ಇಂದು ಮಧ್ಯಾಹ್ನದಿಂದಲೇ ಮಹಿಳೆಯರಿಗೆ ಉಚಿತ ಸಂಚಾರ ಗ್ಯಾರಂಟಿ

ಕಾಂಗ್ರೆಸ್​ ಸರ್ಕಾರದ ಬಹು ನಿರೀಕ್ಷಿತ ಮೊದಲ ಗ್ಯಾರಂಟಿ ಯೋಜನೆಗೆ ಇಂದು ಬೆಳಗ್ಗೆ 11 ಗಂಟೆಗೆ ಚಾಲನೆ ಸಿಗಲಿದೆ. ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ , ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರು ಉಚಿತವಾಗಿ ಸಂಚರಿಸಲು ಅವಕಾಶ ನೀಡುವ ಶಕ್ತಿ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.

ಇಂದು ಮಧ್ಯಾಹ್ನ 1 ಗಂಟೆಯ ಬಳಿಕ ಶಕ್ತಿ ಯೋಜನೆ ಜಾರಿಯಾಗಲಿದೆ. ಮಧ್ಯಾಹ್ನ 1 ಗಂಟೆಯವರೆಗೆ ಸರ್ಕಾರಿ ಬಸ್​ಗಳಲ್ಲಿ ಓಡಾಡುವ ಮಹಿಳಾ ಪ್ರಯಾಣಿಕರು ದುಡ್ಡುಕೊಟ್ಟು ಟಿಕೆಟ್ ಪಡೆಯಬೇಕು

ಗಮನಿಸಿ.. ಗಮನಿಸಿ..

– ಕರ್ನಾಟಕ ರಾಜ್ಯದ ನಿವಾಸಿಗಳಾಗಿರುವ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಪ್ರಯಾಣದ ಲಾಭ ಸಿಗಲಿದೆ.

– ಬಿಎಂಟಿಸಿ, ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಗರ ಸಾರಿಗೆ ಮತ್ತು ವೇಗದೂತ ಸಾರಿಗೆ (Express) ಬಸ್​ಗಳಲ್ಲಿ ಮಹಿಳೆಯರು ರಾಜ್ಯಾದ್ಯಂತ ಓಡಾಡಬಹುದು.

– ಎಸಿ ಸ್ಲೀಪರ್​, ನಾನ್​ ಎಸಿ ಸ್ಲೀಪರ್​, ರಾಜಹಂಸ, ವಜ್ರ, ವಾಯುವಜ್ರ, ಅಂಬಾರಿ ಒಳಗೊಂಡಂತೆ ಐಷಾರಾಮಿ ಬಸ್​ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಇಲ್ಲ.

– ಮಹಿಳಾ ಪ್ರಯಾಣಿಕರಿಗೆ ರಾಜ್ಯದೊಳಗೆ ಪ್ರಯಾಣಿಸಲು ದೂರದ ಮಿತಿ ಇರುವುದಿಲ್ಲ.

– ಅಂತಾರಾಜ್ಯ ಬಸ್​ಗಳಲ್ಲಿ (ಹೊರರಾಜ್ಯಕ್ಕೆ ಹೋಗುವ ಬಸ್​ಗಳಲ್ಲಿ) ಉಚಿತ ಪ್ರಯಾಣಕ್ಕೆ ಅವಕಾಶವಿರಲ್ಲ. ಆಯ್ದ 32 ಎನ್​ಕ್ಲೇವ್ ರೂಟ್​ಗಳಲ್ಲಿ ಮಾತ್ರ ಅಂತಾರಾಜ್ಯ ಸಂಚಾರಕ್ಕೆ ಅವಕಾಶವಿದೆ. ಅಂದರೆ, ನಮ್ಮ ರಾಜ್ಯದಿಂದ ಹೊರಟ ಬಸ್ ನೆರೆ ರಾಜ್ಯದ ಭೂಪ್ರದೇಶವನ್ನು ದಾಟಿ ಮತ್ತೆ ನಮ್ಮ ರಾಜ್ಯಕ್ಕೆ ಪ್ರವೇಶ ಮಾಡುವ ಮಾರ್ಗಗಳಲ್ಲಿ ಉಚಿತ ಸಂಚಾರಕ್ಕೆ ಅವಕಾಶವಿದೆ.

– ನಿಗದಿಗಿಂತ ಹೆಚ್ಚಿನ ತೂಕದ ಲಗ್ಗೇಜ್ ಹೊಂದಿದಲ್ಲಿ ಅದಕ್ಕೆ ಚೀಟಿ ಪಡೆಯುವುದು ಕಡ್ಡಾಯ.

– ವಾಸಸ್ಥಳದ ದಾಖಲೆಗಾಗಿ ಅಧಾರ್​ ಕಾರ್ಡ್​ ಅಥವಾ ಗುರುತಿನ ಚೀಟಿ ಅಥವಾ ಡ್ರೈವಿಂಗ್​ ಲೈಸನ್ಸ್​​ ಅಥವಾ ಸರ್ಕಾರ ನೀಡಿರುವ ಇತರೆ ಗುರುತಿನ ಚೀಟಿಗಳನ್ನು ತೋರಿಸಬಹುದು.

– ಮಹಿಳಾ ಪ್ರಯಾಣಿಕರು ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಸಿ ಮೂರು ತಿಂಗಳೊಳಗೆ ಶಕ್ತಿ ಸ್ಮಾರ್ಟ್​ ಪಡೆಯಬೇಕು. ಅಲ್ಲಿಯವರೆಗೆ ಇತರೆ ಗುರುತಿನ ಚೀಟಿಯನ್ನು ಬಳಸಲು ಅವಕಾಶ ನೀಡಲಾಗಿದೆ.