9 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ಸುರಕ್ಷತಾ ಹೆಲ್ಮೆಟ್ ಹಾಗೂ ಮಕ್ಕಳ ಸುರಕ್ಷತಾ ಸಾಧನಗಳು ಲಭ್ಯವಾಗುವಂತೆ ಮಾಡಲು ತುರ್ತು ಕ್ರಮ ಕೈಗೊಳ್ಳಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಅರ್ಚನಾ ಭಟ್ ಎಂಬುವರು ಸಲ್ಲಿಸಿದ್ದ ಪಿಐಎಲ್ ಕುರಿತಾಗಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ,
ವಾದ-ಪ್ರತಿವಾದ ಆಲಿಸಿತು. ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ 6 ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಜನವರಿಗೆ ಮುಂದೂಡಿತು.
ಪಿಐಎಲ್ ನಲ್ಲಿ-2022ರ ಕೇಂದ್ರ ಮೋಟಾರು ವಾಹನ ನಿಯಮ 138 (7) ಮತ್ತು ಮೋಟಾರು ವಾಹನ ಕಾಯಿದೆ ಸೆಕ್ಷನ್ 129, 137 ಮತ್ತು 194 ಅನ್ನು ಅಕ್ಷರಶಃ ಜಾರಿಗೊಳಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಅಂತ ಕೋರಲಾಗಿದೆ. ಜೊತೆಗೆ ರಾಜ್ಯದಲ್ಲಿ ಚಿಕ್ಕ ಮಕ್ಕಳಿಗೆ ಅಗತ್ಯ ಹೆಲ್ಮೆಟ್ಗಳು ದೊರಕುತ್ತಿಲ್ಲ. ಹಾಗಾಗಿ, ಅವು ಲಭ್ಯವಾಗುವಂತೆ ಮಾಡಬೇಕು. ಮೋಟಾರು ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವಾಗ ತಿದ್ದುಪಡಿ ನಿಯಮದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ, ಅದನ್ನು ಜಾರಿಗೊಳಿಸಲು ಸರಕಾರ ಕ್ರಮ ಗೊಂಡಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.