ಪಿಎಸ್ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಪ್ರಿಯಾಂಕ್ ಖರ್ಗೆಯವರಿಗೆ ಸಿಐಡಿ ನಿನ್ನೆಯಷ್ಟೇ 3 ನೇ ನೋಟಿಸ್ ನೀಡಿತ್ತು. ಈ ನೋಟಿಸ್ಗೆ ಮಾಧ್ಯಮಗಳ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು ಸಿಐಟಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಇಂದು ಬೆಂಗಳುರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ಏ.24ರಂದು ಮೊದಲ ನೋಟೀಸ್ ನೀಡಲಾಗಿತ್ತು. ಅದರಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಹಾಗೂ ದಾಖಲಾತಿಗಳನ್ನು. ಸಹಾಯ ತನಿಖಾಧಿಕಾರಿಗೆ ಕಚೇರಿಯಲ್ಲಿ ಹಾಜರಾಗಿ ಸಲ್ಲಿಸಬೇಕು ಎಂದಿತ್ತು.
ಇನ್ನು ಏ.28ರಂದು ಎರಡನೇ ನೋಟಿಸ್ ನೀಡಿದ್ದು ನಾನು ಅಂದು ಮನೆಯಲ್ಲಿ ಇಲ್ಲದ ಕಾರಣ ಸ್ವೀಕರಿಸಲಿಲ್ಲ. ಈ ಎರಡು ನೊಟೀಸ್ ಒಂದೇ ಆಗಿದ್ದು, ಯಾವುದೇ ವ್ಯತ್ಯಾಸವಿಲ್ಲ. ಇನ್ನೂ ನನಗೆ ಮೂರನೇ ನೊಟೀಸ್ ಮೇ 4ರಂದು ಬಂದಿತ್ತು.
ನಾನು ಮೊದಲ ನೊಟೀಸ್ ಗೆ ಏಪ್ರಿಲ್ 26ರಂದು ನನ್ನ ಬಳಿಯಿರುವ ಮಾಹಿತಿಗಳನ್ನೆಲ್ಲಾ ಸಲ್ಲಿಸಿ ಲಿಖಿತ ಉತ್ತರ ನೀಡಿದ್ದೇನೆ. ಈಗ ಬಂದಿರುವ ನೋಟಿಸ್ ನಲ್ಲಿ ‘ತಾವು 24ರಂದು ವಿಚಾರಣೆಗೆ ಹಾಜರಾಗದೆ ಲಿಖಿತ ಉತ್ತರ ಸಲ್ಲಿಸಿದ್ದು, ಅದರಲ್ಲಿ ಪರಿಶೀಲಿಸಿದಾಗ ಪ್ರಕರಣಕ್ಕೆ ಸಂಬಂಧವಿಲ್ಲದ ಸಂಗತಿಗಳು ಕಂಡುಬರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಹಾಗೂ ನೈಜ್ಯತೆ ಇಲ್ಲದ ಮಾಹಿತಿಗಳನ್ನು ಹರಿದಾಡುತ್ತಿದ್ದು ಅವುಗಳನ್ನು ಸಾಕ್ಷ್ಯಾಧಾರ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
ನಾನು ಸಲ್ಲಿಸಿದ್ದ ಲಿಖಿತ ಉತ್ತರದಲ್ಲಿ ‘ಸಚಿವ ಪ್ರಭು ಚೌಹಾಣ್ ಅವರು ಬರೆದ ಪತ್ರದಲ್ಲಿ ಈ ನೇಮಕಾತಿಯಲ್ಲಿ ಗೋಲ್ಮಾಲ್ ನಡೆದಿದ್ದು, ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದ್ದು, ಈ ಪ್ರಕ್ರಿಯೆಯನ್ನು ನಿಲ್ಲಿಸಿ ತನಿಖೆ ನಡೆಸಬೇಕು’ ಎಂದು ಸ್ಪಷ್ಟವಾಗಿ ಬರೆದಿದ್ದಾರೆ.
