ಹಾಸನ ನಗರ ಕ್ಷೇತ್ರದಲ್ಲಿ ಯಾರಿಗೆ ಜೆಡಿಎಸ್ ಟಿಕೆಟ್ ಕೊಡಬೇಕು ಎಂಬ ಬಗ್ಗೆ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಹೆಚ್ ಡಿ ರೇವಣ್ಣ ಕುಟುಂಬದ ನಡುವೆ ಸಂಘರ್ಷ ತೀವ್ರಗೊಂಡಿದೆ.
ಭವಾನಿ ರೇವಣ್ಣಗೆ ಹಾಸನ ನಗರ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂಬ ರೇವಣ್ಣ ಕುಟುಂಬದ ಬೇಡಿಕೆಯನ್ನು ಕುಮಾರಸ್ವಾಮಿ ಖಂಡಾತುಂಡವಾಗಿ ತಿರಸ್ಕರಿಸಿದ್ದಾರೆ.
ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸುವ ಸಲುವಾಗಿ ಕುಮಾರಸ್ವಾಮಿ ಅವರನ್ನು ರೇವಣ್ಣ ಮತ್ತು ಇಬ್ಬರು ಪುತ್ರರಾದ ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ ಭೇಟಿ ಆಗಿದ್ದರು.
ಆದರೆ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಡಲು ಸಾಧ್ಯವಿಲ್ಲ ಎಂದು ರೇವಣ್ಣ ಕುಟುಂಬಕ್ಕೆ ತಿಳಿಸಿರುವ ಕುಮಾರಸ್ವಾಮಿ ಹಾಸನ ಕ್ಷೇತ್ರದಿಂದ ಮಾಜಿ ಶಾಸಕ ದಿವಂಗತ ಹೆಚ್ ಪಿ ಪ್ರಕಾಶ್ ಅವರ ಪುತ್ರ ಹೆಚ್ ಪಿ ಸ್ವರೂಪ್ ಅವರಿಗೆ ಟಿಕೆಟ್ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಾಸನದಿಂದಲೂ ಸ್ಪರ್ಧೆ ಮಾಡ್ತಾರಾ ರೇವಣ್ಣ..?
ಈ ನಡುವೆ ಒಂದು ವೇಳೆ ಭವಾನಿ ರೇವಣ್ಣ ಅವರಿಗೆ ಹಾಸನದಿಂದ ಟಿಕೆಟ್ ಸಿಗದೇ ಹೋದಲ್ಲಿ ಹೊಳೆನರಸೀಪುರ ಕ್ಷೇತ್ರದ ಜೊತೆಗೆ ಹಾಸನ ವಿಧಾನಸಭಾ ಕ್ಷೇತ್ರದಿಂದಲೂ ಹೆಚ್ ಡಿ ರೇವಣ್ಣ ಅವರು ಸ್ಪರ್ಧೆ ಮಾಡುವ ಬಗ್ಗೆ ಯೋಚನೆ ಮಾಡಿದ್ದಾರೆ ಎನ್ನಲಾಗಿದೆ.
ಕುಮಾರಸ್ವಾಮಿ ಸೂತ್ರವೇ ಅಸ್ತ್ರ..?
ಈ ಮೂಲಕ 2018ರ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅನುಸರಿಸಿದ್ದ ತಂತ್ರವನ್ನೇ ರೇವಣ್ಣ ಅವರು ಅನುಸರಿಸುವ ಬಗ್ಗೆ ಆಲೋಚನೆ ನಡೆದಿದೆ. ಆ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣದಿಂದ ಸ್ಪರ್ಧಿಸಿ ಎರಡೂ ಕ್ಷೇತ್ರಗಳಲ್ಲಿ ಗೆದ್ದಿದ್ದ ಕುಮಾರಸ್ವಾಮಿ ಆ ಬಳಿಕ ರಾಮನಗರ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಆ ಬಳಿಕ ನಡೆದಿದ್ದ ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರು ಗೆದ್ದು ಶಾಸಕರಾದರು.
ಇದೇ ಸೂತ್ರವನ್ನು ರೇವಣ್ಣ ಅನುಸರಿಸುವ ಸಾಧ್ಯತೆ ಇದೆ. ಒಂದು ವೇಳೆ ವೇಳೆ ಹಾಸನ ಮತ್ತು ಹೊಳೆನರಸೀಪುರ ಎರಡಲ್ಲೂ ಗೆದ್ದರೆ ಆಗ ಚುನಾವಣೆ ಬಳಿಕ ಒಂದು ಕ್ಷೇತ್ರವನ್ನು ಭವಾನಿ ಅವರಿಗೆ ಬಿಟ್ಟುಕೊಡಬಹುದು ಎಂಬುದು ರೇವಣ್ಣ ಕುಟುಂಬದ ಲೆಕ್ಕಾಚಾರ.
ADVERTISEMENT
ADVERTISEMENT