ರೋಹಿಣಿ ಸಿಂಧೂರಿ ಮರು ನೇಮಕಕ್ಕೆ ಸರ್ಕಾರದ ಮೇಲೆ ಒತ್ತಡ – ಯಾರಿವರು ಎನ್ನುವುದೇ ನಿಗೂಢ..!

ವಿಶೇಷ ವರದಿ: ಅಕ್ಷಯ್​ ಕುಮಾರ್​ ಯು, ಮುಖ್ಯ ಸಂಪಾದಕರು

ಕರ್ತವ್ಯ ಲೋಪ ಮತ್ತು ಅಕ್ರಮಗಳ ಒಳಗೊಂಡಂತೆ ಹಲವು ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಹುದ್ದೆ ತೋರಿಸದೇ ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ.

ಎತ್ತಂಗಡಿ ಆದ ಮೂರೇ ದಿನದಲ್ಲಿ ಈಗ ಸಾಮಾಜಿಕ ಜಾಲತಾಣದಲ್ಲಿ ಮುಜರಾಯಿ ಇಲಾಖೆ ಆಯುಕ್ತೆಯನ್ನಾಗಿ ರೋಹಿಣಿ ಸಿಂಧೂರಿ ಅವರನ್ನು ಮರು ನೇಮಿಸಿ ಎಂದು ಟ್ವಿಟ್ಟರ್​, ಫೇಸ್​ಬುಕ್​ನಲ್ಲಿ ಅಭಿಯಾನ ನಡೆಯುತ್ತಿದೆ.

ಹಾಗಾದರೆ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರ ಪರವಾಗಿ ನಿರಂತರವಾಗಿ ಪೋಸ್ಟ್​ ಹಾಕುತ್ತಿರುವುದು ಯಾರು..? ಅಭಿಯಾನ ನಡೆಸುತ್ತಿರುವವರು ಯಾರು..? 

ಅಕ್ರಮ ಮತ್ತು ಕರ್ತವ್ಯ ಲೋಪದ ಆರೋಪಗಳು ಕೇಳಿ ಬಂದಾಗ ಸರ್ಕಾರ ಮಾಡುವ ವರ್ಗಾವಣೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಗಳ ಪರವಾಗಿ ಅಭಿಯಾನ ನಡೆಯುತ್ತಿರುವುದು ಕರ್ನಾಟಕದ ಆಡಳಿತ ವ್ಯವಸ್ಥೆಯಲ್ಲಿ ಅಪರೂಪದಲ್ಲಿ ಅಪರೂಪ, ಹೊಸತೆಂದರೂ ತಪ್ಪಿಲ್ಲ. ಹೊಸ ಟ್ರೆಂಡ್​ ಶುರುವಾಗಿದೆ. 

Rohini Sindhuri Organization @Rohini_Sindhuri ಹೆಸರಿನ ಟ್ವಿಟ್ಟರ್​​ ಹ್ಯಾಂಡಲ್​ ಮತ್ತು ಫೇಸ್​ಬುಕ್​ ಪೇಜ್, ಇನ್ಸ್​ಸ್ಟಾಗ್ರಾಂ ಅಕೌಂಟ್​ನಿಂದ ಪೋಸ್ಟ್​ಗಳನ್ನು ಹಾಕಲಾಗುತ್ತಿದೆ.

ಐಪಿಎಸ್​ ಅಧಿಕಾರಿ ಡಿ ರೂಪಾ ಅವರು ರೋಹಿಣಿ ಸಿಂಧೂರಿ ಅವರ ವಿರುದ್ಧ ಆರೋಪಗಳನ್ನು ಮಾಡಿದ ಬಳಿಕ ಡಿ ರೂಪಾ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಿ ಇದೇ ಟ್ವಿಟ್ಟರ್​ ಹ್ಯಾಂಡಲ್​ನಿಂದ ಪೋಸ್ಟ್​ಗಳನ್ನು ಹಾಕಲಾಯಿತು.

