ಕಾಂಗ್ರೆಸ್ ಸಂಸದ ಹಾಗೂ ಪ್ರಮುಖ ನಾಯಕ ರಾಹುಲ್ ಗಾಂಧಿಯವರು ನೇಪಾಳದ ಕಾಠ್ಮಂಡುವಿನಲ್ಲಿ ನೈಟ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ಪಾರ್ಟಿಯ ತುಣುಕೊಂದನ್ನ ಹಂಚಿಕೊಂಡಿದ್ದ ಬಿಜೆಪಿಯ ಕೆಲವು ನಾಯಕರು ರಾಹುಲ್ ಗಾಂಧಿಯವರ ಬಗ್ಗೆ ವ್ಯಂಗ್ಯವಾಡಿದ್ದರು. ಅಲ್ಲದೇ, ಚೀನಾದ ಮಹಿಳಾ ರಾಯಭಾರಿಯೊಂದಿಗೆ ರಾಹುಲ್ ಗಾಂಧಿ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಡಲಾಗಿತ್ತು.
ಹಾಗಾದರೆ ರಾಹುಲ್ ಗಾಂಧಿಯೊಂದಿಗೆ ಪಾರ್ಟಿಯಲ್ಲಿದ್ದ ಆ ಯುವತಿ ನಿಜಕ್ಕೂ ಯಾರು..? ಎನ್ನುವ ಪ್ರಶ್ನೆ ಬಹುತೇಕರಲ್ಲಿ ಮೂಡಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ದೊರಕಿದ್ದು, ರಾಹುಲ್ ಗಾಂಧಿಯೊಂದಿಗೆ ಇದ್ದ ಯುವತಿ ಚೀನಾದ ರಾಯಭಾರಿ ‘ಹ್ಯೂ ಯಾಂಕಿ’ ಎಲ್ಲ ಎಂದು ತಿಳಿದುಬಂದಿದೆ.
ರಾಹುಲ್ ಗಾಂಧಿಯವರ ನೈಟ್ ಪಾರ್ಟಿಯ ವೀಡಿಯೋ ವೈರಲ್ ಆದ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಚೀನಾದ ರಾಯಭಾರಿ ‘ಹ್ಯೂ ಯಾಂಕಿ’ಯವರೊಂದಿಗೆ ಸಂಸದರು ಇದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಇಂಡಿಯಾ ಟುಡೇ ನಡೆಸಿದ ಫ್ಯಾಕ್ಟ್ ಚೆಕ್ ವರದಿಯಲ್ಲಿ ಸತ್ಯ ಬಯಲಾಗಿದ್ದು, ಆ ಯುವತಿ ಚೀನಾದ ರಾಯಭಾರಿ ಎಲ್ಲ ಎಂದು ವರದಿಯಾಗಿದೆ.
ಆ ಯುವತಿ ಯಾರು..?
ಕಾಠ್ಮಂಡುವಿನಲ್ಲಿ ರಾಹುಲ್ ಗಾಂಧಿಯವರು ತಮ್ಮ ಗೆಳೆಯರೊಬ್ಬರ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ಯಾವುದೇ ಚೀನಾದ ರಾಯಭಾರಿ ಇಲ್ಲಿರಲಿಲ್ಲ ಎಂದು ಅಲ್ಲಿನ ಸ್ಥಳೀಯ ಪತ್ರಕರ್ತರು ಹಾಗೂ ಪಬ್ನ ಮ್ಯಾನೇಜ್ಮೆಂಟ್ ತಿಳಿಸಿದೆ. ಆ ಯುವತಿ ವಧುವಿನ ಗೆಳತಿ ಎಂದು ತಿಳಿದುಬಂದಿದೆ.
ನಿನ್ನೆಯಷ್ಟೇ, ಈ ವೀಡಿಯೋ ವೈರಲ್ ಮಾಡಿದ್ದ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ರಾಹುಲ್ ಗಾಂಧಿಯವರು ಗೆಳೆಯರ ಮದುವೆಗೆ ಹೋಗಿದ್ದಾರೆಯೇ ಹೊರತು ಪಾಕಿಸ್ತಾನದ ಪ್ರಧಾನಿಯೋದಿಗೆ ಏಕಾಏಕಿ ಕೇಕ್ ಕಟ್ ಮಾಡಲು ಅಲ್ಲ ಎಂದು ವ್ಯಂಗ್ಯವಾಡಿದ್ದರು.