ADVERTISEMENT
ಅಕ್ಷಯ್ ಕುಮಾರ್ ಯು, ಪ್ರತಿಕ್ಷಣ ಸಂಪಾದಕರು
ಕರ್ನಾಟಕದಲ್ಲಿ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಮತ್ತೆ ಜೀವ ಕಳೆ ಪಡೆದು ನೆಲೆಯೂರುವ ಮತ್ತು ಆ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ತೃತೀಯ ರಂಗದಲ್ಲಿ ಪ್ರಭಾವಿ ಭಾಗವಾಗುವ ಜ್ಯಾತ್ಯಾತೀತ ಜನತಾದಳದ (ಜೆಡಿಎಸ್) ಕನಸು, ಬಯಕೆಗಳೆಲ್ಲ ಭಗ್ನಗೊಳುತ್ತಿದ್ದಂತೆ ಪಕ್ಷ ಮತ್ತಷ್ಟು ಸೈದ್ಧಾಂತಿಕ ಅಧಃಪತನದತ್ತ ಹೆಜ್ಜೆ ಇಟ್ಟಿದೆ.
ಪಂಚರತ್ನ, ಜಲಾಧಾರೆ ಮೂಲಕ 123 ಸ್ಥಾನಗಳ ಗುರಿಯೊಂದಿಗೆ ದ್ವಿಗ್ವಿಜಯದ ರಣಕಹಳೆ ಮೊಳಗಿಸಿ ಹೊರಟ ಕುಮಾರಸ್ವಾಮಿ ಅವರ ನಾಯಕತ್ವಕ್ಕೆ ದಕ್ಕಿದ್ದು 19 ಸೀಟುಗಳಷ್ಟೇ.
ಕುಮಾರಸ್ವಾಮಿ ನಾಯಕತ್ವ-ನೆಲಕಚ್ಚಿದ ಜೆಡಿಎಸ್:
24 ವರ್ಷಗಳ ಇತಿಹಾಸದ ಜೆಡಿಎಸ್ 20 ವರ್ಷಗಳ ಬಳಿಕ ಮತ್ತೊಮ್ಮೆ ನೆಲಕಚ್ಚಿದೆ. ಕರ್ನಾಟಕದಲ್ಲಿ ಹಳೆ ಮೈಸೂರು ಭಾಗಕ್ಕಷ್ಟೇ ಸೀಮಿತವಾಗಿರುವ ಪ್ರಾದೇಶಿಕ ಜೆಡಿಎಸ್ನ್ನು ಮತದಾರರ ಎಳ್ಳಷ್ಟೂ ಕರುಣೆ, ಅನುಕಂಪ ತೋರಿಸದೇ ತಿರಸ್ಕರಿಸಿಬಿಟ್ಟಿದ್ದಾನೆ.
ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ಗೆ ಮತ್ತೊಮ್ಮೆ ಚೈತನ್ಯ ತುಂಬುವ ಹೆಬ್ಬಕೆ ನುಚ್ಚು ನೂರಾಗಿದೆ. ಹಾಗೆ ನೋಡಿದರೆ ಕುಮಾರಸ್ವಾಮಿ ಜೆಡಿಎಸ್ನ ನಾಯಕತ್ವ ಮತ್ತು ಮುಖವಾದ ಬಳಿಕವೂ ಜೆಡಿಎಸ್ ಪಕ್ಷ ಸಿದ್ದರಾಮಯ್ಯನವರು ಜೆಡಿಎಸ್ ನಾಯಕರಾಗಿದ್ದಾಗ ಗಳಿಸಿದ ಸೀಟುಗಳ ದಾಖಲೆಗಳನ್ನು ಮುರಿಯಾಗಿಲ್ಲ.
1999ರಲ್ಲಿ ಜೆಡಿಎಸ್ 10 ಸೀಟು ಗೆದ್ದಿದ್ದರೆ, 2004ರಲ್ಲಿ ಸಿದ್ದರಾಮಯ್ಯ ಅವರ ಜೆಡಿಎಸ್ನಲ್ಲೇ ಇದ್ದಾಗ 58 ಸೀಟುಗಳನ್ನು ಗೆದ್ದುಕೊಂಡಿತ್ತು. ಇದು ಜೆಡಿಎಸ್ನ ಸಾರ್ವಕಾಲಿಕ ದಾಖಲೆ. ಇದಾದ ಬಳಿಕ 2008ರಲ್ಲಿ ಕೇವಲ 28 (ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಎದುರಿಸಿದ ಮೊದಲ ಚುನಾವಣೆ, 30 ಸೀಟು ನಷ್ಟ), 2013ರಲ್ಲಿ 40, 2018ರಲ್ಲಿ ಕುಮಾರಸ್ವಾಮಿ ಮತ್ತು ಜೆಡಿಎಸ್ ಪರ ಅಲೆ ಇದ್ದಾಗ್ಯೂ 37 ಮತ್ತು ಈಗ ಕೇವಲ 19ಕ್ಕೆ ಕುಸಿದಿದೆ.
