ಕುಮಾರಸ್ವಾಮಿ to ಸಿದ್ದರಾಮಯ್ಯ: ಯಾವ ಅವಧಿಯಲ್ಲಿ ಎಷ್ಟು ಸಾಲ..? ಎಷ್ಟು ಹೆಚ್ಚಳ..?

3 ಲಕ್ಷದ 27 ಸಾವಿರ ಕೋಟಿ ರೂಪಾಯಿ ಮೊತ್ತದ ಗ್ಯಾರಂಟಿ ಬಜೆಟ್​ ಮಂಡಿಸಿದ ಬಳಿಕ ಸಿಎಂ ಸಿದ್ದರಾಮಯ್ಯ (CM Siddaramaiah Budget) ಅವರ ಆಯವ್ಯಯದ ಬಗ್ಗೆ ಕೇಳಿಬಂದಿರುವ ಪ್ರಮುಖ ಟೀಕೆ ಖಾತ್ರಿ ಯೋಜನೆಗಳ ಜಾರಿಗಾಗಿ ಸಾಲದ ಹೊರೆ (Debt Liabilities) ಹೊರಿಸಲಾಗಿದೆ ಎನ್ನುವುದು.

ಕರ್ನಾಟಕದ (Karnataka Budget) ಜನರ ಮೇಲೆ ಹೇರಲಾದ ಸಾಲದ ಹೊರೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ (Karnataka Congress) ಮತ್ತು ಬಿಜೆಪಿ (BJP Karnataka) ಹಾಗೂ ಜೆಡಿಎಸ್ (JDS)​ ನಡುವೆ ಸಂಘರ್ಷಕ್ಕೂ ಕಾರಣವಾಗಿತ್ತು.

ಕಳೆದ ಐದು ವರ್ಷಗಳಲ್ಲಿ ಬಜೆಟ್​ ಗಾತ್ರ ಮತ್ತು ಸಾಲ (Karnataka State Debt) ಹೇಗೆ ಏರಿಕೆ ಕಂಡಿತು ಎನ್ನುವುದನ್ನು ತಿಳಿದುಕೊಂಡರೆ ಕರ್ನಾಟಕದ ಮೇಲೆ ಋಣ ಭಾರದ ಮೂಟೆಯನ್ನು ಹೊರಿಸಿದ್ದರು ಯಾರು ಎನ್ನುವುದು ಸ್ಪಷ್ಟವಾಗುತ್ತದೆ..?

2018ರ ಆರ್ಥಿಕ ವರ್ಷದಿಂದ ಸಾಲದ ಲೆಕ್ಕಾಚಾರ: ಕುಮಾರಸ್ವಾಮಿ ಅವಧಿ: (H D Kumarswamy)

2018ರಲ್ಲಿ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಹೆಚ್​ ಡಿ ಕುಮಾರಸ್ವಾಮಿ ಅವರು ಮಂಡಿಸಿದ ಮೊದಲ ಬಜೆಟ್​ನಲ್ಲಿ 47,134 ಕೋಟಿ ರೂಪಾಯಿ ಸಾಲ ಎತ್ತುವಳಿ (Borrowings) ಮಾಡಲಾಯಿತು. ಆ ಮೂಲಕ ಸಾಲದ ಒಟ್ಟು ಮೊತ್ತ 2 ಲಕ್ಷದ 92 ಸಾವಿರದ 220 ಕೋಟಿ ರೂಪಾಯಿಗೆ ಏರಿಕೆ ಆಯಿತು. ಇದು ರಾಜ್ಯದ ಒಟ್ಟು ಉತ್ಪನ್ನದ ಶೇಕಡಾ 20.1ರಷ್ಟಿತ್ತು. ಈ ಅವಧಿಯಲ್ಲಿ ಮಾಡಲಾದ ಸಾಲ ಮರು ಪಾವತಿ (Loan Repayment) 11,368 ಕೋಟಿ ರೂಪಾಯಿ.

