ಇದೇ ವರ್ಷದ ಆಗಸ್ಟ್ 17ರಂದು ಮಾಜಿ ಮುಖ್ಯಮಂತ್ರಿಗಳಾಗಿರುವ ಬಿ ಎಸ್ ಯಡಿಯೂರಪ್ಪ ಅವರನ್ನು ಬಿಜೆಪಿ ಸಂಸದೀಯ ಮಂಡಳಿ ಮತ್ತು ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ನೇಮಕ ಮಾಡಿದ ಬಳಿಕ ಕನ್ನಡದ ಬಹುತೇಕ ಮಾಧ್ಯಮಗಳು ಆ ನೇಮಕಾತಿಯನ್ನು ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿದ ಬಳಿಕ ಅವರಿಗೆ ಗೌರವಪೂರ್ವಕವಾಗಿ ಕೊಡಮಾಡಲಾದ ಅತ್ಯುನ್ನತ, ಅತೀಶ್ರೇಷ್ಠ ಗಾದಿ ಎಂದು ಪುಂಖಾನುಪುಂಖವಾಗಿ ಬಣ್ಣಿಸಿದ್ದವು.
ದೆಹಲಿಯಲ್ಲಿ ಕೂತ ಬಿಜೆಪಿಯ ದೊಡ್ಡ ನಾಯಕರು ಮಾಧ್ಯಮಗಳು ಆ ಕೆಲಸವನ್ನು ಚಾಚೂ ತಪ್ಪದೇ ಮಾಡುತ್ತವೆ ಎಂದು ಭಾವಿಸಿದ್ದು ಸುಳ್ಳಾಗಿಲ್ಲ.
ಕರ್ನಾಟಕದಲ್ಲಿರುವ ಬಿಜೆಪಿಯ ನಾಯಕರು, ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿರುವ ಮುಖಂಡರು, ಕಾರ್ಯಕರ್ತರೆಲ್ಲರೂ ನಾವು ಯಡಿಯೂರಪ್ಪನವರಿಗೆ ಸಂಸದೀಯ ಮಂಡಳಿ ಸ್ಥಾನ ಕೊಟ್ಟಿದ್ದೇವೆ ಎಂದು ಪದೇ ಪದೇ ಹೇಳುತ್ತಾ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸಿದ್ದನ್ನು ಸಮರ್ಥಿಸಿಕೊಂಡಿದ್ದರು.
ಏಣಿ ಒದ್ದ ಬಿಜೆಪಿ ನಾಯಕರು:
ಮುಖ್ಯಮಂತ್ರಿ ಪದವಿಯಿಂದ ಇಳಿಸುವ ಮೂಲಕ ಬಿಜೆಪಿಯ ದೆಹಲಿ ನಾಯಕರ ಪಡೆ ಜನನಾಯಕರಾಗಿರುವ ಯಡಿಯೂರಪ್ಪರನ್ನು ನಾಯಕ ಎಂದಷ್ಟೇ ಬಿಂಬಿಸುವ ಪ್ರಯತ್ನವನ್ನು ಮಾಡಿತು. ಆದರೆ ಯಡಿಯೂರಪ್ಪ ರಾಜೀನಾಮೆ ತರುವಾಯ ನಡೆದ ಚುನಾವಣೆಯಲ್ಲಿ ಬಿಜೆಪಿ ಮುಗ್ಗರಿಸಿ ಮಲಗಿದ್ದರಿಂದ ಜನನಾಯಕರಾಗಿದ್ದ ಯಡಿಯೂರಪ್ಪರನ್ನು ಅವರು ಬಯಸದೇ ಇದ್ದರೂ ಬಿಜೆಪಿಯ ದೆಹಲಿ ಕೂಟ ರಾಷ್ಟ್ರೀಯ ನಾಯಕರನ್ನಾಗಿ ಮಾಡಿತು. ಅದರ ಭಾಗವೇ ಬಿಜೆಪಿ ಸಂಸದೀಯ ಮಂಡಳಿ ಮತ್ತು ಬಿಜೆಪಿ ಚುನಾವಣಾ ಸಮಿತಿಯಲ್ಲಿ ಯಡಿಯೂರಪ್ಪಗೆ ಸ್ಥಾನ.
