ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧದ ನಿರ್ಣಯದಿಂದ ದೂರ ಉಳಿದ ಭಾರತ

ಉಕ್ರೇನ್ ನ 4 ಪ್ರದೇಶಗಳನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿರುವುದು ಹಾಗೂ ಆಕ್ರಮಿತ ಪ್ರದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡಿರುವುದನ್ನು ಖಂಡಿಸಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಲಾಗಿದ್ದ ರಷ್ಯಾ ವಿರುದ್ಧದ ನಿರ್ಣಯದಿಂದ ಭಾರತ ದೂರ ಉಳಿದಿದೆ.

ರಷ್ಯಾ ವಿರುದ್ಧ ಯುಎನ್ಎಸ್ ಸಿಯಲ್ಲಿ ನಿರ್ಣಯ ಮಂಡಿಸಿದ್ದ ಅಮೆರಿಕ ಮತ್ತು ಅಲ್ಬೇನಿಯಾ ರಷ್ಯಾ ತನ್ನ ಸೇನಾ ಪಡೆಗಳನ್ನು ಉಕ್ರೇನ್‌ನಿಂದ ಕೂಡಲೇ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ನಿರ್ಣಯದಲ್ಲಿ ಆಗ್ರಹಿಸಿದ್ದವು.

ಉಕ್ರೇನ್‌ ನ ಕೆರ್ಸಾನ್‌, ಝಪೋರಿಝಿಯಾ, ಲುಹಾನ್‌ಸ್ಕ್‌, ಡೊನೆಟ್‌ಸ್ಕ್‌ ಪ್ರದೇಶಗಳನ್ನು ರಷ್ಯಾಕ್ಕೆ ಸೇರ್ಪಡೆ ಮಾಡಿಕೊಳ್ಳುವ ಒಪ್ಪಂದಕ್ಕೆ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಶುಕ್ರವಾರ ಸಹಿ ಹಾಕಿದ್ದರು. ಈ ಬೆನ್ನಲ್ಲೇ ಅಮೆರಿಕ ಮಂಡಿಸಿದ್ದ ನಿರ್ಣಯದಲ್ಲಿ ರಷ್ಯಾ ತನ್ನ ಮೇಲೆ ಬಂದಿದ್ದ ಆರೋಪಗಳನ್ನು ವಿಟೊ ಅಧಿಕಾರ ಬಳಸಿ ನಿರಾಕರಿಸಿದೆ.

ಇದನ್ನೂ ಓದಿ : ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿ ರುಚಿರಾ ಕಾಂಬೋಜ್ ನೇಮಕ

ಭದ್ರತಾ ಮಂಡಳಿಯ 15 ರಾಷ್ಟ್ರಗಳ ಪೈಕಿ 10 ರಾಷ್ಟ್ರಗಳು ಮಾತ್ರವೇ ನಿರ್ಣಯಕ್ಕೆ ಸಂಬಂಧಿಸಿದಂತೆ ಮತ ಚಲಾವಣೆ ಮಾಡಿದವು. ಭಾರತ ಸೇರಿ 4 ರಾಷ್ಟ್ರಗಳು ಮತ ಹಾಕುವುದರಿಂದ ದೂರ ಉಳಿದವು. ಪರಿಣಾಮ ನಿರ್ಣಯ ಅಂಗೀಕಾರ ಪಡೆಯುವಲ್ಲಿ ವಿಫಲವಾಗಿದೆ.

ಬಲಪ್ರಯೋಗದಿಂದ ಯಾವುದೇ ರಾಷ್ಟ್ರ ಮತ್ತೊಂದು ರಾಷ್ಟ್ರದ ಪ್ರದೇಶವನ್ನು ಆಕ್ರಮಿಸಿಕೊಳ್ಳುವುದು ವಿಶ್ವಸಂಸ್ಥೆಯ ತತ್ವಗಳಿಗೆ ವಿರುದ್ಧವಾಗಿದೆ. ರಷ್ಯಾ ಮಾಡಿರುವುದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ. ರಷ್ಯಾದ ನಡೆ ಅಪಾಯಕಾರಿಯಾಗಿದ್ದು ಆಧುನಿಕ ಜಗತ್ತಿನಲ್ಲಿ ಇದಕ್ಕೆ ಅವಕಾಶವಿಲ್ಲ. ರಷ್ಯಾದ ಕ್ರಮ ಒಪ್ಪಿಕೊಳ್ಳುವಂಥಹದ್ದಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ : ವಿಶ್ವಸಂಸ್ಥೆ : ರಷ್ಯಾ ವಿರುದ್ಧದ ಮತ್ತೊಂದು ಮತದಾನದಿಂದ ದೂರ ಉಳಿದ ಭಾರತ