ಅಕ್ಷಯ್ ಕುಮಾರ್, ಮುಖ್ಯ ಸಂಪಾದಕರು
ಕರ್ನಾಟಕದಲ್ಲಿ ಬಿಜೆಪಿ ಗತ ಇತಿಹಾಸ, ಗತ ವೈಭವ ಮರುಕಳಿಸಿದೆ. ಕರ್ನಾಟಕ ರಾಜಕಾರಣದಲ್ಲಿ ಹಲವು ಮೊದಲುಗಳನ್ನು ಕೊಟ್ಟ ಅಪರೂಪದ ಹೆಗ್ಗಳಿಕೆ ಇರುವ ಕರ್ನಾಟಕ ಬಿಜೆಪಿ ನಾಯಕರು ತಾವು ತಮ್ಮ ಮೊದಲ ಆಡಳಿತದಲ್ಲಿ ಕೊಟ್ಟ ಆ ಮೊದಲುಗಳನ್ನು ತಮ್ಮ ಎರಡನೇ ಅವಧಿಯಲ್ಲೂ ಮುಂದುವರಿಸಿಕೊಂಡು ಹೋಗುವ ಮೂಲಕ ಇತಿಹಾಸವನ್ನು ನೆನೆಪಿಸಿದ್ದಾರೆ.
2008ರಲ್ಲಿ ಯಡಿಯೂರಪ್ಪ ಪರ ಇದ್ದ ಅನುಕಂಪದ ಅಲೆ ಮತ್ತು ಬಿಜೆಪಿಗೆ ಒಂದು ಬಾರಿಯಾದರೂ ಅವಕಾಶ ಕೊಡೋಣ ಎಂದು ಮತದಾರರು ಭಾವಿಸಿದ್ದರ ಪರವಾಗಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಬಳಿಕ ಆಪರೇಷನ್ ಕಮಲ ಮೂಲಕ ಸರ್ಕಾರ ರಚಿಸಿದ ಬಿಜೆಪಿ 2013ರಷ್ಟೊತ್ತಿಗೆ ಕರ್ನಾಟಕ ರಾಜಕಾರಣದಲ್ಲಿ ಹಲವು ಮೊದಲುಗಳನ್ನು ಕೊಟ್ಟಿತು.
ಮೊದಲ ಬಾರಿಗೆ ಶಾಸಕರೊಬ್ಬರ ಬಂಧನ:
2009ರಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸರು ಕೆ ಜಿ ಎಫ್ ಕ್ಷೇತ್ರದ ಬಿಜೆಪಿ ಶಾಸಕ ವೈ ಸಂಪಂಗಿ ಅವರನ್ನು 50 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗಲೇ ರೆಡ್ಹ್ಯಾಂಡಾಗಿ ಬಂಧಿಸಿದರು.
ಶಾಸಕರೊಬ್ಬರು ಲಂಚ ಸ್ವೀಕಾರ ಪ್ರಕರಣದಲ್ಲಿ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದಿದ್ದು ಕರ್ನಾಟಕ ರಾಜಕೀಯ ಇತಿಹಾಸದಲ್ಲೇ ಅದೇ ಮೊದಲು.
ಭೂವ್ಯಾಜ್ಯಕ್ಕೆ ಸಂಬಂಧಪಟ್ಟಂತೆ ದಾಖಲಾಗಿದ್ದ ಪೊಲೀಸ್ ಪ್ರಕರಣವನ್ನು ರದ್ದುಗೊಳಿಸಲು ಹುಸೈನ್ ಮೊಯಿನ್ ಫಾರೂಕ್ ಎಂಬವರಿಂದ ಸಂಪಂಗಿ 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಲಂಚ ಹಣದ ಭಾಗವಾಗಿ 50 ಸಾವಿರ ರೂಪಾಯಿ ಸ್ವೀಕರಿಸುತ್ತಿದ್ದಾಗ ರೆಡ್ಹ್ಯಾಂಡಾಗಿ ಲೋಕಾಯುಕ್ತರ ಪೊಲೀಸರ ಕೈಗೆ ಶಾಸಕ ಸಂಪಂಗಿ ಸಿಕ್ಕಿಬಿದ್ದರು.