ಜನನಾಯಕ ಯಡಿಯೂರಪ್ಪರನ್ನು ರಾಷ್ಟ್ರೀಯ ನಾಯಕರನ್ನಾಗಿ ಮಾಡಿದ ಬಿಜೆಪಿಯ ಇದೇ ದೆಹಲಿ ಕೂಟಕ್ಕೆ ಯಡಿಯೂರಪ್ಪರನ್ನು ಜಿಲ್ಲಾ ನಾಯಕನನ್ನಾಗಿ ಮಾಡಿದ ಸಂತೋಷ. ಯಾರ ಹೆಸರು, ಜನಪ್ರಿಯತೆಯ ಕಾರಣ ಮಾತ್ರದಿಂದ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತೋ ಈ ಬಾರಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಯಾರ ಹೆಸರಿನ ಬಲವಷ್ಟೇ ಆಧಾರವೋ ಅಂತಹ ಯಡಿಯೂರಪ್ಪರನ್ನು ಬಿಜೆಪಿ ಜಿಲ್ಲಾ ನಾಯಕನ ಮಟ್ಟಕ್ಕೆ ಇಳಿಸಿದ್ದರಿಂದಲ್ಲಿ ಅಚ್ಚರಿಯೇನಿಲ್ಲ.
10 ಜಿಲ್ಲೆಗಳಲ್ಲಿ ಪಕ್ಷದ ಹೊಸ ಕಚೇರಿಗಳ ಉದ್ಘಾಟನೆಯ ಕಾರ್ಯಕ್ರಮದ ಭಾಗವಾಗಿ ಯಡಿಯೂರಪ್ಪನವರಿಗೆ ಕೊಡಮಾಡಲಾಗಿದ್ದು ಗದಗ ಜಿಲ್ಲೆಯ ಉಸ್ತುವಾರಿ. ನೀವು ಗದಗಕ್ಕೆ ಹೋಗಿ ಅಲ್ಲಿನ ಕಾರ್ಯಕ್ರಮ ಮುಗಿಸಿ ಸೀದಾ ನಿಮ್ಮ ಮನೆಗೆ ನಡೀರಿ ಎನ್ನುವ ಅರ್ಥದಲ್ಲೇ ಆಧ್ಯಾದೇಶವನ್ನು ಹೊರಡಿಸಿತ್ತು ಬಿಜೆಪಿ ದೆಹಲಿ ಪಡೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಭಾಗವಹಿಸುವ ಕೊಪ್ಪಳದಲ್ಲಿನ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನೇ ಕರೆದಿರಲಿಲ್ಲ ಬಿಜೆಪಿಯ ಬಣ.
ಯಡಿಯೂರಪ್ಪರನ್ನು ಬಿಜೆಪಿ ಕಡೆಗಣಿಸ್ತಿದೆ ಎಂದು ಯಾವಾಗ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಯಿತೋ ಎದ್ನೋ ಬಿದ್ನೋ ಎಂದು ಕಿರಿ ಬಿಜೆಪಿ ನಾಯಕರೆಲ್ಲ ಯಡಿಯೂರಪ್ಪ ಮನೆ ವಿಳಾಸವನ್ನು ಹುಡುಕಾಡಲು ಶುರು ಮಾಡಿದರು. ಉಸ್ತುವಾರಿ ಅರುಣ್ ಸಿಂಗ್ ಅವರು ತಮ್ಮ ದೂರವಾಣಿಯಲ್ಲಿ ಯಡಿಯೂರಪ್ಪರ ದೂರವಾಣಿ ಸಂಖ್ಯೆಗೋಸ್ಕರ ತಡಕಾಡಿದರು. ಕೊಪ್ಪಳದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಕಾರ್ಯಕ್ರಮದಲ್ಲಿ ನಡ್ಡಾ ಅವರ ಪಕ್ಕದಲ್ಲೇ ನೀವು ಕುಳಿತುಕೊಳ್ಳಬೇಕು, ಇಲ್ಲವಾದರೆ ಪಕ್ಷದ ಮಾನ-ಮರ್ಯಾದೆ ಹರಾಜಾಗುತ್ತದೆ ಎಂದು ಕೊನೆ ಕ್ಷಣದಲ್ಲಿ ದುಂಬಾಲು ಬಿದ್ದರು.
