ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಏಕೈಕ ಶಾಸಕ, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ಬೆಂಗಳೂರಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದ ಭೇಟಿ ವೇಳೆ ಡಿಸಿಎಂ ಡಿಕೆಶಿವಕುಮಾರ್ ಕೂಡಾ ಇದ್ದರು. ಕೊಪ್ಪಳ ಜಿಲ್ಲಾ ಉಸ್ತುವಾರಿ ಶಿವರಾಜ್ ತಂಗಡಗಿ ಕೂಡಾ ಹಾಜರಿದ್ದರು.
ನಾಳೆ ಫೆಬ್ರವರಿ 27ರಂದು ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಅವರು ಯಾವ ಅಭ್ಯರ್ಥಿಯ ಪರವಾಗಿ ಮತ ಹಾಕುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಮೈತ್ರಿ ಕೂಟದ ಅಭ್ಯರ್ಥಿಯಾಗಿ ಜೆಡಿಎಸ್ನಿಂದ ಸ್ಪರ್ಧೆಗಿಳಿದಿರುವ ಕುಪೇಂದ್ರ ರೆಡ್ಡಿ ಅವರು ಗೆಲ್ಲುವುದಕ್ಕೆ ಜನಾರ್ದನ ರೆಡ್ಡಿಯ ಮತ ಕೂಡಾ ಅನಿವಾರ್ಯ.
ಆದರೆ ಫೆಬ್ರವರಿ 16ರಂದು ಸಿದ್ದರಾಮಯ್ಯ ತಾವು ಮಂಡಿಸಿದ್ದ ಬಜೆಟ್ನಲ್ಲಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಬಜೆಟ್ ಬಳಿಕ ರೆಡ್ಡಿ ಅವರು ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಿದ್ದರಾಮಯ್ಯ ವಿಶೇಷ ಒತ್ತು ಕೊಟ್ಟಿದ್ದಾರೆ ಎಂದು ಹೊಗಳಿದ್ದರು.