ಇದಾದ ಬಳಿಕ ಇದೇ ಪ್ರಕರಣದಲ್ಲಿ ಸಾಕ್ಷಿದಾರರು ಮತ್ತು ದೂರುದಾರರಿಗೆ ಬೆದರಿಕೆ ಹಾಕಿದರು ಎಂಬ ಪ್ರಕರಣದಲ್ಲಿ ಸಂಪಂಗಿಗೆ ನೀಡಿದ್ದ ಜಾಮೀನನ್ನು ರದ್ದುಗೊಳಿಸಿದ್ದ ಲೋಕಾಯುಕ್ತ ಕೋರ್ಟ್ 2011ರಲ್ಲಿ ಸಂಪಂಗಿ ಬಂಧನಕ್ಕೆ ಆದೇಶಿಸಿತು, ಸಂಪಂಗಿ ಮತ್ತೆ ಜೈಲಿಗೆ ಹೋದರು.
2012ರಲ್ಲಿ ಲಂಚ ಸ್ವೀಕಾರ ಪ್ರಕರಣದಲ್ಲಿ ಸಂಪಂಗಿ ವಿರುದ್ಧ ಆರೋಪ ಸಾಬೀತಾಗಿ ಮೂರುವರೆ ವರ್ಷ ಜೈಲು ಶಿಕ್ಷೆಗೆ ಒಳಗಾದರು.
ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಮಗ:
2008ರಲ್ಲಿ ರಚಿತವಾಗಿದ್ದ ಯಡಿಯೂರಪ್ಪ ಸರ್ಕಾರದಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಐಟಿ-ಬಿಟಿ ಸಚಿವರಾಗಿದ್ದರು. ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ) ಮೂಲಕ ಭೂ ಸ್ವಾಧೀನದಲ್ಲಿ ಹಗರಣ ಎಸಗಿದ್ದಾರೆ ಎಂಬ ಆರೋಪದಡಿ 2011ರ ಆಗಸ್ಟ್ನಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಬಂಧನವಾಯಿತು.
ಕರ್ನಾಟಕ ಲೋಕಾಯುಕ್ತ ಪೊಲೀಸರು ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಅವರ ಮಗ ಬಿಬಿಎಂಪಿ ಪಾಲಿಕೆ ಸದಸ್ಯರಾಗಿದ್ದ ಕಟ್ಟಾ ಜಗದೀಶ್, ಕಟ್ಟಾ ಕುಟುಂಬದ ಸೃಷ್ಟಿಸಿದ್ದ ಇಟಾಸ್ಕಾ ಕಂಪನಿ ಎಂಡಿ ಶ್ರೀನಿವಾಸ್ರನ್ನು ಬಂಧಿಸಿದ್ದರು.
ಈ ಮೂಲಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ 2ನೇ ಮತ್ತು 3ನೇ ಬಿಜೆಪಿ ನಾಯಕರೆನಿಸಿಕೊಂಡರು. 2ನೇ ಶಾಸಕರಾಗಿದ್ದರು.
ಯಡಿಯೂರಪ್ಪ ಮತ್ತು ಕೃಷ್ಣಯ್ಯ ಶೆಟ್ಟಿ:
ಭೂ ಹಗರಣ ಆರೋಪದಲ್ಲಿ ಅಕ್ಟೋಬರ್, 2011ರಲ್ಲಿ ಲೋಕಾಯುಕ್ತ ಕೋರ್ಟ್ ಆಗ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಬಂಧನಕ್ಕೆ ಸೂಚಿಸಿತ್ತು. ಯಡಿಯೂರಪ್ಪ ಲೋಕಾಯುಕ್ತ ಪೊಲೀಸರಿಂದ ಬಂಧಿತರಾದರು. ಅವರ ಜೊತೆಗೆ ಸಚಿವರಾಗಿದ್ದ ಕೃಷ್ಣಯ್ಯ ಶೆಟ್ಟಿ ಕೂಡಾ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.
ಈ ಮೂಲಕ ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ಹಗರಣದಲ್ಲಿ ಬಂಧಿತರಾಗಿ ಜೈಲು ಸೇರಿ ಇತಿಹಾಸ ಸೃಷ್ಟಿಯಾಯಿತು.