ಯಡಿಯೂರಪ್ಪ ಮನೆ ಬಾಗಿಲಿಗೆ ಹೋಗಿ ಬಂದ ಎಂಎಲ್ಸಿ ರವಿಕುಮಾರ್ ‘ಯಡಿಯೂರಪ್ಪ ನಮ್ಮ ನಾಯಕರು. ಅವರನ್ನು ನಾವು ದೂರ ಇಟ್ಟಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಬರುವ ಬಗ್ಗೆ ಗೊಂದಲ ಇತ್ತು. ನಮ್ಮ ಕಾರ್ಯಕರ್ತ ಮಾಡಿದ್ದ ತಪ್ಪಿನಿಂದ ಇಷ್ಟೆಲ್ಲ ಗೊಂದಲ ಆಗಿದೆ’ ಎಂದು ಹೇಳಿ ಪಕ್ಷದ ದೆಹಲಿ ನಾಯಕರು ಸೂಚಿಸಿದ್ದ ಪಠ್ಯವನ್ನೇ ಮಾಧ್ಯಮಗಳಿಗೆ ಒಪ್ಪಿಸಿದರು.
ಮೋದಿ ಹೆಸರೇ ಸಾಕು, ಯಡಿಯೂರಪ್ಪ ಬೇಡ್ವೇ ಬೇಡ..:
ಕರ್ನಾಟಕದಲ್ಲಿನ ಬಿಜೆಪಿ ನಾಯಕರಿಗೆ ಈಗ ಯಡಿಯೂರಪ್ಪ ಬೇಕಾಗಿಯೇ ಇಲ್ಲ. ರಾಜ್ಯದ ಬಿಜೆಪಿ ನಾಯಕರು ಯಡಿಯೂರಪ್ಪ ನಮ್ಮ ಪಾಲಿಗೆ ಹೊರೆ, ಅವರನ್ನು ಆದಷ್ಟು ಮೂಲೆಗುಂಪು ಮಾಡಿದರೆ ಒಳ್ಳೆದು ಎಂಬ ನಿರ್ಧಾರಕ್ಕೆ ಬಂದು ವರ್ಷ ಕಳೆದಿದೆ. ಅದರ ಭಾಗವಾಗಿಯೇ ಜನನಾಯಕ ಯಡಿಯೂರಪ್ಪರನ್ನು ಬಿಜೆಪಿಯ ಬುದ್ಧಿವಂತರೇ ಸೇರಿಕೊಂಡು ಜಿಲ್ಲಾ ನಾಯಕನ ಮಟ್ಟಕ್ಕೆ ಇಳಿಸಿ ಸಂತೋಷಿದ್ದು. ಯಡಿಯೂರಪ್ಪ ನಮ್ಮ ನಾಯಕ ಎಂದು ಪಾಕ್ಷಿಕ-ಮಾಸಿಕ ಕಂತುಗಳಲ್ಲಿ ಹೇಳುವ ಬಲವಂತಿಕೆಯಲ್ಲಿ ಸಿಲುಕಿದ್ದಾರೆ ಕರ್ನಾಟಕದ ಬಿಜೆಪಿಯ ನಾಯಕರು ಮತ್ತು ದೆಹಲಿಯಲ್ಲಿ ಕೂತಿರುವ ಬಿಜೆಪಿಯ ಮಹಾನುಭಾವರು.
ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಜನಸಂಕಲ್ಪ ಮತ್ತು ಜನಸ್ಪಂದನಾ ಕಾರ್ಯಕ್ರಮ ಆರಂಭಿಸಿತ್ತು. ಯಡಿಯೂರಪ್ಪನವರೇ ಆ ಯಾತ್ರೆಯ ನಿಜವಾದ ನೇತಾರ ಎಂದು ಬಿಜೆಪಿ ಬಣ್ಣಿಸಲು ಪ್ರಯತ್ನಿಸಿತ್ತು. ತಾವು ಸಿಎಂ ಆಗಿದ್ದರೂ ಅಂಥದೊಂದು ಅತಿ ವಿನಯವನ್ನು ಬಸವರಾಜ ಬೊಮ್ಮಾಯಿ ಪ್ರದರ್ಶಿಸಿದ್ದರು. ಆದರೆ ಬಳಿಕ ಯಡಿಯೂರಪ್ಪನವರೇ ಆ ಕಾರ್ಯಕ್ರಮಗಳಿಂದ ದೂರ ಉಳಿದರು.