ಇದರ ಜೊತೆಗೆ ವಿಧಾನಪರಿಷತ್ ಸದಸ್ಯ ಸಂಕನೂರು ಅವರ ಪತ್ರವನ್ನು ಸಲ್ಲಿಸಿದ್ದು ಅದರಲ್ಲಿ, ‘ಉನ್ನತ ಹಾಗೂ ದಕ್ಷ ಅಧಿಕಾರಿಗಳಿಂದ ಈ ಪ್ರಕರಣದ ತನಿಖೆ ನಡೆಸಬೇಕು’ ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ.
ತನಿಖಾಧಿಕಾರಿಗಳು ಯಾವ ಆಧಾರದ ಮೇಲೆ ಈ ಪತ್ರಗಳನ್ನು ಆಧಾರ ರಹಿತವಾಗಿದೆ ಎಂದು ತೀರ್ಮಾನಿಸಿದ್ದಾರೆ. ಹಾಗಾದರೆ ಸಂಪುಟ ಸಚಿವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರಕ್ಕೆ ಯಾವುದೇ ಬೆಲೆ ಇಲ್ಲವೇ? ಈ ದಾಖಲೆಗಳು ಪ್ರಕರಣಕ್ಕೆ ಸಂಬಂಧಿಸುವುದಿಲ್ಲವೇ? ಬಿಜೆಪಿ ಶಾಸಕರು ಹಾಗೂ ಸಚಿವರಿಗೆ ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಹೇಗೆ ತಿಳಿಯಿತು?
ತನಿಖಾಧಿಕಾರಿಗಳು ನಾನು ಹೇಳಿದ್ದನ್ನೆಲ್ಲ ನಿಜ ಎಂದು ಪರಿಗಣಿಸುವುದಾದರೆ, ಅದರ ಆಧಾರದ ಮೇಲೆ ನೀವು ನನಗೆ ನೋಟಿಸ್ ನೀಡುವುದಾದರೆ, ಗೃಹ ಸಚಿವರು, ಮುಖ್ಯಮಂತ್ರಿ ಯನ್ನು ಬಂಧಿಸಬೇಕಲ್ಲವೇ?
ನಿಮಗೆ ಯಾವ ಅಂಶ ಬೇಕು ಅದನ್ನು ಮಾತ್ರ ಆಯ್ಕೆ ಮಾಡಿಕೊಂಡು, ಅದರ ಆಧಾರದ ಮೇಲೆ ನೀವು ನೋಟಿಸ್ ಜಾರಿ ಮಾಡುತ್ತೀರಾ? ಇದೇನಾ ನಿಮ್ಮ ತನಿಖೆ ರೀತಿ?
ನೋಟಿಸ್ ನಲ್ಲಿ ಮುಂದುವರೆದು, ‘ಪತ್ರಿಕಾಗೋಷ್ಠಿಯಲ್ಲಿ ನೀವು ಪ್ರಕಟಿಸಿದ ಆಡಿಯೋ ಕ್ಲಿಪ್ ನೈಜತೆ ಬಗ್ಗೆ ನಿಮ್ಮ ಬಳಿ ಇರುವ ಮಾಹಿತಿ ಸಲ್ಲಿಸಿ’ ಎಂದು ಹೇಳಲಾಗಿದೆ.ನಾವುಗಳು ದಾಖಲೆ ಹಾಗೂ ಅವುಗಳ ಸತ್ಯಾಸತ್ಯತೆ ಯನ್ನು ಪರಿಶೀಲಿಸ ಬೇಕಾದರೆ ಪೊಲೀಸ್ ಇಲಾಖೆ ಯಾಕೆ ಬೇಕು? ಇವರ ಕೆಲಸ ಏನು ಸರ್ಕಾರ ಇವರಿಗೆ ಯಾಕೆ ಸಂಬಳ ನೀಡುತ್ತಿದೆ? ಗೃಹ ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ನೀವು ಹೇಳುವ ದಕ್ಷ ಅಧಿಕಾರಿಗಳನ್ನು ಇಲಾಖೆಯಿಂದ ಹೊರಗೆ ಹಾಕಿ.
