ವಿಶ್ಲೇಷಣೆ: ಅಕ್ಷಯ್ ಕುಮಾರ್, ಮುಖ್ಯ ಸಂಪಾದಕರು, ಪ್ರತಿಕ್ಷಣ
ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಈ ಬಾರಿ ಭಾರೀ ಕುತೂಹಲ ಕೆರಳಿಸಿರುವ ವಿಧಾನಸಭಾ ಕ್ಷೇತ್ರ ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರ.
ಇಂಧನ ಸಚಿವ ಸುನಿಲ್ ಕುಮಾರ್ ಪ್ರತಿನಿಧಿಸುತ್ತಿರುವ ವಿಧಾನಸಭಾ ಕ್ಷೇತ್ರ.
1999ರ ವಿಧಾನಸಭಾ ಚುನಾವಣೆವರೆಗೆ ಕಾಂಗ್ರೆಸ್ ಹಿಡಿತದಲ್ಲಿದ್ದ ಕ್ಷೇತ್ರ. 2004ರಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಸುನಿಲ್ ಕುಮಾರ್ ಶಾಸಕರಾದರು.
2008ರಲ್ಲಿ ಗೋಪಾಲ ಭಂಡಾರಿಯವರು ಮತ್ತೆ ಕಾಂಗ್ರೆಸ್ ಶಾಸಕರಾಗಿ ವಿಧಾನಸಭೆಗೆ ಎರಡನೇ ಬಾರಿಗೆ ಆಯ್ಕೆಯಾದರು.
ಆದರೆ 2013 ಮತ್ತು 2018ರಲ್ಲಿ ಸುನಿಲ್ ಕುಮಾರ್ ಅವರು ಸತತವಾಗಿ ಎರಡು ಬಾರಿ ಗೆದ್ದರು.
ಸುನಿಲ್ ಕುಮಾರ್‌ಗೆ ಪ್ರಮೋದ್ ಮುತಾಲಿಕ್ ಸವಾಲು:
ಮೂರು ಬಾರಿ ಶಾಸಕರಾಗಿ ಇಂಧನ ಸಚಿವರಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸುನಿಲ್ ಕುಮಾರ್ ಅವರಿಗೆ ಈ ಬಾರಿ ಹಿಂದುತ್ವವೇ ಸವಾಲಾಗಿದೆ.
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಈ ಮೂಲಕ ಆರಂಭದಲ್ಲಿ ಹಿಂದುತ್ವದ ಸಂಘಟನೆಗಳೊಂದಿಗೆ ಗುರುತಿಸಿಕೊಂಡು ಹಿಂದುತ್ವದ ಮೂಲಕವೇ ಆರಂಭಿಕ ಜನಪ್ರಿಯತೆ ಪಡೆದು ಅದರ ರಾಜಕೀಯ ಲಾಭವನ್ನು ಪಡೆದಿರುವ ಸುನಿಲ್ ಕುಮಾರ್ ಅವರಿಗೆ ಹಿಂದುತ್ವದ ಪ್ರಖರ ಮುಖ ಮುತಾಲಿಕ್ ಅವರೇ ಸವಾಲಾಗಿದ್ದಾರೆ.
ಮುತಾಲಿಕ್ ಚುನಾವಣಾ ಸೇನೆಯಲ್ಲಿ 2 ಸಾವಿರ ಕಾರ್ಯಕರ್ತರ ಪಡೆ:
ಕಾರ್ಕಳದಲ್ಲಿ ಚುನಾವಣಾ ಸ್ಪರ್ಧೆ ಹಿನ್ನೆಲೆಯಲ್ಲಿ ಮುತಾಲಿಕ್ ಅವರು ಸಿದ್ಧತೆ ಆರಂಭಿಸಿಯಾಗಿದೆ. ಕಾರ್ಕಳ ಕ್ಷೇತ್ರದಲ್ಲಿ ಹಲವು ಸುತ್ತಿನ ಸಭೆಗಳನ್ನೂ ನಡೆಸಿ ಆಗಿದೆ. ಮೂಲಗಳ ಪ್ರಕಾರ 2 ಸಾವಿರ ಕಾರ್ಯಕರ್ತರ ಪಡೆ ಮುತಾಲಿಕ್ ಅವರನ್ನು ಗೆಲ್ಲಿಸುವ ಸಲುವಾಗಿ ಅಖಾಡಕ್ಕಿಳಿಯಲು ಅಣಿಯಾಗಿದೆ.
ಹಿಂದುತ್ವ ಮರೆತಿದ್ದು, ದೂರ ಮಾಡಿದ್ದೇ ಮುಳ್ಳಾಗುತ್ತಾ..?
