ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆ ಆಗುತ್ತಾ..? ಇಲ್ಲಿದೆ ಲೆಕ್ಕಾಚಾರ

ಇಸ್ರೇಲ್​ ಮತ್ತು ಹಮಾಸ್​ ನಡುವಿನ ಯುದ್ಧ ಸಂಘರ್ಷಕ್ಕೆ ಇವತ್ತಿಗೆ 26ನೇ ದಿನ. ಮಧ್ಯಪ್ರಾಚ್ಯದಲ್ಲಿ ಈ ಸಂಘರ್ಷದ ಕಾರಣದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಇನ್ನಷ್ಟು ದುಬಾರಿ ಆಗುತ್ತಾ..?

ಕಚ್ಚಾತೈಲ ದುಬಾರಿಯಾದರೆ ಭಾರತದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಮತ್ತು ಅಡುಗೆ ಅನಿಲದ ದರ ಇನ್ನಷ್ಟು ಏರಿಕೆ ಅಗುತ್ತಾ..?

50 ವರ್ಷಗಳ ಹಿಂದೆ ಮಧ್ಯಪ್ರಾಚ್ಯದಲ್ಲಾದ ಬಿಕ್ಕಟ್ಟಿನ ಕಾರಣದಿಂದ ಸೃಷ್ಟಿಯಾದ ತೈಲ ಬಿಕ್ಕಟ್ಟಿನ ಪರಿಸ್ಥಿತಿಯೇ ಮತ್ತೆ ಪುನರಾವರ್ತನೆ ಆಗುತ್ತಾ..?

ಇಸ್ರೇಲ್​ ಮತ್ತು ಹಮಾಸ್​ ಸಂಘರ್ಷದ ಕಾರಣದಿಂದ ಸೃಷ್ಟಿಯಾಗಬಹುದಾದ ಕಚ್ಚಾತೈಲ ಆತಂಕದ ಬಗ್ಗೆ ವಿಶ್ವಬ್ಯಾಂಕ್​ ಮೂರು ಪ್ರಮುಖ ಲೆಕ್ಕಾಚಾರವನ್ನು ಮುಂದಿಟ್ಟಿದೆ. ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರೆಲ್​ಗೆ 87 ಡಾಲರ್​.

1. ಒಂದು ವೇಳೆ ಸಂಘರ್ಷ ತೀವ್ರಗೊಂಡರೆ ಆ ಕಾರಣದಿಂದ ಕಚ್ಚಾತೈಲ ಉತ್ಪಾದನೆಯಲ್ಲಿ ಅಲ್ಪ ಪ್ರಮಾಣದ ಏರಿಳಿತವಾದರೆ ಅಂದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ದಿನ ಕಚ್ಚಾತೈಲದ ಪೂರೈಕೆ 5 ಲಕ್ಷದ ಬ್ಯಾರೆಲ್​ನಿಂದ 20 ಲಕ್ಷ ಬ್ಯಾರೆಲ್​ನ್ನಷ್ಟು ಇಳಿಕೆಯಾದರೆ ಆಗ ಕಚ್ಚಾತೈಲದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇಕಡಾ 3ರಿಂದ 13ರಷ್ಟು ಅಂದರೆ 93 ಡಾಲರ್​ನಿಂದ 102 ಡಾಲರ್​ನವರೆಗೆ ಏರಿಕೆ ಆಗಬಹುದು. 2011ರಲ್ಲಿ ಲಿಬಿಯಾದಲ್ಲಾದ ನಾಗರಿಕ ಸಂಘರ್ಷದ ಕಾರಣದಿಂದ ಇಂಥದ್ದೇ ಸನ್ನಿವೇಶ ಸೃಷ್ಟಿಯಾಗಿತ್ತು.

