ಹಣಕಾಸು ವೈಷ್ಯಮ್ಯ: 6 ವರ್ಷ ಜೊತೆಗಿದ್ದ ಆಪ್ತನಿಂದಲೇ ಜೈನ ಮುನಿ ಹತ್ಯೆ

ಕೊಟ್ಟಿದ್ದ 6 ಲಕ್ಷ ರೂಪಾಯಿ ಸಾಲವನ್ನು ವಾಪಸ್​ ಕೇಳಿದ್ದ ಜೈನ ಮುನಿ (Jain Monk)ಯವರನ್ನು ವಿದ್ಯುತ್​ ಶಾಕ್​ ಕೊಟ್ಟು ಕೊಲೆಗೈದು ಬಳಿಕ ರುಂಡ ಕತ್ತರಿಸಿ ಖಾಲಿ ಬಿದ್ದಿದ್ದ ಬೋರ್​ವೆಲ್​ ಎಸೆದ ಭೀಕರ ಕೃತ್ಯ ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿಯಲ್ಲಿ (Chikkodi) ನಡೆದಿದೆ.

ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ( Jain Monk Kamakumar Nandi Maharaja)ಅವರ ಶವ ಕತ್ತರಿಸಿದ ಸ್ಥಿತಿಯಲ್ಲಿ ರಾಯಭಾಗ ತಾಲೂಕಿನ ಕಟಕಬಾವಿಯಲ್ಲಿರುವ ಕೊಳವೆಬಾವಿಯಲ್ಲಿ ಶನಿವಾರ ಪತ್ತೆಯಾಗಿದೆ.

ಮುನಿಗಳ ಆಶ್ರಮದಲ್ಲೇ ಇದ್ದವನಿಂದ ಕೊಲೆ:

ಜೈನ ಮುನಿಗಳ ಆಶ್ರಮದಲ್ಲಿ 6 ವರ್ಷದಿಂದ ಜೊತೆಗಿದ್ದ ನಾರಾಯಣ ಮಾಳಿ ಎಂಬಾತನೇ ಮುನಿಗಳನ್ನು ಕೊಲೆ ಮಾಡಿದ್ದ. ಜುಲೈ 5ರಂದು ಆಶ್ರಮದಲ್ಲಿರುವ ಮುನಿಗಳ ಕೋಣೆಯಲ್ಲೇ ಮೊದಲು ಮುನಿಗಳಿಗೆ ವಿದ್ಯುತ್​ ಶಾಕ್​ ಕೊಟ್ಟು ಬಳಿಕ ಕತ್ತು ಹಿಸುಕಿ ಕೊಲೆ ನಾರಾಯಣ ಮಾನಿ ಮಾಡಿದ್ದ. ಜುಲೈ 5ರಂದು ಸಂಜೆ ಅಡುಗೆ ಸಹಾಯಕಿ ಕೆಲಸ ಮುಗಿಸಿ ಮನೆಗೆ ಹೋದ ಬಳಿಕ ಕೃತ್ಯ ಎಸಗಲಾಗಿದೆ.

ಶವ ಸಾಗಾಟಕ್ಕೆ ಹಸನ್​ ಡಲಾಯತ್​ ನೆರವು ಪಡೆದಿದ್ದ ಮಾನಿ:

ಕೊಲೆಯ ಬಳಿಕ ಆಶ್ರಮದಿಂದ ಮುನಿಗಳ ಸಾಗಾಟಕ್ಕೆ ನಾರಾಯಣ ಮಾಳಿ ತನ್ನ ಆಪ್ತ ಹಸನ್​ ಡಲಾಯತ್​ನ ನೆರವು ಪಡೆದಿದ್ದ. ಬೈಕ್​ನಲ್ಲಿ 39 ಕಿಲೋ ಮೀಟರ್​ ದೂರಕ್ಕೆ ಶವ ಸಾಗಿಸಿದ್ದ ಇಬ್ಬರೂ ಮೊದಲಿಗೆ ಮಾಳಿ ತನ್ನ ಸ್ವಂತೂರು ಖಟಕಬಾವಿಯಲ್ಲಿರುವ ತನ್ನ ಜಮೀನಿಗೆ ತೆಗೆದುಕೊಂಡು ಹೋಗಿ ಹೂಳಲು ಯತ್ನಿಸಿದ್ದ.

ಆದರೆ ಶವದ ಬಗ್ಗೆ ಸುಳಿವು ಸಿಗಬಾರದು ಎಂಬ ಸಂಚಿನೊಂದಿಗೆ ತನ್ನ ಜಮೀನಿನ ಬದಲು ಊರಲ್ಲೇ ಇದ್ದ ಖಾಲಿ ಕೊಳವೆಬಾವಿ ಬಳಿ ತೆಗೆದುಕೊಂಡು ಹೋದ. ಅಲ್ಲಿ ಕೊಳವೆಬಾವಿಯೊಳಗೆ ಮೃತದೇಹ ಹಾಕಲು ಇಬ್ಬರೂ ಯತ್ನಿಸಿದರು. ಆದರೆ ಮೃತದೇಹ ಅದರೊಳಗೆ ಹೋಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮೃತದೇಹವನ್ನು ಕತ್ತರಿಸಿ ಬಳಿಕ ಸೀರೆಯೊಳಗೆ ಸುತ್ತಿ ಕೊಳವೆಬಾವಿಯೊಳಗೆ ಎಸೆದಿದ್ದರು.