ಈಗ ಸಚಿವರಾಗಿರುವ ಸುನೀಲ್ ಕುಮಾರ್ ಒಂದು ಕಾಲದಲ್ಲಿ ಹಿಂದುತ್ವದ ಪ್ರಖರ ಮುಖವಾಗಿದ್ದರು. ಅವರ ಆರಂಭದ ಜನಪ್ರಿಯತೆಗೆ ಹಿಂದುತ್ವವೇ ಅಡಿಪಾಯವಾಗಿತ್ತು. ಆದರೆ ರಾಜಕೀಯ ಅಧಿಕಾರ ಸಿಕ್ಕ ಬಳಿಕ ಅಂದರೆ ಶಾಸಕರಾದ ಬಳಿಕ ಸುನಿಲ್ ಕುಮಾರ್ ತಾವು ಬೆಳೆದು ಬಂದ ಹಾದಿಯನ್ನೇ ಮರೆತರೆಂಬ ಸಿಟ್ಟು ಹಿಂದೂ ಸಂಘಟನೆಗಳ ನಾಯಕರಲ್ಲಿದೆ.
ಆರಂಭದಲ್ಲಿ ಬಜರಂಗದಳ ರಾಜ್ಯ ಸಂಚಾಲಕರಾಗಿದ್ದರು ಸುನಿಲ್ ಕುಮಾರ್. ಆದರೆ ರಾಜಕೀಯ ಅಧಿಕಾರ ಸಿಕ್ಕ ಬಳಿಕ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೂ ಸಂಘಟನೆಗಳ ಶಕ್ತಿಯನ್ನೇ ಕುಂದಿಸಿದ್ದು ಇದೇ ಸುನಿಲ್ ಕುಮಾರ್. ಹಿಂದೂ ಸಂಘಟನೆಗಳನ್ನು ಸಂಪೂರ್ಣ ದುರ್ಬಲಗೊಳಿಸಿ ಕಾರ್ಕಳದಲ್ಲಿ ನನ್ನನ್ನು ಬಿಟ್ಟರೇ ಯಾರೂ ಪರ್ಯಾಯ ಇರಕೂಡದು ಎಂಬಂತೆ ಹಿಂದೂ ಸಂಘಟನೆಗಳನ್ನು ಸಚಿವ ಸುನಿಲ್ ಕುಮಾರ್ ಹೊಸಕಿ ಹಾಕಿದ್ದರು ಎಂಬ ಆರೋಪ ಇದೆ.
ಇದಕ್ಕೆ ಪೂರಕವಾಗಿ ಕಳೆದ ಚುನಾವಣೆಯ ವೇಳೆ ತಮ್ಮ ರಾಜಕೀಯ ಪ್ರಭಾವ ಬಳಸಿ ಹಿಂದೂ ಸಂಘಟನೆಯೊಬ್ಬರ ನಾಯಕರೊಬ್ಬರ ಮೇಲೆ ಗೂಂಡಾ ಕಾಯ್ದೆಯಡಿ ಕೇಸ್ ಹಾಕಿಸಿ ಅವರನ್ನು ಜೈಲಿಗಟ್ಟಿದರು ಎಂಬ ಆರೋಪ ಸುನಿಲ್ ಕುಮಾರ್ ವಿರುದ್ಧ ಹರಿದಾಡಿತ್ತು.
ನಂತರ ಆ ಹಿಂದೂ ಮುಖಂಡ ಆ ಹಿಂದೂ ಸಂಘಟನೆಯಿಂದ ಹೊರಬಂದು ಇನ್ನೊಂದು ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡರು. ಅತ್ತೂರು ಪರ್ಪಲೆ ಗಿರಿ ವಿವಾದ ವೇಳೆಯೂ ಸಚಿವ ಸುನಿಲ್ ಕುಮಾರ್ ಮೌನವಹಿಸಿದ್ದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಕಾರಣವಾಗಿತ್ತು.
ಹಿಂದೂ ಸಂಘಟನೆಗಳು ದೂರ:
ಈಗ ಸಚಿವ ಸುನಿಲ್ ಕುಮಾರ್ ಅವರಿಗೂ ಕಾರ್ಕಳದಲ್ಲಿನ ಹಿಂದೂ ಸಂಘಟನೆಗಳಿಗೂ ಅಷ್ಟಕ್ಕಷ್ಟೇ. ಈಗ ಉಡುಪಿ ಜಿಲ್ಲೆಯಲ್ಲಿ ಬಜರಂಗ ದಳ ಪ್ರಭಾವ ಕುಗ್ಗಿ ಹಿಂದೂ ಜಾಗರಣ ವೇದಿಕೆ ಬಲಿಷ್ಠಗೊಳ್ಳಲು ಕಾರಣ ಸಚಿವ ಸುನಿಲ್ ಕುಮಾರ್ ಅವರ ವರ್ತನೆಯೇ ಕಾರಣ ಎನ್ನುವ ಮಾತಿದೆ. ಬಜರಂಗ ದಳದಲ್ಲಿ ಆರಂಭದಲ್ಲಿದ್ದ ನಾಯಕರು ಸಚಿವ ಸುನಿಲ್ ಕುಮಾರ್ ಮತ್ತು ಸಂಘ ಪರಿವಾರದ ವಿರುದ್ಧ ಸಿಡಿದೆದ್ದು ಈಗ ಹಿಂದೂ ಜಾಗರಣ ವೇದಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಹೀಗಾಗಿ ಈಗ ಸುನಿಲ್ ಕುಮಾರ್ ಅವರಿಗೆ ಕಾರ್ಕಳ ಕ್ಷೇತ್ರದಲ್ಲಿ ಹಿಂದೂ ಸಂಘಟನೆಗಳ ಬೆಂಬಲ ಅಷ್ಟಾಗಿ ಇಲ್ಲ.
