ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ, ಕಲಾ ತಪಸ್ವಿ ಕೆ ವಿಶ್ವನಾಥ್ ಅವರು ಇನ್ನಿಲ್ಲ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 92 ವರ್ಷದ ಅವರು, ಹೈದೆರಾಬಾದ್ ನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಗುಂಟೂರಿನ ರೆಪಲ್ಲೆ ಮೂಲದ ಕಾಶಿನಾಥುನಿ ವಿಶ್ವನಾಥ್ ಅವರು ತೆಲುಗು ಚಿತ್ರರಂಗದಲ್ಲಿ ಅಪರೂಪದ, ಸಂಗೀತಮಯ, ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ 53 ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಕೆಲವು ಚಿತ್ರಗಳಲ್ಲಿ ನಟನೆ ಕೂಡ ಮಾಡಿದ್ದರು.
1965ರಲ್ಲಿ ಆತ್ಮಗೌರವಮ್ ಕೆ ವಿಶ್ವನಾಥ್ ಅವರು ನಿರ್ದೇಶನ ಮಾಡಿದ ಮೊದಲ ಚಿತ್ರ.
1979ರಲ್ಲಿ ನಿರ್ದೇಶಿಸಿದ ಸಂಗೀತಪ್ರಧಾನ ಸಿನೆಮಾ ಶಂಕರಭರಣಂ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟಿತು.
1983ರಲ್ಲಿ ಮೂಡಿಬಂದ ಕಮಲ್ ಹಾಸನ್ ನಟನೆಯ ನೃತ್ಯ ಪ್ರಧಾನ ಸಾಗರ ಸಂಗಮಮ್ ಸಿನೆಮಾ ಕೆ ವಿಶ್ವನಾಥ್ ಅವರ ಅದ್ಭುತ ನಿರ್ದೇಶನಕ್ಕೆ ಸಾಕ್ಷಿಯಾಯಿತು. ಇಂದಿಗೂ ಅತ್ಯುತ್ತಮ ಸಿನೆಮಾಗಳ ಪಟ್ಟಿಯಲ್ಲಿ ಇದಕ್ಕೆ ಅತ್ಯುನ್ನತ ಸ್ಥಾನವಿದೆ.
1985ರಲ್ಲಿ ಬಂದ ಸ್ವಾತಿ ಮುತ್ಯಂ ಕೂಡ ಇದೆ ಸಾಲಿನಲ್ಲಿ ನಿಲ್ಲುತ್ತದೆ. ಕೆ ವಿಶ್ವನಾಥ್ – ಕಮಲ್ ಹಾಸನ್ ಜೋಡಿ ಮಾಡಿದ ಮೋಡಿ ಅಂತಿದ್ದದ್ದು ಆಗಿರಲಿಲ್ಲ.
1986ರಲ್ಲಿ ಸಿರಿವೆನ್ನೆಲಾ, 1987ರಲ್ಲಿ ಶ್ರುತಿಲಯಲು, ಅದೇ ವರ್ಷ ತೆರೆ ಕಂಡ ಸ್ವಯಂ ಕೃಷಿ ಬಿಗ್ ಹಿಟ್ ಎನಿಸಿಕೊಂಡವು. ಸ್ವಯಂ ಕೃಷಿಯಲ್ಲಿ ಚಿರಂಜೀವಿ ನಟನೆ ಅಮೋಘ. 1992ರಲ್ಲಿ ಚಿರಂಜೀವಿ ಅಭಿನಯದ ಆಪದ್ಭಾಂಧವುಡು ಕೂಡ ಸೂಪರ್ ಹಿಟ್ ಆಗಿತ್ತು. 2010ರಲ್ಲಿ ಶುಭಪ್ರದಂ ಕೆ ವಿಶ್ವನಾಥ್ ಅವರು ಆಕ್ಷನ್ ಕಟ್ ಹೇಳಿದ ಕೊನೆಯ ಸಿನೆಮಾ.
ನಟನಾಗಿಯೂ ಕೆ ವಿಶ್ವನಾಥ್ ಅವರು ನೋಡುಗರ ಮನದಲ್ಲಿ ಮರೆಯದ ಮುದ್ರೆ ಹಾಕಿದ್ದಾರೆ. ಪದ್ಮಶ್ರೀ, ದಾದಾ ಸಾಹೇಬ್ ಫಲ್ಕೆ ಸೇರಿ ಹಲವು ಪ್ರತಿಷ್ಟಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.