ನಮ್ಮ ಕಾಲದಲ್ಲಿ ನೀವು ಪತ್ರಿಕಾಗೋಷ್ಠಿಗಳನ್ನು ನಡೆಸಿ 2ಜಿ ಕಲ್ಲಿದ್ದಲು ಸೇರಿದಂತೆ ವಿವಿಧ ಹಗರಣ, ಡಿಕೆ ರವಿ ಹಾಗೂ ಇತರ ಪ್ರಕರಣಗಳಲ್ಲಿ ಆರೋಪ ಮಾಡಿದಾಗ ಯಾವ ದಾಖಲೆ ಸಲ್ಲಿಸಿದ್ದೀರಿ? ನಾವು ನಿಮ್ಮಂತೆ ಉಡಾಫೆಯಾಗಿ ಮಾತನಾಡಿದ್ದೆವೇ? ನಿಮ್ಮ ಆರೋಪಕ್ಕೆ ಸ್ಪಂದಿಸಿ ತನಿಖೆ ಮಾಡಿ ನಿರ್ದೋಷಿಯಾಗಿ ಬಂದಿದ್ದೇವೆ. ನಿಮಗೆ ಒಂದು ಹಗರಣದ ತನಿಖೆ ಮಾಡುವ ಯೋಗ್ಯತೆ ಇಲ್ಲದಿದ್ದರೆ, ನಮಗೆ ಯಾಕೆ ತನಿಖೆ ಮಾಡಲು ಹೇಳುತ್ತೀರಿ? ಕುಣಿಯಲಾರದ ನೆಲ ಡೊಂಕು ಎಂದು ಹೇಳುತ್ತೀರಾ?
ಮೊದಲ ಹಾಗೂ ಮೂರನೇ ನೋಟೀಸ್ ನಡುವೆ ಇರುವ ವ್ಯತ್ಯಾಸವನ್ನು ಗಮನಿಸಬೇಕು. ಗೃಹ ಸಚಿವರು ಹಾಗೂ ಬಿಜೆಪಿ ನಾಯಕರು ಪದೇಪದೇ ಪ್ರಿಯಾಂಕ ಖರ್ಗೆ ಅವರ ಬಳಿ ಮಾಹಿತಿ ಇದ್ದರೆ ಹೋಗಿ ತನಿಖಾಧಿಕಾರಿಗಳ ಮುಂದೆ ಕೊಡಲಿ. ಅವರು ಯಾಕೆ ಹೆದರುತ್ತಿದ್ದಾರೆ ಧೈರ್ಯ ಇಲ್ಲವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ನಾನು ಗೃಹ ಸಚಿವರು ಹಾಗೂ ಬಿಜೆಪಿ ನಾಯಕರ ಬಳಿ ಒಂದು ಮನವಿ ಮಾಡಿಕೊಳ್ಳಲು ಬಯಸುತ್ತೇನೆ. ನಿಮಗೆ ಕಾನೂನು ಪರಿಜ್ಞಾನ ಇಲ್ಲವಾದರೆ ಕಾನೂನು ಪುಸ್ತಕ ಓದಿ. ಸುಮ್ಮನೆ ವಾಟ್ಸಪ್ ಯೂನಿವರ್ಸಿಟಿಯಿಂದ ಹೊರಬನ್ನಿ. ಕಾನೂನು ಪುಸ್ತಕಗಳನ್ನು ಓದಿ. ಇಲ್ಲದಿದ್ದರೆ ನಿಮ್ಮ ಕಾನೂನು ಸಚಿವರ ಸಲಹೆಯನ್ನು ಪಡೆಯಿರಿ.
