Operation Congress: ಆಪರೇಷನ್​ ರಾಜಕೀಯದ ಮೊದಲ ಕಂತು ಇವತ್ತು – ಕೆಲವರು ಕಾಂಗ್ರೆಸ್​​ಗೆ ಸೇರ್ಪಡೆ

ವಿಧಾನಸಭಾ ಚುನಾವಣೆಯ ಬಳಿಕ ಮೊದಲ ಕಂತಿನ ಆಷರೇಷನ್​ ರಾಜಕೀಯ ಇವತ್ತು ನಡೆಯಲಿದೆ.

ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿಯನ್ನು ತೊರೆದು ಜೆಡಿಎಸ್​​ಗೆ ಸೇರ್ಪಡೆಯಾಗಿದ್ದ ಮಾಜಿ ವಿಧಾನಪರಿಷತ್​ ಸದಸ್ಯ ಆಯನೂರು ಮಂಜುನಾಥ್​ ಅವರು ಕಾಂಗ್ರೆಸ್​​ಗೆ ಸೇರ್ಪಡೆಯಾಗಲಿದ್ದಾರೆ.

ಭಾನುವಾರವಷ್ಟೇ ಆಯನೂರು ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಅವರನ್ನು ಭೇಟಿಯಾಗಿದ್ದರು.

ವಿಧಾನಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ ಪರಿಷತ್​ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್​​ಗೆ ಸೇರ್ಪಡೆಯಾಗಿದ್ದರು. ಜೆಡಿಎಸ್​ನಿಂದ ಸ್ಪರ್ಧಿಸಿ ಕೇವಲ 8,863 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದರು.

ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಟಿಕೆಟ್​ ಸಿಗದೇ ಬಂಡಾಯವಾಗಿ ಸ್ಪರ್ಧಿಸಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರಗೆ ಪ್ರಬಲ ಸ್ಪರ್ಧೆ ನೀಡಿದ್ದ ಎಸ್​ ಪಿ ನಾಗರಾಜ್​ ಗೌಡ ಅವರು ಇವತ್ತು ಕಾಂಗ್ರೆಸ್​​ಗೆ ಮರಳಲಿದ್ದಾರೆ.

ಶಿಕಾರಿಪುರದಲ್ಲಿ ಬಂಡಾಯವಾಗಿ ಸ್ಪರ್ಧಿಸಿ 70,802 ಮತಗಳನ್ನು ಪಡೆದಿದ್ದ ನಾಗರಾಜ್​ಗೌಡ ಅವರು 11,008 ಮತಗಳಿಂದ ಸೋತಿದ್ದರು. ಕಾಂಗ್ರೆಸ್​​ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಯಡಿಯೂರಪ್ಪ ಅವರ ಜೊತೆಗೆ ಕಾಂಗ್ರೆಸ್​ ನಾಯಕರ ಒಳಒಪ್ಪಂದಿಂದಲೇ ನಾಗರಾಜ್​ ಗೌಡಗೆ ಸೋಲಾಯಿತು ಎಂಬ ಟೀಕೆಗಳ ನಡುವೆ ಇವತ್ತು ನಾಗರಾಜ್​ ಗೌಡ ಮತ್ತೆ ಕಾಂಗ್ರೆಸ್​ಗೆ ಸೇರುತ್ತಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್​ ಟಿ ಸೋಮಶೇಖರ್​ ಅವರ ಬೆಂಬಲಿಗರು ಇವತ್ತು ಕಾಂಗ್ರೆಸ್​ಗೆ ಸೇರ್ಪಡೆಯಾಗಲಿದ್ದಾರೆ. ಬಿಜೆಪಿ ಶಾಸಕ ಎಸ್​ಟಿಎಸ್​ ಸೇರ್ಪಡೆಗೂ ಮೊದಲು ಬೆಂಬಲಿಗರು ಸೇರ್ಪಡೆ ಆಗುವ ಮೂಲಕ ಬಿಜೆಪಿಗೆ ಹೊಸ ತಲೆನೋವು ಶುರುವಾಗಿದೆ. ನಿನ್ನೆಯಷ್ಟೇ ಎಸ್​ಟಿ ಸೋಮಶೇಖರ್​ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕ್ಷೇತ್ರಕ್ಕೆ ಅನುದಾನ ಸಂಬಂಧ ಮಾತುಕತೆ ನಡೆಸಿದ್ದರು.

LEAVE A REPLY

Please enter your comment!
Please enter your name here