ಆರಂಭದಲ್ಲಿ Rohini Sindhuri Organization NGO of IAS Officer Rohini Sindhuri ಎಂದು ಅಕೌಂಟ್​​ಗಳ profileನಲ್ಲಿ ಮಾಹಿತಿ ಇದ್ದ ಕಾರಣ ಇದು ರೋಹಿಣಿ ಸಿಂಧೂರಿಯವರ ಅಧಿಕೃತ ಖಾತೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಆಗ ಈ ಟ್ವಿಟ್ಟರ್​ ಹ್ಯಾಂಡಲ್​ ಮತ್ತು ಫೇಸ್​ಬುಕ್​ ಖಾತೆಗೆ ಮುಜರಾಯಿ ಇಲಾಖೆಯ ಅಧಿಕೃತ ಸರ್ಕಾರಿ ವೆಬ್​ಸೈಟ್​ನ ಲಿಂಕ್​ನ್ನೂ profileನಲ್ಲಿ ಅಟ್ಯಾಚ್​ ಮಾಡಲಾಗಿತ್ತು.

Rohini Sindhuri Organization ಎಂಬ ಎನ್​ಜಿಒ ಬಗ್ಗೆ ವೆಬ್​ಸೈಟ್​ನಲ್ಲಿ ಅಧಿಕೃತ ಮಾಹಿತಿಗಳಿಲ್ಲ. ಇದು ರೋಹಿಣಿಯವರು ನಡೆಸುತ್ತಿರುವ ಎನ್​​ಜಿಒ ಎಂದು ಆರಂಭದಲ್ಲಿ profileನಲ್ಲಿ ಬಣ್ಣಿಸಲಾಗಿತ್ತು.

ಆದರೆ ಡಿ ರೂಪಾ-ರೋಹಿಣಿ ಸಿಂಧೂರಿ ಸಂಘರ್ಷ ಇನ್ನಷ್ಟು ತೀವ್ರಗೊಂಡ ಬಳಿಕ ಆ ಟ್ವಿಟ್ಟರ್​ ಖಾತೆ ಮತ್ತು ಫೇಸ್​ಬುಕ್​ ಖಾತೆಯ profileನಲ್ಲಿ ಇದ್ದ ಎಲ್ಲ ಮಾಹಿತಿಯನ್ನು ತೆಗೆದು ಈಗ

Rohini Sindhuri Organization @Rohini_Sindhuri Fan Page of Rohini Sindhuri IAS ಎಂದು ಪ್ರೊಫೈಲ್​ ಬದಲಿಸಲಾಗಿದೆ.

ಹಾಗಾದರೆ ಸಾಮಾಜಿಕ ಜಾಲತಾಣದ ಮೂಲಕ ಸರ್ಕಾರದ ಮೇಲೆ ಪ್ರಭಾವ ಬೀರಿ ಎತ್ತಂಗಡಿ ಹಿಂಪಡೆಯುವಂತೆ ಪ್ರಭಾವ ಬೀರಲು ಯತ್ನಿಸುತ್ತಿರುವ ಈ ಟ್ವಿಟ್ಟರ್​ ಖಾತೆಗೂ ಮತ್ತು ಫೇಸ್​ಬುಕ್​ ಅಕೌಂಟ್​ನ ಹಿಂದಿರುವ ವ್ಯಕ್ತಿಗಳು ಯಾರು..?

ಯಾವುದೇ ಸೋಷಿಯಲ್​ ಮೀಡಿಯಾದಲ್ಲಿ ಯಾರೇ ಆಗಲೀ ಸುಖಾಸುಮ್ಮನೆ ತಮ್ಮ ಕೆಲಸ ಕಾರ್ಯ ಬಿಟ್ಟು ದಿನವಿಡೀ ಅಭಿಯಾನ ಕೈಗೊಳ್ಳಲು ಸಾಧ್ಯವಿಲ್ಲ.

ಡಿ ರೂಪಾ ಕೇಳಿದ ಆ 12ನೇ ಪ್ರಶ್ನೆ:

ಡಿ ರೂಪಾ ಅವರು ರೋಹಿಣಿ ಅವರಿಗೆ ಕೇಳಿದ 19 ಪ್ರಶ್ನೆಗಳ ಪೈಕಿ 12ನೇ ಪ್ರಶ್ನೆ ಇದಾಗಿತ್ತು.