ಕಾನೂನಿನ ಸೆಕ್ಷನ್ 91 ಅಡಿಯಲ್ಲಿ ನನಗೆ ನೋಟಿಸ್ ನೀಡಲಾಗಿದ್ದು. ಆ ಕಾನೂನಿನ ಪ್ರಕಾರ ತನಿಖಾಧಿಕಾರಿಗಳು ಯಾವ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಸಲಾಗುವುದೋ ಆ ವ್ಯಕ್ತಿ ಬಳಿ ನಿರ್ದಿಷ್ಟ ದಾಖಲೆ ಇದ್ದರೆ ಅದನ್ನು ಸಲ್ಲಿಸುವಂತೆ ಕೇಳಬೇಕು ಎಂದು ತಿಳಿಸಿದೆ. ಇವರು ಮೊದಲ ನೊಟೀಸ್ ನಲ್ಲಿ ಯಾವ ನಿರ್ದಿಷ್ಟ ದಾಖಲೆ ಕೇಳಿದ್ದಾರೆ?
ಮೊದಲ ನೋಟಿಸ್ ನಲ್ಲಿ ಸ್ಪಷ್ಟವಾಗಿ ನಿರ್ದಿಷ್ಟ ದಾಖಲೆ ಬಗ್ಗೆ ಕೇಳಿದ ತನಿಖಾಧಿಕಾರಿಗಳು ಮೂರನೇ ನೋಟಿಸ್ ನಲ್ಲಿ ಆಡಿಯೋ ಕ್ಲಿಪ್ ಪ್ರಸ್ತಾಪ ಮಾಡಿದ್ದಾರೆ.
ಈ ಬಗ್ಗೆ ನಿಮ್ಮ ಪೊಲೀಸ್ ಇಲಾಖೆಯವರಿಗೆ ಮಾಹಿತಿ ಇಲ್ಲವೇ? ನಿಮ್ಮ ಗುಪ್ತಚರ ಇಲಾಖೆ ಕೇವಲ ಮಾಧ್ಯಮಗಳ ವರದಿ ಹಾಗೂ ವಿರೋಧಪಕ್ಷದವರು ಹೇಳಿಕೆಗೆ ಸೀಮಿತವಾಗಿದೆಯೇ?
ಇಂದು ನಾವು ಮೂರನೇ ನೊಟೀಸ್ ಉತ್ತರ ನೀಡಿದ್ದು, ನಾನು ಆಡಿಯೋ ಕ್ಲಿಪ್ಪಿಂಗ್ ಹಾಗೂ ನಾನು ಪತ್ರಿಕಾಗೋಷ್ಠಿಯಲ್ಲಿ ಹೇಳಿದ ವಿಚಾರವನ್ನು ಸ್ಪಷ್ಟವಾಗಿ ನೀಡಿದ್ದೇನೆ.
ಅವರ ಯೋಗ್ಯತೆಗೆ ಒಂದು ಪತ್ರಿಕಾಗೋಷ್ಠಿಯನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ ಎಂದಾದರೆ ಅದು ನನ್ನ ತಪ್ಪಲ್ಲ. ಅವರು ಇದೇ ರೀತಿ ನೋಟಿಸ್ ನೀಡುತ್ತಿದ್ದಾರೆ ನಾನು ಕೂಡ ಈ ನೋಟಿಸ್ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ.
ಬಿಜೆಪಿಯವರು ನಮ್ಮ ಬಾಯಿ ಮುಚ್ಚಿಸಲು ಈ ರೀತಿ ನೋಟಿಸ್ ನೀಡುತ್ತಿದ್ದರೆ, ಅವರು ಬಹಳ ದೊಡ್ಡ ತಪ್ಪು ಮಾಡುತ್ತಿದ್ದಾರೆ. ನನಗೂ ಕೂಡ ಬಹಳ ಚೆನ್ನಾಗಿ ಕಾನೂನಿನ ಅರಿವಿದೆ.
ನಿನ್ನೆ ನಾನು ಮಾನ್ಯ ಗೃಹಸಚಿವರಿಗೆ ಒಂದು ಪತ್ರ ಬರೆದಿದ್ದು, ಇದರಲ್ಲಿ ನಾನು ಅವರಿಗೆ ಅಧಿಕೃತವಾಗಿ ಎರಡು ಮನವಿ ಮಾಡಿಕೊಂಡಿದ್ದೇನೆ.
