ಸಿಎಂ ಸಿದ್ಧರಾಮಯ್ಯ ಎರಡನೇ ಟಿಪ್ಪು ಸುಲ್ತಾನ್ ಎಂದು ಹೇಳಿಕೆ ನೀಡದ ಬಿಜೆಪಿ ಶಾಸಕ ಯತ್ನಾಳ್ ಗೆ ಸಚಿವ ಎಂ.ಬಿ ಪಾಟೀಲ್ ಟಾಂಗ್ ನೀಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪಾಟೀಲ್, ಯತ್ನಾಳ್ ಕೂಡ ಟಿಪ್ಪು ಸುಲ್ತಾನ ಜಯಂತಿಯಲ್ಲಿ ಪಾಲ್ಗೊಂಡಿರುವ ಫೋಟೋಗಳು ಇವೆ. ಹಾಗಾದರೆ ಅವರನ್ನು ಮೂರನೇ ಟಿಪ್ಪು ಸುಲ್ತಾನ ಎನ್ನಬಹುದು ಅಂತ ಕಾಲೆಳೆದರು.
ಟಿಪ್ಪು ಸುಲ್ತಾನ್ ಬ್ರಿಟೀಷರೊಂದಿಗೆ ಹೋರಾಡಿದ್ದಾರೆ. ಇದು ಸತ್ಯ. ಈ ಇತಿಹಾಸವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿ, ಆರ್ ಎಸ್ ಎಸ್ ಕೊಡುಗೆ ಏನೂ ಇಲ್ಲ. ಆದರೆ, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ಸಿಗರು, ಈ ದೇಶದ ಜನತೆ, ಎಲ್ಲ ಜಾತಿ ವರ್ಗದ ಜನ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಝಾನ್ಸಿ ರಾಣಿ ಲಕ್ಷ್ಮಿಬಾಯಿ ಸೇರಿದಂತೆ ಅನೇಕ ಮಂದಿ ಹೋರಾಟಗಾರರು ಪಾಲ್ಗೊಂಡಿದ್ದಾರೆ. ಈ ಹೋರಾಟದಲ್ಲಿ ಹುತಾತ್ಮರಾದವರಲ್ಲಿ ಹಿಂದುಗಳು, ಮುಸ್ಲಿಮರು, ಸಿಖ್ಖರು ಸೇರಿದಂತೆ ಎಲ್ಲ ಧರ್ಮದವರು ಸೇರಿದ್ದಾರೆ. ಆ ಹೆಸರುಗಳ ಪಟ್ಟಿಯಲ್ಲಿ ಇವರಲ್ಲಿ ಯಾರೊಬ್ಬರೂ ಇಲ್ಲ. ಇವರ ಕೊಡುಗೆಯೂ ಇಲ್ಲ. ಇವರು ಈಗ ಬಂದು ರಾಷ್ಟ್ರೀಯತೆ ಬಗ್ಗೆ, ದೇಶದ ಬಗ್ಗೆ ಮಾತನಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ ಅಂತ ಸಚಿವ ಎಂ.ಬಿ ಪಾಟೀಲ್ ಹೇಳಿದರು.