2019-20ರ ಆರ್ಥಿಕ ವರ್ಷದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿದ ಸಮ್ಮಿಶ್ರ ಸರ್ಕಾರದ 2ನೇ ಆಯವ್ಯಯದಲ್ಲಿ 48,601 ಕೋಟಿ ರೂಪಾಯಿ ಸಾಲ ಎತ್ತುವಳಿ ಮಾಡಲಾಯಿತು. ಈ ಮೂಲಕ ಸಾಲದ ಒಟ್ಟು ಮೊತ್ತ 3 ಲಕ್ಷದ 27 ಸಾವಿರದ 209 ಕೋಟಿ ರೂಪಾಯಿಗೆ ಏರಿಕೆ ಆಯಿತು. ಇದು ರಾಜ್ಯ ಒಟ್ಟು ಉತ್ಪನ್ನದ (Karnataka GSDP) ಶೇಕಡಾ 20.60ರಷ್ಟಿತ್ತು. ಈ ಆಯವ್ಯಯಲ್ಲಿ 9,964 ಕೋಟಿ ರೂಪಾಯಿ ಸಾಲ ಮರು ಪಾವತಿ ಆಯಿತು.

ಯಡಿಯೂರಪ್ಪ ಅವಧಿ: (B S Yediyurappa)

ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರ 2020-21ರಲ್ಲಿ ಮಂಡಿಸಿದ ಬಜೆಟ್​ನಲ್ಲಿ ಬರೋಬ್ಬರೀ 52,918 ಕೋಟಿ ರೂಪಾಯಿ ಸಾಲ ಎತ್ತಲಾಯಿತು. ಆಗ ಸಾಲದ ಒಟ್ಟು ಮೊತ್ತ 3 ಲಕ್ಷದ 68 ಸಾವಿರದ 692 ಕೋಟಿ ರೂಪಾಯಿಗೆ ಹೆಚ್ಚಳವಾಯಿತು. ಇದು ರಾಜ್ಯದ ಒಟ್ಟು ಉತ್ಪನ್ನದ ಶೇಕಡಾ 20.42ರಷ್ಟಿತ್ತು. ಈ ಅವಧಿಯಲ್ಲಿ 11,605 ಕೋಟಿ ಸಾಲ ಮರು ಪಾವತಿ ಘೋಷಿಸಲಾಯಿತು.

2021-22ರಲ್ಲಿ ಯಡಿಯೂರಪ್ಪ ಅವರು ಮಂಡಿಸಿದ ಎರಡನೇ ಬಜೆಟ್​ನಲ್ಲೂ ಬರೋಬ್ಬರೀ 71,332 ಕೋಟಿ ರೂಪಾಯಿ ಸಾಲ ಎತ್ತುವಳಿ ಮಾಡಲಾಯಿತು. ಈ ಮೂಲಕ ರಾಜ್ಯದ ಒಟ್ಟು ಸಾಲದ ಪ್ರಮಾಣ 4 ಲಕ್ಷದ ಗಡಿ ದಾಟಿ 4 ಲಕ್ಷದ 57 ಸಾವಿರದ 899 ಕೋಟಿ ರೂಪಾಯಿಗೆ ಏರಿಕೆ ಆಯಿತು. ಈ ಮೂಲಕ ಸಾಲ ರಾಜ್ಯದ ಒಟ್ಟು ಉತ್ಪನ್ನದ ಶೇಕಡಾ 26.9ರಷ್ಟಿತ್ತು. ಇದು ಆರ್ಥಿಕ ಶಿಸ್ತು ನಿರ್ವಹಣೆಗಾಗಿ ಇರುವ ಹಣಕಾಸು ಹೊಣೆಗಾರಿಕೆ ನಿಯಮಗಳ ಉಲ್ಲಂಘನೆ ಆಯಿತು. ಈ ಅವಧಿಯಲ್ಲಿ ಘೋಷಿಸಲಾಗಿದ್ದ ಸಾಲ ಮರು ಪಾವತಿ ಮೊತ್ತ 14,565 ಕೋಟಿ ರೂಪಾಯಿ.

ಬಸವರಾಜ ಬೊಮ್ಮಾಯಿ ಅವಧಿ: (Basavaraj Bommai)

