು ಪಠ್ಯವನ್ನು ಮುದ್ರಿಸಿದ್ದ ವಿರುದ್ಧ ಲಿಂಗಾಯತ ಸಮಾಜ ಇಡೀ ರಾಜ್ಯದಲ್ಲಿ ಹೋರಾಟದ ಎಚ್ಚರಿಕೆ ನೀಡಿತ್ತು. ಅಂಬೇಡ್ಕರ್ ಅವರ ಬಗ್ಗೆಯೂ ರೋಹಿತ್ ಚಕ್ರತೀರ್ಥ ಸುಳ್ಳು ಮಾಹಿತಿಯನ್ನು ಪಠ್ಯದಲ್ಲಿ ಮುದ್ರಿಸಿದ್ದರು.
ಬ್ರಾಹ್ಮಣರ ಚಿಂತನೆಗಳನ್ನೇ ಪಠ್ಯದಲ್ಲಿ ತುಂಬುವ ಮೂಲಕ ಕರ್ನಾಟಕದ ಸಾಂಸ್ಕೃತಿಕ ಇತಿಹಾಸವನ್ನೂ ಕುಬ್ಜಗೊಳಿಸುವ ಯತ್ನವನ್ನೂ ರೋಹಿತ್ ಚಕ್ರತೀರ್ಥ ಪಠ್ಯ ಪುಸ್ತಕ ಪರಿಷ್ಕರಣೆ ಮೂಲಕ ಮಾಡಿದ್ದಾರೆ.
ಆದರೆ ರೋಹಿತ್ ಚಕ್ರತೀರ್ಥ ವಿರುದ್ಧ ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆ ಮತ್ತು ಕನ್ನಡ ಧ್ವಜಕ್ಕೆ ಅವಮಾನ ಮಾಡಿದ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರುಗಳು ಸಲ್ಲಿಕೆ ಆಗಿದ್ದು, ಇನ್ನೂ ಯಾಕೆ ಕ್ರಮಕೈಗೊಂಡಿಲ್ಲ ಎನ್ನುವುದು ಪ್ರಶ್ನೆ.