ಕರ್ನಾಟಕದಲ್ಲಿ ಓವೈಸಿ – ಕುಮಾರಸ್ವಾಮಿ ಮೈತ್ರಿ ಸಾಧ್ಯತೆ – ಕಾಂಗ್ರೆಸ್​​ಗೆ ಆತಂಕ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಮತ್ತು ಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಚುನಾವಣಾಪೂರ್ವ ಮೈತ್ರಿ ಮಾಡಿಕೊಳ್ಳುವ ನಿರೀಕ್ಷೆ ಇದೆ.

ಮೂಲಗಳ ಪ್ರಕಾರ ಮುಸ್ಲಿಂ ಮತ ಪ್ರಾಬಲ್ಯ ಇರುವ ವಿಧಾನಸಭಾ ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳನ್ನು ಎಂಐಎಂಗೆ ಜೆಡಿಎಸ್​ ಬಿಟ್ಟು ಕೊಡುವ ಸಾಧ್ಯತೆ ಇದೆ.

ತೆಲಂಗಾಣ ಮುಖ್ಯಮಂತ್ರಿ ಮತ್ತು ಬಿಆರ್​ಎಸ್​ ಪಕ್ಷದ ನಾಯಕರೂ ಆಗಿರುವ ಕೆ ಚಂದ್ರಶೇಖರ್​ ರಾವ್​ ಅವರ ಸಲಹೆ ಮೇರೆಗೆ ಕುಮಾರಸ್ವಾಮಿ ಅವರು ಓವೈಸಿ ಜೊತೆಗೆ ಮೈತ್ರಿ ಮಾಡಿಕೊಳ್ಳುವ ನಿರೀಕ್ಷೆ ಇದೆ.

ತೆಲಂಗಾಣದಲ್ಲಿ ಓವೈಸಿ ಮತ್ತು ಕೆಸಿಆರ್ ಪಕ್ಷ ಹೊಂದಾಣಿಕೆ ರಾಜಕಾರಣದಲ್ಲಿದೆ.

ಜೆಡಿಎಸ್​ ಜೊತೆಗೆ ಮೈತ್ರಿಗೆ ಮಾತುಕತೆ ನಡೆಸಲಾಗಿದೆ ಎಂದು ಓವೈಸಿ ಅವರೇ ಅಧಿಕೃತ ಮಾಹಿತಿ ನೀಡಿದ್ದಾರೆ. ಜೆಡಿಎಸ್​ ವರಿಷ್ಠ ಹೆಚ್​ ಡಿ ದೇವೇಗೌಡರ ಜೊತೆಗೆ ಮಾತುಕತೆ ನಡೆದಿದ್ದು, ಜೆಡಿಎಸ್​ನಿಂದ ಇನ್ನೂ ಪ್ರತಿಕ್ರಿಯೆ ಬರುವುದು ಬಾಕಿ ಇದೆ ಎಂದಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈಗಾಗಲೇ ಓವೈಸಿ ಪಕ್ಷ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. 

ಬೆಳಗಾವಿ ಉತ್ತರ, ಬಸನವಬಾಗೇವಾಡಿ ಮತ್ತು ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರಗಳಿಗೆ ಈಗಾಗಲೇ ಎಂಐಎಂ ಅಭ್ಯರ್ಥಿಗಳನ್ನು ಪ್ರಕಟಿಸಿದೆ.

ಓವೈಸಿ ಮತ್ತು ಕುಮಾರಸ್ವಾಮಿ ಮೈತ್ರಿ ಕರ್ನಾಟಕದಲ್ಲಿ ಕಾಂಗ್ರೆಸ್​​ಗೆ ಮಾರಕ ಆಗಬಹುದು. ಮುಸ್ಲಿಂ ಮತಗಳ ವಿಭಜನೆ ಮೂಲಕ ಕಾಂಗ್ರೆಸ್​ ಸೋಲಿಗೆ ಜೆಡಿಎಸ್​ ಕೈಯಲ್ಲಿರುವ ಪ್ರಮುಖ ಅಸ್ತ್ರಗಳಲ್ಲಿ ಇದೂ ಒಂದು ಎಂದು ಭಾವಿಸಲಾಗಿದೆ.