ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಪಾಲಾಗಿ, ಮಧ್ಯಂತರ ಜಾಮೀನು ಪಡೆದು ಹೊರಬಂದಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಜೂ. 2ರಂದು ಮುಕ್ತಾಯವಾಗಲಿರುವ ತಮ್ಮ ಜಾಮೀನು ಅವಧಿಯನ್ನು ಅಲ್ಲಿಂದ 7 ದಿನಗಳವರೆಗೆ ವಿಸ್ತರಿಸುವಂತೆ ಕೋರಿ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾಗಿದೆ.
ಹೀಗಾಗಿ ಬೇರೆ ವಿಧಿಯಿಲ್ಲದೆ ಕೇಜ್ರಿವಾಲ್ ಜೂ.2ರಂದು ದೆಹಲಿಯ ತಿಹಾರ್ ಜೈಲಿಗೆ ಹೋಗಿ ಶರಣಾಗಲೇಬೇಕಿದೆ. ಇನ್ನು ಕೇಜ್ರಿವಾಲ್ ಸಲ್ಲಿಸಿದ್ದ ಜಾಮೀನು ವಿಸ್ತರಣೆ ಅರ್ಜಿ ಸುಪ್ರೀಂ ಕೋರ್ಟ್ ನ ಅವಗಾಹನೆಗೆ ಬಂದಿತ್ತು. ಅರವಿಂದ್ ಕೇಜ್ರಿವಾಲ್ ಅವರಿಗೆ ಸಾಮಾನ್ಯ ಜಾಮೀನು ಸಲ್ಲಿಸುವಂತೆ ಈಗಾಗಲೇ ಸುಪ್ರೀಂ ಕೋರ್ಟ್ ಸೂಚಿಸಿದೆ. ಹೀಗಾಗಿ ಮಧ್ಯಂತರ ಜಾಮೀನು ಅವಧಿಯ ಪ್ರಶ್ನೆಯೇ ಬರುವುದಿಲ್ಲ ಅಂತ ಹೇಳಿದೆ.
ಮೇ 27ರಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಕೇಜ್ರಿವಾಲ್, ತಾವು ತಮ್ಮ ದೇಹದ ಸಂಪೂರ್ಣ ವೈದ್ಯಕೀಯ ತಪಾಸಣೆ ಮಾಡಿಸಬೇಕಿದೆ. ಹೀಗಾಗಿ ತಮಗೆ 7 ದಿನಗಳ ಜಾಮೀನು ವಿಸ್ತರಿಸಿ. ನಾನು ಜೂ.2ರ ಬದಲಾಗಿ ಜೂ. 9ರಂದು ತಿಹಾರ್ ಜೈಲಿಗೆ ಮತ್ತೆ ಆಗಮಿಸ್ತೇನೆ ಅಂತ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ರು. ಆದ್ರೀಗ ಈ ಅರ್ಜಿ ತಿರಸ್ಕೃತವಾಗಿರುವ ಹಿನ್ನೆಲೆಯಲ್ಲಿ ಬೇರೆ ದಾರಿಯಿಲ್ಲದೆ ಕೇಜ್ರಿವಾಲ್ ಜೂ.2ರಂದೆ ತಿಹಾರ್ ಜೈಲಿಗೆ ಶರಣಾಗಬೇಕಿರೋದು ಅನಿವಾರ್ಯವಾಗಿದೆ.