ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದ್ದು ಧಾರಾಕಾರ ಮಳೆಯಾಗುತ್ತಿದೆ.
ರಾಯಚೂರು ಜಿಲ್ಲೆಯ ರಾಮಟ್ನಾಳ್ನಲ್ಲಿ ಅತ್ಯಧಿಕ 184 ಮಿಲಿ ಮೀಟರ್ ಮಳೆಯಾಗಿದೆ. ಕೊಡಗು ಜಿಲ್ಲೆಯ ಗುಡ್ಡೆಹೊಸೂರು ಗ್ರಾಮದಲ್ಲಿ 101 ಮಿಲಿ ಮೀಟರ್, ಮೈಸೂರು ಜಿಲ್ಲೆಯ ಕೊಪ್ಪದಲ್ಲಿ 96 ಮಿಲಿ ಮೀಟರ್, ಕಂಬಿಬಾನೆಯಲ್ಲಿ 93.5 ಮಿಲಿ ಮೀಟರ್ ಮಳೆಯಾಗಿದೆ. ಕೊಡಗು ಜಿಲ್ಲೆಯ 92 ಮಿಲಿ ಮೀಟರ್ ಮಳೆಯಾಗಿದೆ.
ಮಲೆನಾಡು ಒಳಗೊಂಡಂತೆ ದಕ್ಷಿಣ ಒಳನಾಡು ಭಾಗದಲ್ಲಿ ಆಗುತ್ತಿರುವ ಭಾರೀ ಮಳೆಯ ಕಾರಣದಿಂದ ಬಿಸಿಲ ಬೇಗೆ ಕೂಡಾ ಇಳಿಮುಖವಾಗಿದೆ.
ಹಾಸನ ಜಿಲ್ಲೆಯ ಬಿಕ್ಕೋಡುವಿನಲ್ಲಿ ಅತ್ಯಂತ ಕಡಿಮೆ ಉಷ್ಣಾಂಶ ದಾಖಲಾಗಿದೆ. ಬಿಕ್ಕೋಡುವಿನಲ್ಲಿ 18.5 ಡಿಗ್ರಿ ಸೆಲ್ಸಿಯಸ್, ಸಕಲೇಶಪುರದಲ್ಲಿ 18.9 ಡಿಗ್ರಿ ಸೆಲ್ಸಿಯಸ್, ಚಿಕ್ಕಮಗಳೂರು ಜಿಲ್ಲೆಯ ವಸ್ತಾರೆಯಲ್ಲಿ 18.6 ಡಿಗ್ರಿ ಸೆಲ್ಸಿಯಸ್, ಉಡುಪಿ ಜಿಲ್ಲೆಯ ವಂಡ್ಸೆಯಲ್ಲಿ 18.8 ಡಿಗ್ರಿ ಸೆಲ್ಸಿಯಸ್ ಮತ್ತು ಬೆಂಗಳೂರು ನಗರದ ದಾಸನಪುರದಲ್ಲಿ 19.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಇವತ್ತೂ ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಗದಗ, ಹಾಸನ, ಹಾವೇರಿ, ಕಲಬುರಗಿ, ಕೊಡಗು, ಕೋಲಾರ, ಕೊಪ್ಪಳ, ಬೆಂಗಳೂರು ನಗರ ಜಿಲ್ಲೆಯಲ್ಲಿ ಉಷ್ಣಾಂಶ ಕಡಿಮೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ ಮತ್ತು ವಿಜಯಪುರದಲ್ಲೂ ಉಷ್ಣಾಂಶ ಇಳಿಕೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.