ಗೋ ಕಳ್ಳತನ ಹೆಚ್ಚಳ:
ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಕಾರ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗೋ ಕಳ್ಳತನ ಅಧಿಕವಾಗಿದೆ. ಬಿಜೆಪಿ ಸರ್ಕಾರದಲ್ಲೇ ಅದರಲ್ಲೂ ಸಚಿವ ಸುನಿಲ್ ಕುಮಾರ್ ಅವರಂತ ಪ್ರಭಾವಿಗಳ ಕ್ಷೇತ್ರದಲ್ಲೇ ಗೋವುಗಳಿಗೆ ರಕ್ಷಣೆ ಇಲ್ಲವಾದರೇ ಹೇಗೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿವೆ. ಗೋ ಕಳ್ಳತನ ಹೆಚ್ಚಳವೂ 2023ರ ವಿಧಾನಸಭಾ ಚುನಾವಣೆಗೆ ಚುನಾವಣೆ ವಿಷಯ ಆಗಬಹುದು.
ಹಿಜಾಬ್ ವಿವಾದದಿಂದಲೂ ಅಂತರ:
ಈ ವರ್ಷ ಹಿಜಾಬ್ ವಿವಾದ ಹುಟ್ಟಿಕೊಂಡಿದ್ದೇ ಉಡುಪಿ ಜಿಲ್ಲೆಯಲ್ಲಿ. ಆದರೆ ಅದೇ ಜಿಲ್ಲೆಯ ಶಾಸಕರೂ ಆಗಿರುವ ಸುನಿಲ್ ಕುಮಾರ್ ಅವರ ಕ್ಷೇತ್ರದಲ್ಲಿ ಹಿಜಾಬ್ ವಿವಾದ ಆಗಲೇ ಇಲ್ಲ. ಹಿಜಾಬ್ ಬಗ್ಗೆ ಚಕಾರ ಎತ್ತದಂತೆ ಹಿಂದೂ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದರಂತೆ ಸುನಿಲ್ ಕುಮಾರ್. ಈ ಮೂಲಕ ಅಲ್ಪಸಂಖ್ಯಾತರ ಮತಗಳನ್ನೂ ಸೆಳೆಯುವ ಪ್ರಯತ್ನ ಮಾಡಿದ್ದರು.
ಸೋಲ್ತಾರಾ ಸುನಿಲ್ ಕುಮಾರ್..?
ಆರಂಭದಲ್ಲಿಯೇ ಹೇಳಿದಂತೆ ಹಿಂದೂ ಸಂಘಟನೆಗಳು ಈಗ ಸುನಿಲ್ ಕುಮಾರ್ ಅವರ ಜೊತೆಗೆ ಇಲ್ಲ. ಈಗ ಇವರೆಲ್ಲರೂ ಮುತಾಲಿಕ್ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಸುನಿಲ್ ಕುಮಾರ್‌ಗೆ ಈ ಬಾರಿ ಪಾಠ ಕಲಿಸಲೇಬೇಕೆಂದು ಹಠ ಹಿಡಿದು ಕೂತಿದ್ದಾರೆ.
ಒಂದು ವೇಳೆ ಮುತಾಲಿಕ್ ಅವರು ಹಿಂದುತ್ವದ ಮತಗಳನ್ನು ಪಡೆದರೂ ಸುನಿಲ್ ಕುಮಾರ್ದ ಸೋಲ್ತಾರೆ ಎಂಬ ಮಾತು ಈಗ ಕಾರ್ಕಳ ಕ್ಷೇತ್ರದಲ್ಲಿ ಬಲವಾಗಿದೆ. ಹೀಗಾಗಿ ಸಚಿವರೂ ತಮ್ಮ ಕ್ಷೇತ್ರವನ್ನು ಬಿಟ್ಟು ಕದಲುತ್ತಿಲ್ಲ.
ಭ್ರಷ್ಟಾಚಾರದ ಕಳಂಕ:
ಸಚಿವ ಸುನಿಲ್ ಕುಮಾರ್ ಅವರ ವಿರುದ್ಧ ಭ್ರಷ್ಟಾಚಾರದ ಕಳಂಕ ಕೂಡಾ ಕ್ಷೇತ್ರದಲ್ಲಿ ಅವರ ಜನಪ್ರಿಯತೆಯನ್ನು ಕುಗ್ಗಿಸಿದೆ. ತಮ್ಮ ಕಚೇರಿಯನ್ನು ಕಟ್ಟಲು ಸರ್ಕಾರದ ಕಾಮಗಾರಿಗೆ ಮೀಸಲಿಟ್ಟಿದ್ದ ಸಿಮೆಂಟ್ ಬಳಸಿಕೊಂಡರು ಎಂಬ ಆರೋಪವನ್ನು ಕಾಂಗ್ರೆಸ್ ಮಾಡಿತ್ತು.
ADVERTISEMENT
ADVERTISEMENT