ನಾಳೆ ಅಂದರೆ ಫೆಬ್ರವರಿ 27ರಂದು ಕರ್ನಾಟಕ ವಿಧಾನಸಭೆಯಿಂದ ಸಂಸತ್ತಿನ ಮೇಲ್ಮನೆ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಈಗ ರಾಜ್ಯಸಭಾ ಸಂಸದರಾದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ನ ಡಾ ಸೈಯದ್ ನಾಸೀರ್ ಹುಸೇನ್, ಜಿ ಸಿ ಚಂದ್ರಶೇಖರ್ ಮತ್ತು ಎಲ್ ಹನುಮಂತಯ್ಯ ಅವರ ಅವಧಿ ಏಪ್ರಿಲ್ 2ರಂದು ಕೊನೆಯಾಗಲಿದೆ.
ಇವರಲ್ಲಿ ಈ ಬಾರಿ ರಾಜೀವ್ ಚಂದ್ರಶೇಖರ್ ಅವರ ಬದಲಿಗೆ ಆರ್ಎಸ್ಎಸ್ ಮುಖಂಡ ನಾರಾಯಣ ಭಾಂಡಗೆ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
ದೆಹಲಿ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಅಜಯ್ ಮಕೇನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಡಾ ಸೈಯದ್ ನಾಸೀರ್ ಹುಸೇನ್ ಮತ್ತು ಜಿ ಸಿ ಚಂದ್ರಶೇಖರ್ ಎರಡನೇ ಬಾರಿಯೂ ಟಿಕೆಟ್ ಪಡೆದಿದ್ದಾರೆ.
ಬಿಜೆಪಿ-ಜೆಡಿಎಸ್ ರಣತಂತ್ರದ ಭಾಗವಾಗಿ ಮಾಜಿ ರಾಜ್ಯಸಭಾ ಸಂಸದ ಕುಪೇಂದ್ರ ರೆಡ್ಡಿಯವರು ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ನಿಂದ ಕಣಕ್ಕಿಳಿದಿದ್ದಾರೆ.
ಖಾಲಿ ಆಗಲಿರುವ ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳಿರುವುದೇ ಈ ಬಾರಿ ರಾಜ್ಯಸಭಾ ಚುನಾವಣೆಯ ಕುತೂಹಲವನ್ನು ಹೆಚ್ಚಿಸಿದೆ.
ಹಾಗಾದರೆ ರಾಜ್ಯಸಭಾ ಸಂಸದರ ಆಯ್ಕೆ ಹೇಗೆ ಆಗುತ್ತೆ..?
ರಾಜ್ಯಸಭೆಯ ಒಟ್ಟು ಸಂಸದರ ಸಂಖ್ಯೆ 245. ಇವರಲ್ಲಿ 233 ಮಂದಿಯನ್ನು ರಾಜ್ಯಗಳ ವಿಧಾನಸಭೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಉಳಿದ 12 ಮಂದಿಯನ್ನು ರಾಷ್ಟ್ರಪತಿಗಳು ನಾಮನಿರ್ದೇಶನ ಮಾಡುತ್ತಾರೆ. ರಾಜ್ಯಸಭಾ ಸಂಸದರ ಅವಧಿ 6 ವರ್ಷ.
ಕರ್ನಾಟಕದಲ್ಲಿರುವ ಒಟ್ಟು ರಾಜ್ಯಸಭಾ ಸ್ಥಾನಗಳ ಸಂಖ್ಯೆ 12. ಪ್ರತಿ ಮೂರು ವರ್ಷಕ್ಕೊಮ್ಮೆ ಖಾಲಿಯಾಗುವ (ಸಹಜ ರೀತಿಯಲ್ಲಿ – ರಾಜೀನಾಮೆ ಅಥವಾ ನಿಧನ ಹೊರತುಪಡಿಸಿ) 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ.
ಮತದಾನದ ಹಕ್ಕು ಯಾರಿಗೆ..?
ರಾಜ್ಯಸಭಾ ಚುನಾವಣೆ ಪರೋಕ್ಷ ಚುನಾವಣೆ. ಅಂದರೆ ಜನರಿಂದ ನೇರವಾಗಿ ಆಯ್ಕೆಯಾಗಿರುವ ರಾಜ್ಯ ವಿಧಾನಸಭೆಗಳ ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಮತದಾರರಾಗಿರುತ್ತಾರೆ. ಅಂದರೆ ರಾಜ್ಯಸಭಾ ಸಂಸದರನ್ನು ಆಯ್ಕೆ ಮಾಡುವುದು ಶಾಸಕರಷ್ಟೇ.