2022-23ರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಮೊದಲ ಆಯವ್ಯಯದಲ್ಲಿ 72 ಸಾವಿರ ಕೋಟಿ ರೂಪಾಯಿ ಸಾಲ ಎತ್ತುವಳಿ ಮಾಡಿದರು. ಈ ಮೂಲದ ರಾಜ್ಯದ ಮೇಲಿನ ಒಟ್ಟು ಸಾಲದ ಪ್ರಮಾಣ 5 ಲಕ್ಷದ 18 ಸಾವಿರದ 336 ಕೋಟಿ ರೂಪಾಯಿಗೆ ಏರಿಕೆ ಆಯಿತು. ಇದು ರಾಜ್ಯದ ಒಟ್ಟು ಉತ್ಪನ್ನದ ಶೇಕಡಾ 27.49ರಷ್ಟಿತ್ತು. ಎರಡನೇ ಬಾರಿಯೂ ಈ ಮೂಲಕ ಹಣಕಾಸು ಹೊಣೆಗಾರಿಕೆ ನಿಯಮಗಳ ಉಲ್ಲಂಘನೆ ಆಯಿತು. ಈ ಅವಧಿಯಲ್ಲಿ ಮಾಡಲಾದ ಸಾಲ ಮರುಪಾವತಿ ಮೊತ್ತ 14,179 ಕೋಟಿ ರೂಪಾಯಿ.

2023-24ರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಕೊನೆಯ ಬಜೆಟ್​ನಲ್ಲಿ (ಲೇಖಾನುದಾನ) 77 ಸಾವಿರದ 750 ಕೋಟಿ ರೂಪಾಯಿ ಸಾಲ ಎತ್ತುವಳಿ ಮಾಡಿದರು. ಈ ಮೂಲಕ ಸಾಲದ ಮೊತ್ತ 5 ಲಕ್ಷದ 64 ಸಾವಿರದ 896 ಕೋಟಿ ರೂಪಾಯಿಗೆ ಹೆಚ್ಚಳವಾಯಿತು. ಇದು ರಾಜ್ಯದ ಒಟ್ಟು ಉತ್ಪನ್ನದ ಶೇಕಡಾ 22.64ರಷ್ಟಿತ್ತು. ಈ ಅವಧಿಯಲ್ಲಿ ಘೋಷಿಸಲಾದ ಸಾಲ ಮರು ಪಾವತಿ ಒಟ್ಟು ಮೊತ್ತ 22,441 ಕೋಟಿ ರೂಪಾಯಿ.

ಕುಮಾರಸ್ವಾಮಿಯಿಂದ ಬೊಮ್ಮಾಯಿವರೆಗೆ:

ಕುಮಾರಸ್ವಾಮಿ ಅವರಿಂದ ಹಿಡಿದು ಬಸವರಾಜ ಬೊಮ್ಮಾಯಿ ಅವರ ಅವಧಿಯವರೆಗೆ ರಾಜ್ಯದಲ್ಲಿ ಸಾಲದ ಮೊತ್ತ ಬರೋಬ್ಬರೀ 3 ಲಕ್ಷದ 22 ಸಾವಿರದ 896 ಕೋಟಿ ರೂಪಾಯಿಯಷ್ಟು ಹೆಚ್ಚಳವಾಗಿದೆ.

ಸಿದ್ದರಾಮಯ್ಯ ಹೊಸ ಆಯವ್ಯಯ:

2023-24ರ ಅವಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ ಆಯವ್ಯಯದಲ್ಲಿ ಮಾಡಲಾಗಿರುವ ಸಾಲದ ಮೊತ್ತ 85,818 ಕೋಟಿ ರೂಪಾಯಿ. ಈ ಮೂಲಕ ಒಟ್ಟು ಸಾಲದ ಮೊತ್ತ 5 ಲಕ್ಷದ 71 ಸಾವಿರದ 665 ಕೋಟಿ ರೂಪಾಯಿಗೆ ಏರಿಕೆ ಆಗಿದೆ. ರಾಜ್ಯದ ಒಟ್ಟು ಉತ್ಪನ್ನದಲ್ಲಿ ಸಾಲದ ಪ್ರಮಾಣ ಶೇಕಡಾ 22.3ರಷ್ಟಿತ್ತು. ಈ ಅವಧಿಯಲ್ಲಿ ಘೋಷಿಸಲಾಗಿರುವ ಸಾಲ ಮರು ಪಾವತಿಯ ಒಟ್ಟು ಮೊತ್ತ 22,441 ಕೋಟಿ ರೂಪಾಯಿ. 

ಬಸವರಾಜ ಬೊಮ್ಮಾಯಿ ಅವರ ಕೊನೆಯ ಬಜೆಟ್​ನಲ್ಲಿ ಮಾಡಲಾದ ಸಾಲದ ಮೊತ್ತಕ್ಕಿಂತ ತಮ್ಮ 14ನೇ ಬಜೆಟ್​ನಲ್ಲಿ ಸಿಎಂ ಸಿದ್ದರಾಮಯ್ಯ ಅವರ 8,068 ಕೋಟಿ ರೂಪಾಯಿ ಹೆಚ್ಚುವರಿ ಸಾಲ ಮಾಡಿದ್ದಾರೆ.