ಮೊದಲನೆಯದು, ಪ್ರಭು ಚೌಹಾಣ್ ಅವರು ಹಾಗೂ ಸಂಕನೂರು ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಶಾಸಕ ಶಶಿ ನಮೋಶಿ ಯವರು, ಸಚಿವ ಶ್ರೀರಾಮುಲು ಅವರನ್ನು ಭೇಟಿ ಮಾಡಿ ಈ ನೇಮಕಾತಿ ಅಕ್ರಮ ವಿಚಾರವಾಗಿ ತನಿಖೆ ನಡೆಸಬೇಕು ಎಂದು ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಕೂಡ ಮಾಡಿದ್ದಾರೆ.
ಈ ಎಲ್ಲಾ ಬಿಜೆಪಿ ನಾಯಕರು ನನಗಿಂತಲೂ ಮೊದಲು ಪಿಎಸ್ಐ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಹೀಗಾಗಿ ನನಗೆ ನೋಟಿಸ್ ಕೊಟ್ಟಂತೆ ಅವರಿಗೂ ನೋಟಿಸ್ ಜಾರಿ ಮಾಡಿ ಸಹಕಾರ ಕೇಳಬೇಕಾಗಿದೆ. ಈ ಪ್ರಕರಣ ಬಹಳ ಗಂಭೀರವಾದದ್ದು ಎಂದು ನನಗೆ ಹೇಗೆ ಪಾಠ ಹೇಳುತ್ತಿದ್ದೀರಾ ಅದೇ ರೀತಿ ಈ ನಾಯಕರಿಗೂ ಹೇಳಿ.
ಇನ್ನು ಎರಡನೆಯದು, ಗೃಹ ಸಚಿವರು ವಿಧಾನಪರಿಷತ್ತಿನಲ್ಲಿ ಸದಸ್ಯರಾದ ರವಿ ಅವರ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದು ಅದರಲ್ಲಿ, ‘5 ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ದೂರು ಸಲ್ಲಿಸಿದ್ದು, ಈ ವಿಚಾರವಾಗಿ ಹಿರಿಯ ಅಧಿಕಾರಿಗಳು ಪರಿಶೀಲಿಸಿದ್ದು, ಅವರ ಪ್ರಕಾರ ಅಭ್ಯರ್ಥಿಗಳು ಅವರ ಅರ್ಹತೆಯ ಮೇರೆಗೆ ಅಂಕಗಳನ್ನು ಪಡೆದಿರುವುದು ಕಂಡುಬಂದಿದೆ. ಹೀಗಾಗಿ ದೂರು ಅರ್ಜಿಗಳಲ್ಲಿ ತಿಳಿಸಿರುವಂತೆ ಯಾವುದೇ ಅಕ್ರಮ ನಡೆದಿರುವುದಿಲ್ಲ’ ಎಂದು ತಿಳಿಸಿದ್ದೀರಿ. ಆದರೆ ಈಗ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಕಂಡು ಬಂದಿದ್ದು, 5 ಅಭ್ಯರ್ಥಿಗಳು ದೂರುಗಳನ್ನು ಯಾವ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಹಾಗೂ ಸದರಿ ತನಿಖೆಯ ಪ್ರಕ್ರಿಯೆಯನ್ನು ಯಾವ ರೀತಿ ನಡೆಸಲಾಗಿದೆ ಮತ್ತು ತನಿಖೆಯ ಪರಿಶೀಲನೆಯ ವರದಿ ಎಲ್ಲಿದೆ?
ಗೃಹ ಸಚಿವರು ಈ ಉತ್ತರವನ್ನು ಬೇರೆ ಎಲ್ಲೂ ನೋಡಿಲ್ಲ ಸದನದ ಒಳಗೆ ವಿಧಾನಪರಿಷತ್ ಸದಸ್ಯರ ಪ್ರಶ್ನೆಗೆ ಕೊಟ್ಟಿರುವ ಅಧಿಕೃತ ಉತ್ತರವಾಗಿದೆ.