ಕರ್ನಾಟಕದ ಲೆಕ್ಕಾಚಾರ:
ಕರ್ನಾಟಕ ವಿಧಾನಸಭೆಯ ಶಾಸಕರ ಒಟ್ಟು ಸಂಖ್ಯೆ 224. ಇವರೆಲ್ಲರಿಗೂ ಮತದಾನದ ಹಕ್ಕು ಇರುತ್ತದೆ. ಸುರಪುರ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ್ ಅವರ ನಿಧನದಿಂದ ಶಾಸಕರ ಒಟ್ಟು ಸಂಖ್ಯೆ 223 ಇಳಿದಿದೆ.
ಕರ್ನಾಟಕದಿಂದ ಫೆಬ್ರವರಿ 27ಕ್ಕೆ ರಾಜ್ಯಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಗಳು ಪಡೆಯಬೇಕಾದ ಮತ ಮತ ಮೌಲ್ಯ ಲೆಕ್ಕಾಚಾರ ಹೀಗಿದೆ:
ಚಲಾವಣೆಯಾಗುವ ಸಿಂಧು ಮತಗಳನ್ನು 100ರಿಂದ ಗುಣಿಸಿ ಚುನಾವಣೆ ನಡೆಯಲಿರುವ ಒಟ್ಟು ಸ್ಥಾನಗಳಿಗೆ 1ನ್ನು ಸೇರಿಸಿ ಭಾಗಿಸಬೇಕು ಮತ್ತು ಈ ಲೆಕ್ಕದಿಂದ ಬರುವ ಫಲಿತಾಂಶಕ್ಕೆ 1ನ್ನು ಕೂಡಿಸಬೇಕು.
(223*100/4+1)+1 = 4,461. ಅಂದರೆ ನಾಲ್ವರು ಅಭ್ಯರ್ಥಿಗಳೂ ತಲಾ 4,461 ಮತ ಮೌಲ್ಯವನ್ನು ಪಡೆಯಬೇಕು. ಒಬ್ಬ ಶಾಸಕನ ಮೊದಲ ಪ್ರಾಶ್ಯಸ್ತ್ಯದ ಮತಕ್ಕೆ ಇರುವ ಮೌಲ್ಯ 100.
ಒಬ್ಬ ಶಾಸಕ ಒಬ್ಬ ರಾಜ್ಯಸಭಾ ಅಭ್ಯರ್ಥಿಗಷ್ಟೇ ತನ್ನ ಮೊದಲನೇ ಪ್ರಾಶಸ್ತ್ಯದ ಮತ್ತು ಎರಡನೇ ಪ್ರಾಶಸ್ತ್ಯದ ಮತವನ್ನು ನೀಡಬಹುದು.
ಜೊತೆಗೆ ಪಕ್ಷ ತನ್ನ ಬಳಿ ಹೆಚ್ಚುವರಿ ಇರುವ ಮೊದಲ ಪ್ರಾಶಸ್ತ್ಯದ ಮತವನ್ನು ಮತ್ತು ಎರಡನೇ ಪ್ರಾಶಸ್ತ್ಯ ಮತವನ್ನು ಬೇರೊಂದು ಅಭ್ಯರ್ಥಿಗೆ ವರ್ಗಾವಣೆ ಮಾಡಬಹುದು.
ಉದಾಹರಣೆಗೆ 45 ಶಾಸಕರು ಒಬ್ಬ ರಾಜ್ಯಸಭಾ ಅಭ್ಯರ್ಥಿಗೆ ತಮ್ಮ ಮೊದಲ ಪ್ರಾಶಸ್ತ್ಯದ ಮತ ಹಾಕಿದರೆ ಅದರ ಮೌಲ್ಯ 4,500 ಆಗುತ್ತದೆ. ಅಂದರೆ ಅಗತ್ಯ ಮೌಲ್ಯಕ್ಕಿಂತ 39 ಮತ ಮೌಲ್ಯ ಉಳಿದುಕೊಳ್ಳುತ್ತದೆ. ಆ ಹೆಚ್ಚುವರಿ ಮತ ಮೌಲ್ಯವನ್ನು ಪಕ್ಷ ತಾನು ನಿರ್ಧರಿಸಿದ ಅಭ್ಯರ್ಥಿಗೆ ವರ್ಗಾವಣೆ ಮಾಡಬಹುದಾಗಿದೆ.