ಕುಮಾರಸ್ವಾಮಿ ಅವಧಿಯಲ್ಲೂ ಸಾಲ ಭಾರೀ ಹೆಚ್ಚಳ:

ಕುಮಾರಸ್ವಾಮಿ ಅವರು ತಮ್ಮ ಎರಡು ಬಜೆಟ್​ನಲ್ಲಿ ಅಂದರೆ 2 ವರ್ಷದಲ್ಲೇ ಬರೋಬ್ಬರೀ ಒಟ್ಟು 95 ಸಾವಿರದ 735 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ಇವರ ಅವಧಿಯಲ್ಲಿ ಸಾಲದ ಮೊತ್ತ 2 ಲಕ್ಷದ 42 ಸಾವಿರದ 220 ಕೋಟಿ ರೂಪಾಯಿಯಿಂದ 3 ಲಕ್ಷದ 27 ಸಾವಿರದ 209 ಕೋಟಿ ರೂಪಾಯಿಗೆ ಏರಿಕೆ ಆಗಿದೆ. 

ಬಿಜೆಪಿ ಅವಧಿಯಲ್ಲಿ ಸಾಲ ಅತ್ಯಧಿಕ ಹೆಚ್ಚಳ: ಸಾಲದಲ್ಲೇ ಹೊಸ ದಾಖಲೆ

ಯಡಿಯೂರಪ್ಪರ ಎರಡು ಬಜೆಟ್​ ಮತ್ತು ಬಸವರಾಜ ಬೊಮ್ಮಾಯಿ ಅವರ ಎರಡು ಆಯವ್ಯಯದಲ್ಲಿ 4 ಆರ್ಥಿಕ ವರ್ಷದಲ್ಲಿ ಬಿಜೆಪಿ ಸರ್ಕಾರ ಬರೋಬ್ಬರೀ 2 ಲಕ್ಷದ 74 ಸಾವಿರ ಕೋಟಿ ರೂಪಾಯಿಯಷ್ಟು ಸಾಲ ಮಾಡಿದೆ.

ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಸರ್ಕಾರದ ಸಾಲ:

ಆದರೆ ಸಿದ್ದರಾಮಯ್ಯ ಅವರು ಮೊದಲಾವಧಿಗೆ ಮುಖ್ಯಮಂತ್ರಿ ಆಗಿದ್ದ ವೇಳೆ 2013ರಿಂದ 2018ರ ಲೇಖಾನುದಾನದವರೆಗೆ ಐದು ವರ್ಷದಲ್ಲಿ ಮಾಡಿದ್ದ ಒಟ್ಟು ಸಾಲದ ಮೊತ್ತ 1 ಲಕ್ಷದ 3 ಸಾವಿರ ಕೋಟಿ ರೂಪಾಯಿಯಿಂದ 2 ಲಕ್ಷದ 42 ಸಾವಿರ ಕೋಟಿ ರೂಪಾಯಿಗೆ ಏರಿಕೆ ಆಗಿತ್ತು.  ಅಂದರೆ ಐದು ವರ್ಷದಲ್ಲಿ ಸಿದ್ದರಾಮಯ್ಯ ಸರ್ಕಾರ ಮಾಡಿದ್ದ ಸಾಲ 1 ಲಕ್ಷದ 39 ಸಾವಿರ ಕೋಟಿ ರೂಪಾಯಿ.

ಈಗ 52 ಸಾವಿರ ಕೋಟಿ ರೂಪಾಯಿಯಷ್ಟು ಭಾರೀ ಮೊತ್ತದ ಸಾರ್ವತ್ರಿಕ ಗ್ಯಾರಂಟಿ ಯೋಜನೆ ಹೊರತಾಗಿಯೂ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದ ಬಜೆಟ್​ನಲ್ಲಿ ಸಾಲದ ಪ್ರಮಾಣ ಭಾರೀ ಏರಿಕೆ ಆಗಿಲ್ಲ.

ಮಾಹಿತಿ ಆಧಾರ: 2018ರಿಂದ 2023ರವರೆಗಿನ ಬಜೆಟ್​ ಭಾಷಣಗಳು (Karnataka Budget Speeches)

LEAVE A REPLY

Please enter your comment!
Please enter your name here