ಮಾಜಿ ಸಚಿವ, ಗೋಕಾಕ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮತ್ತು ಆಪರೇಷನ್ ಕಮಲ ಮೂಲಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೀಳಲು ಕಾರಣಕರ್ತರಲ್ಲಿ ಪ್ರಮುಖರಾದ ರಮೇಶ್ ಜಾರಕಿಹೊಳಿ ವಿರುದ್ಧ ಲೈಂಗಿಕ ಸಿಡಿ ಕೇಸ್ನ್ನು ಸಿಬಿಐಗೆ ಒಪ್ಪಿಸಬಹುದೇ..?
ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತಾಡಿದ ಮಾಜಿ ಜಲಸಂಪನ್ಮೂಲ ಸಚಿವರು ಆಗಿರುವ ಜಾರಕಿಹೊಳಿ ಸಿಡಿ ಷಡ್ಯಂತ್ರದ ಹಿಂದೆ ಈಗ ಉಪ ಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೈವಾಡವಿದೆ, ಆ ಬಗ್ಗೆ ತಮ್ಮ ಬಳಿ ಆಡಿಯೋ ಸಾಕ್ಷ್ಯವಿರುವುದಾಗಿ ಹೇಳಿಕೊಂಡಿದ್ದಾರೆ.
ಅಲ್ಲದೇ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ ಜಿ ಪರಮೇಶ್ವರ್ ಮತ್ತು ಪೊಲೀಸ್ ಇಲಾಖೆ ಮುಖ್ಯಸ್ಥರಾದ ಡಿಜಿಪಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿಯೂ ಹೇಳಿದ್ದಾರೆ.
ಒಂದು ವೇಳೆ ಸಿಬಿಐ ತನಿಖೆಗೆ ಒಪ್ಪಿಸಿದರೆ ಒಂದು ಗಂಟೆಯೊಳಗೆ ತಮ್ಮ ಬಳಿ ಇರುವ ಸಾಕ್ಷಿಗಳನ್ನು ಸಲ್ಲಿಸುವುದಾಗಿಯೂ ಜಾರಕಿಹೊಳಿ ಘೋಷಿಸಿದ್ದಾರೆ.
ಸಿಬಿಐ ತನಿಖೆ ಸಾಧ್ಯವೇ..?
ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆ 1946ರಡಿಯಲ್ಲಿ ರಚನೆಯಾದ ಸಿಬಿಐಗೆ ವಿಶೇಷ ಪ್ರಕರಣಗಳಲ್ಲಿ ತನಿಖೆ ನಡೆಸಲು ರಾಜ್ಯ ಸರ್ಕಾರಗಳು ಶಿಫಾರಸ್ಸು ಮಾಡಬೇಕು. ಒಂದು ವೇಳೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದರೆ ಆ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಬಹುದು.
ಅಥವಾ ನೊಂದಿರುವ ರಮೇಶ್ ಜಾರಕಿಹೊಳಿ ಅವರು ತಮ್ಮ ಬಳಿ ಇರುವ ಸಾಕ್ಷ್ಯಗಳ ಆಧಾರದಲ್ಲಿ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ಗೆ ದಾವೆ ಹೂಡಿ ಸಿಬಿಐ ತನಿಖೆಗೆ ಆದೇಶಿಸುವಂತೆ ಮನವಿ ಮಾಡಬಹುದು. ಒಂದು ವೇಳೆ ಸಾಂವಿಧಾನಿಕ ನ್ಯಾಯಾಲಯ ಸಿಬಿಐ ತನಿಖೆಗೆ ಆದೇಶಿಸಿದರೆ ಆಗ ಮಾತ್ರ ಸಿಬಿಐ ತನಿಖೆ ಸಾಧ್ಯ.
ಎಸ್ಐಟಿ ತನಿಖೆ:
ಜಾರಕಿಹೊಳಿ ವಿರುದ್ಧ ಲೈಂಗಿಕ ಸಿಡಿ ಬಹಿರಂಗವಾದ ಬಳಿಕ ಬಿಜೆಪಿ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿತ್ತು. ಮಾಹಿತಿಗಳ ಸಿಡಿ ಪ್ರಕರಣದಲ್ಲಿ ಜಾರಕಿಹೊಳಿ ಅವರನ್ನು ಎಸ್ಐಟಿ ಆರೋಪ ಮುಕ್ತಗೊಳಿಸಿದೆ.
ಆದರೆ ಎಸ್ಐಟಿ ರಚನೆಯನ್ನು ಪ್ರಶ್ನಿಸಿ ಸಂತ್ರಸ್ತ ಯುವತಿ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದು ಆ ದಾವೆಯ ವಿಚಾರಣೆ ಬಾಕಿ ಇದೆ. ರಾಜ್ಯ ಸರ್ಕಾರ ರಚಿಸಿದ್ದ ಎಸ್ಐಟಿಯನ್ನು ರದ್ದುಪಡಿಸಿ ಹೊಸ ಎಸ್ಐಟಿಯನ್ನು ರಚಿಸಿ ಆ ಎಸ್ಐಟಿ ತನಿಖೆ ಮೇಲೆ ಹೈಕೋರ್ಟ್ ಮೇಲುಸ್ತುವಾರಿ ಮಾಡಬೇಕೆಂಬ ವಾದವನ್ನು ಯುವತಿ ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮಾಡಿದ್ದಾಳೆ.