ಕರ್ನಾಟಕಕ್ಕೆ ಕಾಲಿಟ್ಟಿತ್ತು ಅಡ್ವಾಣಿ ಯಾತ್ರೆ:
ರಾಜಕೀಯ ವೈಚಿತ್ರ ಇದಕ್ಕಿಂತ ಬೇರೆ ಇರಲಿಕ್ಕಿಲ್ಲ. ಒಂದು ಕಡೆ ಪಕ್ಷದ ನಾಯಕ, ಮುಖ್ಯಮಂತ್ರಿಯೇ ಜೈಲು ಸೇರಿದ್ದರೆ ಇತ್ತ ಬಿಜೆಪಿ ನಂಬರ್ 1 ರಾಷ್ಟ್ರೀಯ ನಾಯಕರಾಗಿದ್ದ ಅಡ್ವಾಣಿ ಅವರ ರಾಷ್ಟ್ರವ್ಯಾಪಿ ಜನಚೇತನ ಯಾತ್ರೆ ಕೇರಳ ಮೂಲಕ ಕರ್ನಾಟಕಕ್ಕೆ ಕಾಲಿಟ್ಟಿತ್ತು. ಅಂದಹಾಗೆ ಅಡ್ವಾಣಿ ಆಗ ಯಾತ್ರೆಯನ್ನು ಕೈಗೊಂಡಿದ್ದು ಭ್ರಷ್ಟಾಚಾರ ವಿರುದ್ಧ, ಅವರದ್ದೇ ಪಕ್ಷದ ಮುಖ್ಯಮಂತ್ರಿ, ಶಾಸಕರು ಹಗರಣಗಳಲ್ಲಿ ಜೈಲಿಗೆ ಹೋಗಿದ್ದಾಗ.
ಮರುಕಳಿಸಿದ ಇತಿಹಾಸ:
ಇತಿಹಾಸ ಮತ್ತೆ ಮರುಕಳಿಸಿದೆ. ಕರ್ನಾಟಕ ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆಯಲ್ಲಿ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಲಾಕ್ ಆಗಿದ್ದಾರೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದಲ್ಲಿ ಟೆಂಡರ್ ಮಂಜೂರಾತಿಗಾಗಿ ಪುತ್ರನ ಮೂಲಕ ಲಂಚ ಪಡೆದ ಪ್ರಕರಣದಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ.
ಸದ್ಯ ತಲೆಮರೆಸಿಕೊಂಡಿರುವ ಮಾಡಾಳು ಅವರ ಬಂಧನ ಬಹುತೇಕ ಖಚಿತ. ಎ1 ಆರೋಪಿ ಆಗಿರುವ ಕಾರಣ ಜಾಮೀನು ಸಿಗುವುದು ಕಷ್ಟ ಆಗಬಹುದು. ಅವರೇ ನಿಗಮದ ಅಧ್ಯಕ್ಷರಾಗಿರುವ ಕಾರಣ, ನಿಗಮದ ಟೆಂಡರ್ಗಾಗಿಯೇ ಲಂಚ ಸ್ವೀಕಾರ ಮಾಡಲಾಗಿರುವ ಕಾರಣ, ನಿಗಮದ ಅಧ್ಯಕ್ಷರಾಗಿರುವ ಶಾಸಕರ ಪರವಾಗಿ ಮಗನೇ ಲಂಚ ಪಡೆದಿರುವ ಕಾರಣ ಮತ್ತು 2ನೇ ಆರೋಪಿ ಆಗಿರುವ ಲಂಚ ಸ್ವೀಕಾರ ಮಾಡಿದ್ದ ಪ್ರಕಾಶ್ ಮಾಡಾಳ್ ಬಂಧಿತನಾಗಿರುವ ಕಾರಣ ಶಾಸಕರ ಬಂಧನ ಅನಿವಾರ್ಯ ಆಗಲಿದೆ.
2011ರಲ್ಲಿ ಅಡ್ವಾಣಿ ಭ್ರಷ್ಟಾಚಾರದ ವಿರುದ್ಧ ಯಾತ್ರೆ ಕೈಗೊಂಡಂತೆ ಈಗ ಬಿಜೆಪಿ ರಾಷ್ಟ್ರೀಯ ನಾಯಕ (ನಂಬರ್ 2) ಅಮಿತ್ ಶಾ ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತವನ್ನಾಗಿ ಮಾಡಲು ಮೋದಿ ಅವರನ್ನು ನಂಬಿ, ಯಡಿಯೂರಪ್ಪ ಅವರನ್ನು ನಂಬಿ ಮತ ಹಾಕಿ ಎಂದು ಭಾಷಣ ಮಾಡಿದ್ದಾರೆ.
ADVERTISEMENT
ADVERTISEMENT