ಅರ್ಥ್​ಮೂವರ್ಸ್​ನಿಂದ 10 ಗಂಟೆ ಕಾರ್ಯಾಚರಣೆ:

ಖಾಲಿ ಬಿದ್ದಿದ್ದ ಬೋರ್​ವೆಲ್​ನಲ್ಲಿ ಕತ್ತರಿಸಿ ಎಸೆಯಲಾಗಿದ್ದ ಮುನಿಗಳ ಮೃತದೇಹವನ್ನು ಹೊರತೆಗೆಯಲು 10 ಗಂಟೆ ಅರ್ಥ್​ ಮೂವರ್ಸ್​ನಿಂದ ಕಾರ್ಯಾಚರಣೆ ಮಾಡಲಾಗಿತ್ತು.

ಕೊಲೆ ಮಾಡಿ ನಾಟಕವಾಗಿದ್ದ ಮುನಿಗಳ ಜೊತೆಗಿದ್ದ ಆಪ್ತ:

ಜುಲೈ 5ರಂದು ಕೊಲೆ ಮಾಡಿದ ಬಳಿಕ ಎರಡು ದಿನ ಮುನಿಗಳ ಆಪ್ತ ನಾರಾಯಣ ಮಾಳಿ ನಾಟಕವಾಡಿದ್ದ. ಎರಡು ದಿನಗಳಿಂದ ನಾಪತ್ತೆತಯಾಗಿದ್ದ ಮುನಿಗಳ ಹುಡುಕಾಟದಲ್ಲಿ ಪೊಲೀಸರೊಂದಿಗೆ ಮಾಳಿಯೂ ಕೈ ಜೋಡಿಸಿದ್ದ. ಮುನಿಗಳಿಗಾಗಿ ಹುಡುಕಾಟ ಮಾಡಿದ್ದಾಗಿ ಈತ ಆಶ್ರಮದಲ್ಲೂ ಬಂದು ಹೇಳಿಕೊಂಡಿದ್ದ. ಆದರೆ ಈತ ಕೊಟ್ಟ ಹೇಳಿಕೆಗಳಿಂದ ಪೊಲೀಸರಿಗೆ ಅನುಮಾನ ಬಂದು ವಿಚಾರಣೆಗೊಳಪಡಿಸಿದಾಗ ಆತನೇ ಕೊಲೆ ಮಾಡಿರುವುದು ಬಯಲಾಗಿದೆ.

ಚಾರಿಟೇಬಲ್​ ಟ್ರಸ್ಟ್​ನಿಂದ ಸಾಲ: 

13 ವರ್ಷಗಳ ಹಿರೇಕೋಡಿ ನಂದಿ ಪರ್ವತದಲ್ಲಿ  ಆಶ್ರಮ ಸ್ಥಾಪಿಸಿದ ಮುನಿಗಳು ಜೈನ್​ ಚಾರಿಟೇಬಲ್​ ಟ್ರಸ್ಟ್​ನಿಂದ ನಾರಾಯಣ ಮಾಳಿಗೆ 6 ಲಕ್ಷ ರೂಪಾಯಿ ಸಾಲ ನೀಡಿದ್ದರು. ಆ ಸಾಲವನ್ನು ವಾಪಸ್​ ಕೊಡುವಂತೆ ಪದೇ ಪದೇ ಕೇಳಿದ್ದರಿಂದ ಕುಪಿತನಾಗಿದ್ದ ನಾರಾಯಣ ಮುನಿಗಳನ್ನು ಕೊಲೆ ಮಾಡುವ ಬಗ್ಗೆ ಸಂಚು ರೂಪಿಸಿದ್ದ. 

ಈ ಟ್ರಸ್ಟ್​​​ಗೆ ಮುನಿಗಳ ಪೂರ್ವಾಶ್ರಮದ ಸಂಬಂಧಿ ಭೀಮಪ್ಪ ಉಗಾರೆ ಅಧ್ಯಕ್ಷರಾಗಿದ್ದಾರೆ. ಟ್ರಸ್ಟಿಗಳ ಕೊಟ್ಟ ಮಾಹಿತಿಯ ಪ್ರಕಾರ ಕೊಟ್ಟ ಹಣವನ್ನು ಆದಷ್ಟು ಬೇಗ ಕೊಡುವಂತೆ ತನ್ನ ಆಪ್ತ ನಾರಾಯಣ ಮಾಳಿಗೆ ಮುನಿಗಳು ಒತ್ತಾಯಿಸಿದ್ದರು.

LEAVE A REPLY

Please enter your comment!
Please enter your name here