2. ಮಧ್ಯಮ ಸ್ವರೂಪದ ಏರಿಳಿತ ಅಂದರೆ ಒಂದು ವೇಳೆ ಕಚ್ಚಾತೈಲ ಉಗ ತ್ಪಾದನೆ ಪ್ರತಿ ದಿನಕ್ಕೆ 30 ಲಕ್ಷ ಬ್ಯಾರೆಲ್​ನಿಂದ 50 ಲಕ್ಷ ಬ್ಯಾರೆಲ್​ನ್ನಷ್ಟು ಕಡಿತವಾದರೆ ಆಗ ಕಚ್ಚಾತೈಲದ ಬೆಲೆ ಬ್ಯಾರೆಲ್​ಗೆ ಶೇಕಡಾ 21ರಿಂದ 35ರಷ್ಟು ಹೆಚ್ಚಳ ಆಗಲಿದೆ. ಆಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬರೋಬ್ಬರೀ 109ರಿಂದ 121 ಡಾಲರ್​ಗೆ ಏರಿಕೆ ಆಗಲಿದೆ. 2003ರಲ್ಲಿ ಇರಾಕ್​ ಯುದ್ಧದ ವೇಳೆ ಕಚ್ಚಾತೈಲದ ಬೆಲೆ ಈ ಪ್ರಮಾಣದ ಏರಿಕೆಯನ್ನು ಕಂಡಿತ್ತು.

3. ಒಂದು ವೇಳೆ ಇಸ್ರೇಲ್​ ಮತ್ತು ಹಮಾಸ್​ ಸಂಘರ್ಷ ಇನ್ನಷ್ಟು ತೀವ್ರಗೊಂಡು ತೀವ್ರ ಗಂಭೀರ ಪರಿಣಾಮಗಳಾದರೆ ಆಗ ಕಚ್ಚಾ ತೈಲ ಉತ್ಪಾದನೆ ಪ್ರತಿ ದಿನ 60 ಲಕ್ಷದಿಂದ 80 ಲಕ್ಷ ಬ್ಯಾರೆಲ್​ನ್ನಷ್ಟು ಕಡಿತವಾದರೆ ಕಚ್ಚಾತೈಲ ದರ ಶೇಕಡಾ 56ರಿಂದ 75ರಷ್ಟು ಹೆಚ್ಚಳ ಕಂಡು ಬ್ಯಾರೆಲ್​ ದರ 140 ಡಾಲರ್​​ರಿಂದ 157 ಡಾಲರ್​ವರೆಗೂ ಏರಿಕೆ ಆಗಬಹುದು. 1973ರಲ್ಲಾದ ಮಧ್ಯಪ್ರಾಚ್ಯ ಯುದ್ಧದ ಕಾರಣದಿಂದ ಬ್ಯಾರೆಲ್​ ದರ ಈ ಪ್ರಮಾಣದಲ್ಲಿ ಏರಿಕೆ ಕಂಡಿತ್ತು.

ಕಚ್ಚಾತೈಲದಲ್ಲಾಗುವ ಏರಿಳಿತ ಇತರೆ ಉತ್ಪನ್ನಗಳ ಬೆಲೆಯ ಮೇಲೂ ನೇರ ಪರಿಣಾಮ ಬೀರಲಿದೆ. ಇತರೆ ಉತ್ಪನ್ನಗಳ ಬೆಲೆ ಏರಿಕೆ ಸಹಜವಾಗಿಯೇ ಜನಜೀವನದ ದಿನನಿತ್ಯದ ವೆಚ್ಚವನ್ನು ದುಬಾರಿ ಮಾಡಲಿದೆ.

ಮಾಹಿತಿ: 1 ಬ್ಯಾರೆಲ್​ ಎಂದರೆ 159 ಲೀಟರ್​. ಬ್ಯಾರೆಲ್​ನಲ್ಲಾಗುವ ದರ ಬದಲಾವಣೆಯನ್ನು ತೈಲ ಕಂಪನಿಗಳು ನೇರವಾಗಿ ತಮ್ಮ ಗ್ರಾಹಕರಿಗೆ ವರ್ಗಾಯಿಸುತ್ತವೆ.

ಮಾಹಿತಿ 2: ಭಾರತದಲ್ಲಿ ದಿನ ತೈಲ ಬಳಕೆ ಪ್ರಮಾಣ 44 ಲಕ್ಷದ 43 ಸಾವಿರ ಬ್ಯಾರೆಲ್​. ಭಾರತ ಪ್ರತಿ ದಿನ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾತೈಲದ ಪ್ರಮಾಣ 42 ಲಕ್ಷದ 55 ಸಾವಿರ ಬ್ಯಾರೆಲ್​.

 

LEAVE A REPLY

Please enter your comment!
Please enter your name here