ADVERTISEMENT
ಪ್ರತಿ ಒಂದು ಸುಳ್ಳು ಜಾಹೀರಾತಿಗೆ ಒಂದೊಂದು ಕೋಟಿ ರೂಪಾಯಿ ದಂಡ ವಿಧಿಸುವುದಾಗಿ ಯೋಗ ಗುರು ಬಾಬಾ ರಾಮದೇವ್ ಮಾಲೀಕತ್ವದ ಪತಂಜಲಿ ಆರ್ಯವೇದ ಕಂಪನಿಗೆ ಸುಪ್ರೀಂಕೋರ್ಟ್ ಕಟು ಎಚ್ಚರಿಕೆ ನೀಡಿದೆ.
ಪತಂಜಲಿ ಆರ್ಯುವೇದದ ಎಲ್ಲ ತಪ್ಪು ದಾರಿಗೆಳೆಯುವ ಮತ್ತು ಸುಳ್ಳು ಜಾಹೀರಾತುಗಳು ತಕ್ಷಣವೇ ನಿಲ್ಲಬೇಕು. ಯಾವುದೇ ರೀತಿಯ ಉಲ್ಲಂಘನೆಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ನಿರ್ದಿಷ್ಟ ರೋಗಗಳನ್ನು ಗುಣಪಡಿಸಲಾಗುತ್ತದೆ ಎಂದು ಹೇಳಿಕೊಳ್ಳುವ ಪ್ರತಿಯೊಂದು ಔಷಧದ ಮೇಲೆ ಒಂದೊಂದು ಕೋಟಿ ರೂಪಾಯಿವರೆಗೂ ದಂಡ ವಿಧಿಸಬೇಕಾಗುತ್ತದೆ
ಎಂದು ನ್ಯಾಯಮೂತಿ ಅಶಾದುದ್ದೀನ್ ಅಮಾನುಲ್ಲಾ ಮತ್ತು ನ್ಯಾಯಮೂರ್ತಿ ಪಂಕಜ್ ಮಿಶ್ರಾ ಅವರ ಪೀಠ ಪತಂಜಲಿ ಆರ್ಯುವೇದ ಕಂಪನಿಗೆ ಕಟು ಎಚ್ಚರಿಕೆ ನೀಡಿದೆ.
ಅಲೋಪತಿ ಸೇರಿದಂತೆ ಆಧುನಿಕ ಔಷಧದ ಪದ್ಧತಿ ಬಗ್ಗೆ ಯೋಗ ಗುರು ಬಾಬಾ ರಾಮದೇವ್ ನೀಡಿದ್ದ ಹೇಳಿಕೆಯನ್ನು ಪ್ರಶ್ನಿಸಿ ಭಾರತೀಯ ಔಷಧ ಸಂಘ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಎನ್ ವಿ ರಮಣ ಮುಖ್ಯ ನ್ಯಾಯಮೂರ್ತಿಯಾಗಿದ್ದ ವೇಳೆ ನಡೆದಿದ್ದ ವಿಚಾರಣೆ ವೇಳೆ ರಾಮ್ದೇವ್ ಹೇಳಿಕೆ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.
ಬಾಬಾ ರಾಮ್ದೇವ್ ಅವರಿಗೆ ಏನಾಗಿದೆ..? ಅವರು ತಮ್ಮ ಪದ್ಧತಿಯನ್ನು ಜನಪ್ರಿಯಗೊಳಿಸಬಹುದು, ಆದರೆ ಅವರು ಬೇರೆ ಪದ್ಧತಿಯನ್ನು ಯಾಕೆ ಟೀಕಿಸುತ್ತಿದ್ದಾರೆ. ನಾವು ಅವರನ್ನು ಗೌರವಿಸ್ತೀವಿ, ಅವರು ಯೋಗವನ್ನು ಜನಪ್ರಿಯಗೊಳಿಸಿದ್ದಾರೆ, ಆದರೆ ಅವರು ಬೇರೆ ಪದ್ಧತಿಯನ್ನು ಟೀಕಿಸುವಂತಿಲ್ಲ. ತಮ್ಮದೇ ಪದ್ಧತಿ ನಡೆಯುತ್ತದೆ ಎನ್ನುವುದಕ್ಕೆ ಅವರು ಏನು ಗ್ಯಾರಂಟಿ ಕೊಡುತ್ತಾರೆ..? ಅವರು ವೈದ್ಯ ಪದ್ಧತಿಯನ್ನು ನಿರಾಕರಿಸಲು ಸಾಧ್ಯವಿಲ್ಲ. ಬೇರೆ ಪದ್ಧತಿಯನ್ನು ಟೀಕಿಸುವುದರಿಂದ ಅವರು ಹಿಂಜರಿಯಬೇಕು
ಎಂದು ಸಿಜೆಐ ಆಗಿದ್ದ ಎನ್ ವಿ ರಮಣ ಅಸಮಾಧಾನ ವ್ಯಕ್ತಪಡಿಸಿದ್ದರು.
ಮುಂದಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ಫೆಬ್ರವರಿ ೫ಕ್ಕೆ ಮುಂದೂಡಿದೆ.
ADVERTISEMENT