ಭೌತಿಕ ಕಾಯಕ್ಕೆ ಅಂತ್ಯಕ್ರಿಯೆ ಮಾಡಲು ದಹನ, ಖನನದಂತಹ ಸಂಪ್ರದಾಯಿಕ ವಿಧಾನಗಳನ್ನು ಅನುಸರಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಎಲೆಕ್ಟ್ರಿಕ್ ಪದ್ದತಿಯಲ್ಲಿ ದಹನ ಸಂಸ್ಕಾರ ನಿರ್ವಹಿಸುವ ವಿಧಾನ ಈಗ ನಗರ/ಪಟ್ಟಣ ಪ್ರದೇಶಗಳಲ್ಲಿ ಚಾಲ್ತಿಯಲ್ಲಿದೆ.
ಆದರೆ, ಇದಕ್ಕೆ ಭಿನ್ನವಾಗಿ ಹೊಸ ಹೊಸ ವಿಧಾನಗಳಗಳ ಕಡೆಗೆ ಹಲವು ದೇಶಗಳು ಒಲವು ತೋರುತ್ತಿವೆ.
ನೀರಿನ ನೆರವಿನೊಂದಿಗೆ ಅಂತ್ಯಕ್ರಿಯೆ ನೆರವೇರಿಸುವ, ಪರಿಸರಕ್ಕೆ ಪೂರಕವಾದ ವಿಧಾನಕ್ಕೆ ಬ್ರಿಟನ್ ಸರ್ಕಾರ ಅನುಮತಿ ನೀಡಿದೆ. ಶೀಘ್ರವೇ ಬ್ರಿಟನ್ನಾದ್ಯಂತ ಇದು ಅನುಷ್ಠಾನಕ್ಕೆ ಬರಲಿದೆ.
ಏನಿದು ನೀರಿನ ನೆರವಿನೊಂದಿಗೆ ಅಂತ್ಯಕ್ರಿಯೆ/ರೆಸೋಮೇಷನ್?
ನೀರಿನ ನೆರವಿನೊಂದಿಗೆ ಅಂತ್ಯಕ್ರಿಯೆ ನಿರ್ವಹಿಸುವ ಪದ್ದತಿಯನ್ನು ರೆಸೋಮೇಷನ್ ಎನ್ನುತ್ತಾರೆ. ಇದರಲ್ಲಿ ಯಾವುದೇ ಜ್ವಾಲೆ ಇರಲ್ಲ.
ಪೊಟೋಷಿಯಂ ಹೈಡ್ರಾಕ್ಸೈಡ್ ಮತ್ತು ನೀರಿನ ಸಹಾಯದಿಂದ ಮೃತದೇಹವನ್ನು ಕರಗಿಸುವ ಪ್ರಕ್ರಿಯೆ ಇದು. ಮೊದಲು ಮೃತದೇಹವನ್ನು ಒಂದು ಬಯೋಡಿಗ್ರೇಡೆಬಲ್ ಬ್ಯಾಗ್ನಲ್ಲಿ ಸುತ್ತಿ ಇಡಲಾಗುತ್ತದೆ.
ನಂತರ ಅದನ್ನು ಶೇಕಡಾ 95ರಷ್ಟು ನೀರು, ಶೇಕಡಾ 5ರಷ್ಟು ಪೊಟೋಷಿಯಂ ಹೈಡ್ರಾಕ್ಸೈಡ್ ದ್ರಾವಣವಿರುವ ಬಿಸಿ ಕಂಟೈನರ್ನಲ್ಲಿ ಇರಿಸಲಾಗುತ್ತದೆ. ಇದನ್ನು ಬಾಯಿಲ್ ಇನ್ ದಿ ಬ್ಯಾಗ್ ಎಂದು ಕರೆಯುತ್ತಾರೆ.
ಈ ಸಂದರ್ಭದಲ್ಲಿ ರಾಸಾಯನಿಕ ಪ್ರಕ್ರಿಯೆ ನಡೆದು ಕೆಲ ದ್ರವಗಳು ಬಿಡುಗಡೆ ಆಗುತ್ತವೆ. ಉಳಿದ ಕೆಲ ಮೂಳೆಗಳನ್ನು ಮೃತರ ಬಂಧುಗಳಿಗೆ ನೀಡಲಾಗುತ್ತದೆ.
ಈ ಪ್ರಕ್ರಿಯೆ ಪೂರ್ಣಗೊಳ್ಳಲು ನಾಲ್ಕು ಗಂಟೆ ಹಿಡಿಯುತ್ತದೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಯಾವುದೇ ಹಾನಿಕಾರಕ ವಾಯು ಬಿಡುಗಡೆ ಆಗಲ್ಲ.
ಅಕ್ವಾಮೇಷನ್, ಆಲ್ಕಲೈನ್ ಹೈಡ್ರೋಲಿಸಿಸ್ ಎಂದು ಕೂಡ ಈ ಪ್ರಕ್ರಿಯೆಯನ್ನು ಕರೆಯಲಾಗುತ್ತದೆ. ಇದು ಅತ್ಯಂತ ಸುರಕ್ಷಿತ ವಿಧಾನ ಎಂದು ಪರಿಣಿತರು ಹೇಳುತ್ತಾರೆ.
ಎಲ್ಲೆಲ್ಲಿ ಈ ವಿಧಾನ ಜಾರಿಯಲ್ಲಿದೆ?
ಈಗಾಗಲೇ ಈ ವಿಧಾನವನ್ನು ಕೆನಡಾ, ದಕ್ಷಿಣ ಆಫ್ರಿಕಾ, ಅಮೆರಿಕಾ ಸೇರಿ ಹಲವು ದೇಶಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಇದೀಗ ಬ್ರಿಟನ್ನಲ್ಲಿಯೂ ಈ ಪದ್ಧತಿಯನ್ನು ಅನುಷ್ಠಾನ ಮಾಡಲು ತಯಾರಿಗಳು ನಡೆದಿವೆ. ಇದಕ್ಕೆ ಆಗುವ ಖರ್ಚು ಕೂಡ ಸಂಪ್ರದಾಯಿಕ ಪದ್ಧತಿಯ ಅಂತ್ಯಕ್ರಿಯೆಗೆ ಆಗುವಷ್ಟೇ ಆಗುತ್ತೆ.
ಸಾಮಾನ್ಯವಾಗಿ ಒಂದು ದಹನ ಪ್ರಕ್ರಿಯೆಯಲ್ಲಿ 245 ಕಿಲೋ ಕಾರ್ಬನ್ ಬಿಡುಗಡೆ ಆಗುತ್ತದೆ. ಆದರೆ,ನೀರಿನ ನೆರವಿನೊಂದಿಗೆ ಅಂತ್ಯಕ್ರಿಯೆ ನಿರ್ವಹಿಸುವ ರೆಸೋಮೆಷನ್ ಪದ್ದತಿಯಿಂದ ಪರಿಸರಕ್ಕೆ ಹಾನಿಯಾಗಲ್ಲ ಎಂದು ಕೋ-ಆಪ್ ಫ್ಯುನರಲ್ ಕೇರ್ ತಿಳಿಸುತ್ತದೆ.
ADVERTISEMENT
ADVERTISEMENT