ಉತ್ತರದಲ್ಲಿ ಹೇಳಿರುವಂತೆ ಯಾವ ಹಿರಿಯ ಅಧಿಕಾರಿಗಳು ಈ ದೂರುಗಳನ್ನು ಪರಿಶೀಲಿಸಿದ್ದು ಅವರು ಕೊಟ್ಟಿರುವ ವರದಿ ಎಲ್ಲಿದೆ ಇವುಗಳನ್ನು ಕೂಡ ಈ ಪ್ರಕರಣದ ತನಿಖಾಧಿಕಾರಿಗಳಿಗೆ ನೀಡಬೇಕಲ್ಲವೇ? ನೀವು ಈ ಮಾಹಿತಿಗಳನ್ನು ತನಿಖಾಧಿಕಾರಿಗಳಿಗೆ ಸಲ್ಲಿಸಿದ ನಂತರ ಈ ಪ್ರಕರಣದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಅಥವಾ ನೀವುಗಳು ಭಾಗಿಯಾಗಿದ್ದರು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
ಸರ್ಕಾರ ಈ ಪ್ರಕರಣದಲ್ಲಿ ಮಧ್ಯವರ್ತಿಗಳನ್ನು ಮಾತ್ರ ಬಂದಿದೆ ಪ್ರಕರಣದ ಪ್ರಮುಖ ರೂವಾರಿಗಳನ್ನು ರಕ್ಷಿಸಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ. ಉನ್ನತಮಟ್ಟದ ತನಿಖೆಯಾದರೆ ವಿಧಾನಸೌಧದಲ್ಲಿರುವ ಯಾವ ಹೆಗ್ಗಣಗಳು ಈಚೆ ಬರುತ್ತೋ ಗೊತ್ತಿಲ್ಲ. ಈಗ ನಾಲ್ವರು ಪ್ರಭಾವಿ ನಾಯಕರ ಹೆಸರು ಕೇಳಿಬಂದ ತಕ್ಷಣ ನೋಟಿಸ್ ಜಾರಿ ಮಾಡಿ ಮಾಧ್ಯಮ ಹಾಗೂ ಜನರ ದಾರಿ ತಪ್ಪಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ.
ನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಕಾನೂನಿಗೆ ಗೌರವ ನೀಡುತ್ತಾ ತನಿಖಾಧಿಕಾರಿಗಳಿಗೆ ಕಾನೂನಿನ ಪ್ರಕಾರ ಉತ್ತರ ಸಲ್ಲಿಸಿದ್ದೇನೆ. ನಿಮಗೆ ಕಾನೂನಿನ ಅರಿವಿಲ್ಲದಿದ್ದರೆ ನಾನು ಏನು ಮಾಡಲು ಸಾಧ್ಯವಿಲ್ಲ.
ಸಚಿವರು ಸದನದಲ್ಲಿ ಕೊಟ್ಟಿರುವ ಉತ್ತರವನ್ನು ಕೂಡ ತನಿಖಾಧಿಕಾರಿಗಳಿಗೆ ನೀಡಬೇಕು. ಅವರ ಮಾಹಿತಿ ತಪ್ಪಾಗಿದ್ದರೆ ಅವರು ಸದನವನ್ನು ತಪ್ಪುದಾರಿಗೆ ಎಳೆದಿದ್ದಾರೆ, ಸಾಕ್ಷ್ಯಾಧಾರಗಳ ದಾರಿತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಎಂಬುದು ಸಾಬೀತಾಗುತ್ತದೆ.
ಇಂದು ನಮ್ಮ ನಾಯಕರು ಈ ಪ್ರಕರಣದ ತನಿಖೆಯನ್ನು ನ್ಯಾಯಾಂಗ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದ್ದು ಈಗಲೂ ನಾನು ಸರ್ಕಾರಕ್ಕೆ ಅದನ್ನೇ ಆಗ್ರಹಿಸುತ್ತೇನೆ. ಇಷ್ಟು ದೊಡ್ಡ ಅಕ್ರಮಗಳು ನಡೆದಿದ್ದರು, ಗೃಹಸಚಿವರಿಗೆ ಅಲ್ಪಸ್ವಲ್ಪವಾದರೂ ಮಾನ ಮರ್ಯಾದೆ ಇದ್ದರೆ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.