12. ಹಿಂದೆ ನನಗೆ ಒಬ್ಬರು whatsapp ಮೆಸೇಜ್ ಮಾಡಿ ತಾವು ಇವರ ಪರವಾಗಿ ನಡೆಸುವ social media handling agency ಒಂದರಲ್ಲಿ ಕೆಲಸ ಮಾಡಿದ್ದು, ಈಗ ಆ ಕೆಲಸ ಬಿಟ್ಟಿದ್ದೇನೆ ಎಂದು ಹೇಳುತ್ತ , ಹೇಗೆ ಅಲ್ಲಿ ಈಕೆಯ ಪರವಾಗಿ ಸುದ್ದಿ, photos ,videos create ಮಾಡುತ್ತಾರೆ, ಹೇಗೆ ಈಕೆಯ ವಿರುದ್ಧ ಇರುವವರ ಟ್ರೋಲ್ ಮಾಡುವ content ಹಾಗೂ ಹ್ಯಾಂಡಲ್ ಗಳು ತಯಾರಾಗುತ್ತವೆ ಎಂಬುದು ಹೇಳಿದ್ದರು. ನಾನು ಅದನ್ನು ಫೇಸ್ಬುಕ್ ದಲ್ಲಿಯೂ ಹಾಕಿದ್ದೆ.

ಇದೇ ಮೊದಲಲ್ಲ:

ಅಂದಹಾಗೆ ರೋಹಿಣಿ ಸಿಂಧೂರಿ ಬಗ್ಗೆ ಇಂತಹ ಅಭಿಯಾನಗಳು ನಡೆಯುತ್ತಿರುವುದು ಇದೇ ಮೊದಲಲ್ಲ.

ಮಾಜಿ ಸಚಿವ, ಕೆ ಆರ್ ನಗರ ಶಾಸಕ ಸಾ ರಾ ಮಹೇಶ್​ ಅವರ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ ಬಳಿಕ ರೋಹಿಣಿ ಸಿಂಧೂರಿ ಅವರನ್ನು ಎತ್ತಂಗಡಿ ಮಾಡಲಾಗಿತ್ತು.

ಆಗಲೂ​ change.org ಎಂಬ ವೆಬ್​ಸೈಟ್​ನಲ್ಲೂ ರೋಹಿಣಿ ಸಿಂಧೂರಿ ಅವರನ್ನು ಮರು ನೇಮಿಸಿ ಎಂದು ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ ಅವರಿಗೆ ಮನವಿ ಮಾಡಿ ಅಭಿಯಾನ ಕೈಗೊಳ್ಳಲಾಗಿತ್ತು.

ಪ್ರಭಾವಿ ವ್ಯಕ್ತಿಗಳ ಭೂ ಅಕ್ರಮದ ಬಗ್ಗೆ ವರದಿಯನ್ನು ಸಲ್ಲಿಸಲು ರೋಹಿಣಿ ಸಿಂಧೂರಿಗೆ ಸರ್ಕಾರ ಅವಕಾಶ ಕೊಟ್ಟಿಲ್ಲ. ಭ್ರಷ್ಟ ಚಟುವಟಿಕೆಗಳು ಕೊನೆಯಾಗಬೇಕು, ಆ ದಿನ ಇವತ್ತೇ ಬರಲಿ. ಆದರೆ ಭ್ರಷ್ಟ ರಾಜಕಾರಣಿಗಳು ಅದಕ್ಕೆ ಅವಕಾಶ ಕೊಟ್ಟಿಲ್ಲ

ಎಂದು ಹೇಳಿ ದೀರ್ಘವಾದ ಪೀಠಿಕೆಯನ್ನು ಹಾಕಿ ಮೈಸೂರಿನ ಜನರ ಹೆಸರಲ್ಲಿ ಅಭಿಯಾನ ಕೈಗೊಳ್ಳಲಾಗಿತ್ತು.

ಈ ಅಭಿಯಾನಕ್ಕೆ 2 ಲಕ್ಷ ಜನರ ಬೆಂಬಲ ಪಡೆಯುವ ಗುರಿ ಇತ್ತು, ಒಟ್ಟು 1,78,616 ಮಂದಿ ಬೆಂಬಲಿಸಿದ್ದರು.

LEAVE A REPLY

Please enter your comment!
Please enter your name here