ಮೋದಿ, ಅಮಿತ್ ಶಾ, ಸಂತೋಷ್ ಗುರಿಯೂ ಇದೇ:
ಮೋದಿ, ಶಾ ಮಾತಿಲ್ಲದೇ ಬಿಜೆಪಿಯಲ್ಲಿ ಒಂದು ಹುಲ್ಲು ಕಡ್ಡಿಯೂ ಅಲ್ಲಾಡಲ್ಲ. ಹಾಗಿರುವಾಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಭಾಗವಹಿಸುವ ಕಾರ್ಯಕ್ರಮದಲ್ಲಿ ಕರ್ನಾಟಕದಲ್ಲಿ ಬಿಜೆಪಿಯ ಏಕೈಕ ನಾಯಕ ಯಡಿಯೂರಪ್ಪ (ಉಳಿದ ಬಿಜೆಪಿ ನಾಯಕರಿಗೆ ತಮ್ಮ ಕ್ಷೇತ್ರಗಳನ್ನು ಬಿಟ್ಟು ಉಳಿದ ಕಡೆ ಪಕ್ಷವನ್ನು ಗೆಲ್ಲಿಸುವ ತಾಕತ್ತು ಇಲ್ಲ) ಅವರನ್ನು ಯಾಕೆ ಆಹ್ವಾನಿಸಲಿಲ್ಲ..? ಎಂಬ ಪ್ರಶ್ನೆಗೆ ಉತ್ತರ ಅತ್ಯಂತ ಸರಳ: ಯಡಿಯೂರಪ್ಪ ಮೂಲೆಗಂಪು ಮಾಡುವುದು, ಏನಿದ್ದರೂ ಮೋದಿ, ಶಾ, ಸಂತೋಷ್ ಮಾತಷ್ಟೇ ನಡೆಯುವುದು, ಈ ಮೂವರಷ್ಟೇ ನಾಯಕರು ಎಂಬ ಸಂದೇಶ ರವಾನಿಸುವುದು.
ಅವಧಿಗೂ ಮೊದಲೇ ಯಡಿಯೂರಪ್ಪರನ್ನು ಇಳಿಸಿದ್ದರ ಪ್ರಯೋಗವೂ ಅದೇ ರಣತಂತ್ರದ ಭಾಗ. ಮುಖ್ಯಮಂತ್ರಿ ಪದವಿಯಿಂದ ಇಳಿಸಿದ್ದರ ಬಳಿಕ ಯಡಿಯೂರಪ್ಪರನ್ನ ಹಲವು ಪ್ರಮುಖ ಕಾರ್ಯಕ್ರಮಗಳಿಗೆ ಆಹ್ವಾನಿಸದೇ ದೂರ ಇಟ್ಟಿದ್ದು ಕೂಡಾ ಅದರ ಅಂಶವೇ. ಪುತ್ರ ವಿಜಯೇಂದ್ರಗೆ ಎಂಎಲ್ಸಿ ಸ್ಥಾನ ಕೊಡದೇ ಇರುವುದು ಅದೇ ಲೆಕ್ಕಾಚಾರ. ಸಂಪುಟ ವಿಸ್ತರಣೆ ಮಾಡದೇ ಸಚಿವ ಸ್ಥಾನ ಕೊಡದೇ ಇರುವುದು ಕೂಡಾ ಅದೇ ತಂತ್ರದ ಭಾಗ. ಈಗ ಜಿಲ್ಲಾ ನಾಯಕನ ಮಟ್ಟಕ್ಕೆ ಯಡಿಯೂರಪ್ಪರನ್ನು ಇಳಿಸಿದ್ದು ಕೂಡಾ ಅದೇ ತಂತ್ರದ ಅಂಶ.
