ದಯವಿಟ್ಟು ಮಾತನಾಡಿ ಮುಖ್ಯಮಂತ್ರಿಗಳೇ..- ಹೆಚ್ ಡಿ ಕೆ ಬರಹ


ಅಮಾನತು ಶಿಕ್ಷೆಗೆ ಗುರಿಯಾಗಿ ದಾರುಣ ಸಾವಿಗೆ ತುತ್ತಾದ ಕೆ.ಆರ್.ಪುರ ಠಾಣೆ ಇನ್ಸಪೆಕ್ಟರ್ ನಂದೀಶ್ ಅವರ ಹೃದಯಾಘಾತಕ್ಕೆ ಕಾರಣವೇನು? ಇದು, ಇಡೀ ರಾಜ್ಯದ ಪ್ರಶ್ನೆ.

ಈಗ ಸರಕಾರವೇ ಸತ್ಯ ಹೇಳಿದೆ! ಸದ್ಯ, ಸರಕಾರವು ಸಾವಿನಲ್ಲೂ ಸತ್ಯ ಹೇಳುವ ಧೈರ್ಯ ಮಾಡಿದೆ!! ಶ್ರೀ ಬಸವರಾಜ್ ಬೊಮ್ಮಾಯಿ ಸಂಪುಟ ಸಚಿವರೇ ವಿಷಯ ಬಹಿರಂಗ ಮಾಡಿದ್ದಾರೆ.

ಅಲ್ಲಿಗೆ, ರಾಜ್ಯದಲ್ಲಿ ಕಾಸಿಗಾಗಿ ಪೋಸ್ಟಿಂಗ್ ನಡೆಯುತ್ತಿದೆ ಎನುವುದನ್ನು ಸ್ವತಃ ಸರಕಾರವೇ ಒಪ್ಪಿಕೊಂಡಂತೆ ಆಗಿದೆ. ಪೋಸ್ಟಿಂಗ್ ಗೆ 70-80 ಲಕ್ಷ ರೂ. ಕೊಟ್ಟು ಬಂದರೆ ಹೃದಯಾಘಾತ ಆಗದೆ ಇನ್ನೇನಾಗುತ್ತದೆ ಎಂದು ಹೇಳಿರುವ ಸಚಿವ ಎಂಟಿಬಿ ನಾಗರಾಜ್ ಅವರ ಹೇಳಿಕೆಯು ಈ ಸರಕಾರದ ಕಾಸಿಗಾಗಿ ಪೋಸ್ಟಿಂಗ್ ದಂಧೆಗೆ ಹಿಡಿದ ಕನ್ನಡಿ.

ಸಚಿವರೇ ಹೇಳಿದಂತೆ 70-80 ಲಕ್ಷ ರೂ.ಗಳನ್ನು ನಂದೀಶ್ ಅವರು ಯಾರಿಗೆ ಕೊಟ್ಟರು? ಇದರಲ್ಲಿ ಅವರ ಮೇಲಿನ ಉನ್ನತ ಅಧಿಕಾರಿಗಳು, ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಪರ್ಸಂಟೇಜ್ ಹೋಗಿದೆಯಾ? ಅಥವಾ ಕಾಣದ ರಿಮೋಟ್ ಯವುದಾದರೂ ಇದೆಯಾ? ಸಚಿವರಂತೆ ನೀವೂ ಸತ್ಯ ಹೇಳಿ ಸಿಎಂ ಸಾಹೇಬರೇ..

ಎಂಟಿಬಿ ನಾಗರಾಜ್ ಅವರು ಹೇಳಿದ್ದು ನಿಜ ಎನ್ನುವುದಕ್ಕೆ ನಾನು ಟ್ಯಾಗ್ ಮಾಡಿರುವ ವಿಡಿಯೋ ತುಣುಕೇ ಸಾಕ್ಷಿ.
ನನ್ನ ಪ್ರಶ್ನೆ ಇಷ್ಟೇ, ಈ ಬಗ್ಗೆ ಸಿಎಂ ಏನು ಹೇಳುತ್ತಾರೆ? ಸಂಘ ಸಂಸ್ಕಾರದ ಗೃಹ ಸಚಿವರು ಉತ್ತರ ನೀಡಲೇಬೇಕು. ಧಮ್ಮಿದ್ರೆ, ತಾಕತ್ತಿದ್ರೆ ಎನ್ನುವ ಮುಖ್ಯಮಂತ್ರಿಗಳು ಈ ಬಗ್ಗೆ ಮೌನ ಮುರಿಯುವ ತಾಕತ್ತು ತೋರಬೇಕು.

ಸಚಿವ ಎಂಟಿಬಿ ನಾಗರಾಜ್ ಅವರು ಹೇಳಿದ್ದು ಸತ್ಯವಾ ಅಥವಾ ಸುಳ್ಳಾ ಎನ್ನುವುದನ್ನು ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಬೇಕು. ಸತ್ಯವೇ ಆಗಿದ್ದರೆ, ಇಡೀ ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸಲೇ ಬೇಕು. ಸುಳ್ಳು ಎನ್ನುವುದಾದರೆ ಹೇಳಿಕೆ ಕೊಟ್ಟ ಸಚಿವರ ಕಥೆ ಏನು? ದಯವಿಟ್ಟು ಮಾತನಾಡಿ ಮುಖ್ಯಮಂತ್ರಿಗಳೇ..

ಬಿಜೆಪಿ ಸರಕಾರವು ಕರ್ನಾಟಕ ಪೊಲೀಸ್ ವ್ಯವಸ್ಥೆಯ ನೈತಿಕಸ್ಥೈರ್ಯ ಕುಗ್ಗಿಸಿದೆ. ಬಿಜೆಪಿ ಹೈಕಮಾಂಡ್ ಏಜೆಂಟ್ ರಂತೆ ವರ್ತಿಸುತ್ತಿರುವ ಉತ್ತರ ಭಾರತದ ಕೆಲ ಹಿರಿಯ ಹಿಂದಿ ಪೊಲೀಸ್ ಅಧಿಕಾರಿಗಳು, ಕನ್ನಡ ಅಧಿಕಾರಿಗಳನ್ನು ಗುಲಾಮರಂತೆ ನೋಡುತ್ತಿದ್ದಾರೆ. ನಮ್ಮ ಕಿರಿಯ ಮಟ್ಟದ ಅಧಿಕಾರಿಗಳು ಅವರಿಗೆ ಊಳಿಗ ಮಾಡುವಂಥ ಸ್ಥಿತಿ ಇದೆ.

ಅಲ್ಲದೆ, ಸಾವಿನ ಮನೆಗೆ ಸಾಂತ್ವನ ಹೇಳಲು ಹೋದ ಸಚಿವರೇ ಸತ್ತ ಜೀವದ ಬಗ್ಗೆ ಎಗ್ಗಿಲ್ಲದೇ ನಿರ್ಲಜ್ಜವಾಗಿ ಮಾತನಾಡಿದ್ದು ಸರಿಯೋ ತಪ್ಪೋ.., ಆ ತರ್ಕ ಬೇಡ. ಆದರೆ, ರಾಜ್ಯದ ಜನತೆಗೆ ಸತ್ಯ ಗೊತ್ತಾಗಬೇಕಿದೆ. ಸಂಘ ಸಂಸ್ಕಾರದ ಸರಕಾರಕ್ಕೆ ಸತ್ಯ ಹೇಳದೇ ದಾರಿ ಇಲ್ಲ.

H D ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

LEAVE A REPLY

Please enter your comment!
Please enter your name here