ಜಾರಕಿಹೊಳಿ ಆಗ್ರಹ ಇದೇ ಮೊದಲಲ್ಲ:
ಡಿಕೆಶಿವಕುಮಾರ್ ವಿರುದ್ಧ ನನ್ನ ಬಳಿ ಸಾಕ್ಷ್ಯ ಇದೆ, ಸಿಬಿಐ ತನಿಖೆ ಆಗ್ಬೇಕು ಎಂದು ಜಾರಕಿಹೊಳಿ ಮಾಡುತ್ತಿರುವ ಆಗ್ರಹ ಇದೇ ಮೊದಲಲ್ಲ. ಇದೇ ವರ್ಷದ ಜನವರಿಯಲ್ಲೂ ಇದೇ ಆಗ್ರಹ ಮಾಡಿದ್ದರು, ಫೆಬ್ರವರಿಯಲ್ಲೂ ಆಗ್ರಹಿಸಿದ್ದರು. ಫೆಬ್ರವರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಭೇಟಿ ಮಾಡಿದ್ದರು. ವಿಧಾನಸಭಾ ಚುನಾವಣಾ ಫಲಿತಾಂಶಕ್ಕೂ ಮೊದಲು ಆಗ್ರಹ ಮಾಡಿದ್ದರು.
ಆದರೆ ಸಿಬಿಐ ತನಿಖೆ ಮಾಡಬೇಕೆಂಬ ಜಾರಕಿಹೊಳಿ ವಾದಕ್ಕೆ, ಆಗ್ರಹಕ್ಕೆ ಬಿಜೆಪಿಯವರೇ ತಲೆಕೆಡಿಸಿಕೊಂಡಿಲ್ಲ.
ಯಾರು ಆ ಬಿಜೆಪಿ ನಾಯಕ..?
ಸಿಡಿ ಪ್ರಕರಣದಲ್ಲಿ ಪೊಲೀಸರು ಡಿ ಕೆ ಶಿವಕುಮಾರ್ ಅವರ ಡ್ರೈವರ್ನ್ನೂ ವಿಚಾರಣೆ ನಡೆಸಿಲ್ಲ ಎಂದು ಗಂಭೀರ ಆರೋಪ ಮಾಡಿರುವ ಜಾರಕಿಹೊಳಿ ಡಿಕೆಶಿ ವಿರುದ್ಧ ತನಿಖೆಗೆ ಬಿಜೆಪಿ ನಾಯಕರೊಬ್ಬರು ಅಡ್ಡಿಯಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಆದರೆ ಅಂತಹ ಪ್ರಭಾವಿ ನಾಯಕ ಯಾರು ಎಂಬುದನ್ನು ಜಾರಕಿಹೊಳಿ ಬಹಿರಂಗಪಡಿಸಿಲ್ಲ.
ಜಾರಕಿಹೊಳಿ ಮುಂದೇನು ಮಾಡಬಹುದು..?
ರಾಜ್ಯ ಸರ್ಕಾರವೇ ಸಿಡಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ಸಾಧ್ಯತೆ ಇಲ್ಲವೇ ಇಲ್ಲ. ಕೇಂದ್ರಾಡಳಿತ ಪ್ರದೇಶ ಹೊರತುಪಡಿಸಿ ರಾಜ್ಯಗಳ ವ್ಯಾಪ್ತಿಯ ಪ್ರಕರಣಗಳಲ್ಲಿ ಸಿಬಿಐ ಸ್ವಯಂ ಪ್ರೇರಿತ ತನಿಖೆಗೆ ಅಧಿಕಾರವಿಲ್ಲ.
ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ತಮ್ಮ ಬಳಿ ಇರುವ ಸಾಕ್ಷ್ಯವನ್ನು ಆಧರಿಸಿ ಡಿಕೆಶಿವಕುಮಾರ್ ವಿರುದ್ಧ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸುವಂತೆ ಮಾಡಬಹುದು.
ಆದರೆ ಪ್ರಭಾವಿ ಆಗಿರುವ ಡಿಕೆಶಿ ವಿರುದ್ಧ ಪೊಲೀಸರ ತನಿಖೆ ಬಗ್ಗೆಯೇ ಜಾರಕಿಹೊಳಿಗೆ ಅನುಮಾನ ಇರುವ ಕಾರಣ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ಗೆ ಹೋಗುವುದು ಮಾತ್ರ ಜಾರಕಿಹೊಳಿಗಿರುವ ಕೊನೆಯ ದಾರಿ.
ADVERTISEMENT
ADVERTISEMENT