ಮದುವೆ ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಕಾರ್ಯಕರ್ತರು ಕನ್ನಡಿಗರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಧಾಮಣೆ ತಾಲೂಕಿನಲ್ಲಿ ವರದಿಯಾಗಿದೆ.
ಈ ಘಟನೆಯಲ್ಲಿ ವರ ಸಿದ್ದು ಸೈಬಣ್ಣವರ, ವಧು ರೇಷ್ಮಾ ಸೇರಿ ಐವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ನಾವು ಮೆರವಣಿಗೆ ಮೂಲಕ ವಧು–ವರನನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದೆವು. ಕನ್ನಡ ಬಾವುಟ ಹಿಡಿದುಕೊಂಡು ಕನ್ನಡ ಗೀತೆಗೆ ಕುಣಿಯುತ್ತಿದ್ದೆವು. ಇದನ್ನು ನೋಡಿ ಸಹಿಸಲಾಗದ ಎಂಇಎಸ್‌ನವರು ಗಲಾಟೆ ಮಾಡಿದ್ದಾರೆ ಎಂದು ಗಾಯಗೊಂಡವರು ಆರೋಪಿಸಿದ್ದಾರೆ. ಅಲ್ಲದೇ, ಈ ಸಂಬಂಧ ಪೊಲೀಸರಿಗೆ ದೂರು ನೀಡಿದರೂ ಅವರು ಸ್ಪಂದಿಸುತ್ತಿಲ್ಲ ಎಂದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು, ಮದುವೆಯ ಮೆರವಣಿಗೆಯ ವೇಳೆ ಪಟಾಕಿಗಳನ್ನು ಸಿಡಿಸಲಾಗುತ್ತಿತತ್ಉ ಎಂದು ತಿಳಿದುಬಂದಿದೆ. ಎಂಎಎಸ್ನವರು ಹಲ್ಲೆ ನಡೆಸಿರುವ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಹೇಳಿದ್ದಾರೆ.
ಅಣ್ಣನ ಮದುವೆ ಮೆರವಣಿಗೆಯಲ್ಲಿ ಕನ್ನಡ ಧ್ವಜ ಹಿಡಿದು ಕುಣಿಯುತ್ತಿದ್ದೆವು. ಈ ವೇಳೆ ಎಂಇಎಸ್‌ನವರು ಗಲಾಟೆ ತೆಗೆದು ಬಡಿಗೆಯಲ್ಲಿ ಒಡೆದಿದ್ದಾರೆ. ನಮ್ಮ ಮನೆ ಮುಂದೆ ಚನ್ನಮ್ಮನ ಫಲಕ ಹಾಕಿದ್ದೇವೆ. ಹೀಗಾಗಿ, ಪದೇ ಪದೇ ಗಲಾಟೆ ತೆಗೆಯುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಚಿಕಿತ್ಸೆ ಪಡೆಯುತ್ತಿರುವ ವರನ ಸಹೋದರ ಭರಮಾ ಸೈಬಣ್ಣವರ ಆರೋಪಿಸಿದ್ದಾರೆ.