ಅಂದೂ ಅವಮಾನ, ಇಂದೂ ಅವಮಾನ:
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ್ಲೆಲ್ಲ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿದ್ದೇವೆ ಎನ್ನುವ ಬಿಜೆಪಿಯವರಿಗೆ ಇನ್ನೊಂದು ವಿಷಯವೂ ಚೆನ್ನಾಗಿ ಗೊತ್ತಿದೆ: ಕರ್ನಾಟಕದಲ್ಲಿ ಎರಡು ಬಾರಿ ಅಧಿಕಾರಕ್ಕೆ ಬರಲು, ಒಂದು ಬಾರಿ ಸಮ್ಮಿಶ್ರ ಸರ್ಕಾರ ರಚಿಸಿಕೊಳ್ಳಲು ಯಡಿಯೂರಪ್ಪನವರ ನಾಯಕತ್ವವಷ್ಟೇ ಕಾರಣ. ಆದರೆ 2008ರಲ್ಲಿ ಬಿಜೆಪಿಯವರೇ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರದ ಅಸ್ತç ಝಳಪಿಸಿ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರು, 2019ರಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಬಿ ಎಲ್ ಸಂತೋಷ್ ಈ ಮೂವರು ಸೇರಿಕೊಂಡು ಅವಧಿಗೂ ಮೊದಲೇ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಪದವಿಯಿಂದ ಪದಚ್ಯುತಗೊಳಿಸಿದರು. ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಎರಡು ಬಾರಿಯೂ ಯಡಿಯೂರಪ್ಪರನ್ನು ಅವಮಾನಿಸಿ, ಅಪಮಾನಿಸಿ, ಕಣ್ಣೀರು ಹಾಕಿಸಿಯೇ ಇಳಿಸಿದೆ.
ಯಡಿಯೂರಪ್ಪರೇ ಜನಪ್ರಿಯ, ಮೋದಿಯಲ್ಲ:
ಕರ್ನಾಟಕದಲ್ಲಿ ಈಗ ಪ್ರಧಾನಿ ಮೋದಿ ಅಷ್ಟೊಂದು ಜನಪ್ರಿಯರಾಗಿ ಉಳಿದಿಲ್ಲ. ಕರ್ನಾಟಕದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈಗಲೂ ಯಡಿಯೂರಪ್ಪನವರೇ ಬಿಜೆಪಿ ಪಾಲಿನ ಏಕೈಕ ಜನಪ್ರಿಯ ನಾಯಕ. 2018ರಲ್ಲಿ ಮೋದಿ ಅಲೆಯ ಹೊರತಾಗಿಯೂ ಬಿಜೆಪಿಗೆ ಸಿಕ್ಕಿದ್ದು ಕೇವಲ 104 ಸ್ಥಾನಗಳಲ್ಲಷ್ಟೇ. ಆ ಸೀಟುಗಳೂ ದಕ್ಕಿದ್ದು ಮೋದಿಯವರಿಗಿಂತ ಹೆಚ್ಚು ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿ ಆಗ್ತಾರೆ ಎಂಬ ಕಾರಣದಿಂದ ಎನ್ನುವುದು ಬಿಜೆಪಿಯವರಿಗೂ ತಿಳಿಯದ ವಿಷಯವೇನಲ್ಲ.
ಆದರೂ ಕರ್ನಾಟಕದಲ್ಲಿ ಬಿಜೆಪಿ ಪಾಲಿನ ಏಕೈಕ ನಾಯಕ, ಲಿಂಗಾಯತ ಸಮುದಾಯದ ಪ್ರಶ್ನಾತೀತ ರಾಜಕೀಯ ನಾಯಕನನ್ನು ತುಳಿಯುವ ಪ್ರಯತ್ನ.
ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಇವತ್ತು ಮತದಾನ ಆರಂಭವಾಗಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿAದಲೇ ಮತದಾನ ಆರಂಭವಾಗಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿರುವ...
ನವೆಂಬರ್ 6ರಂದು ಅಂದರೆ ನಾಳೆ ಬುಧವಾರ ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರು ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ...
ಮುಡಾ ಹಗರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನವೆಂಬರ್ 26ಕ್ಕೆ ಮುಂದೂಡಿದೆ. ಜೊತೆಗೆ ಮುಡಾ ಹಗರಣ...
ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಇದೇ ನವೆಂಬರ್ 9ರ ಬೆಳಗ್ಗೆ 6 ಗಂಟೆಯಿAದ ನವೆಂಬರ್ 11ರ ಬೆಳಗ್ಗೆ 6 ಗಂಟೆಯವರೆಗೆ ಪ್ರವಾಸಿಗರಿಗೆ...