ಸೈದ್ಧಾಂತಿಕ ಬದ್ಧತೆ ಇಲ್ಲದ ಜೆಡಿಎಸ್: ಐದು ವರ್ಷಕ್ಕೊಮ್ಮೆ ಸಿದ್ಧಾಂತ ಬದಲು
ಜೆಡಿಎಸ್ಗೆ ಸೈದ್ಧಾಂತಿಕ ಬದ್ಧತೆ ಇಲ್ಲದಿರುವುದೇ ಪಕ್ಷಕ್ಕಂಟಿಗೊಂಡಿರುವ ದೊಡ್ಡ ದೋಷ. ಚುನಾವಣೆಗೂ ಮೊದಲು ಮತ್ತು ಚುನಾವಣೆಯ ಬಳಿಕ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರತಿ ಐದು ವರ್ಷಕ್ಕೊಮ್ಮೆ ತಮ್ಮ ಸಿದ್ಧಾಂತವನ್ನು ಬದಲಿಸಿಕೊಂಡು ಬರುತ್ತಿರುವುದು ಅವರ ಬಗೆಗಿನ ಜನನಂಬಿಕೆಗೆ ದೊಡ್ಡ ಘಾಸಿ ಉಂಟು ಮಾಡಿದೆ.
2004ರಲ್ಲಿ ಯಡಿಯೂರಪ್ಪ ಅವರೊಂದಿಗಿನ ಸಮ್ಮಿಶ್ರ ಸರ್ಕಾರ ರಚನೆ ಮಹಾ ಅಪರಾಧವಾಯಿತೆಂದು ಹೇಳುತ್ತ ಬಂದ ಕುಮಾರಸ್ವಾಮಿ 2013ರಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದಾಗ ಐದು ವರ್ಷ ಕಾಂಗ್ರೆಸ್ನ್ನು ಬಿಜೆಪಿಗಿಂತಲೂ ಕಾಡಿದ್ದು ಹಗಲು-ರಾತ್ರಿ ಎನ್ನದೇ ಕಾಡಿದ್ದು ಕುಮಾರಸ್ವಾಮಿಯವರೇ.
ಸಿದ್ದರಾಮಯ್ಯನವರು ಕೈಗೆ ಕಟ್ಟಿಕೊಂಡ ಹುಬ್ಲೋಟ್ ವಾಚ್ನ್ನು ಮತ ರಾಜಕಾರಣದ ಸರಕ್ಕಾಗಿ ಬಳಸಿಕೊಂಡರು ಕುಮಾರಸ್ವಾಮಿ. ಐಎಎಸ್ ಅಧಿಕಾರಿ ಡಿಕೆ ರವಿ ಸಾವು, ಪೊಲೀಸ್ ಅಧಿಕಾರಿ ಎಂ ಕೆ ಗಣಪತಿ ಸಾವನ್ನೂ ಕಾಂಗ್ರೆಸ್ ವಿರುದ್ಧ ಅಸ್ತ್ರವಾಗಿಸಿಕೊಂಡರು.
ಅಧಿಕಾರ ಕೊಟ್ಟಾಗ, ಅಧಿಕಾರ ಕಳೆದುಕೊಂಡ ಬಳಿಕ:
ಆದ್ರೆ 2018ರಲ್ಲಿ ಅತಂತ್ರ ವಿಧಾನಸಭೆ ರಚನೆಯಾದಾಗ ಕಾಂಗ್ರೆಸ್ ಬೆಂಬಲದೊಂದಿಗೆ ಮುಖ್ಯಮಂತ್ರಿ ಆಗಲು ಕುಮಾರಸ್ವಾಮಿ ಕಿಂಚಿತ್ತೂ ಹಿಂಜರಿಯಲಿಲ್ಲ. ಯಾವ ಪಕ್ಷದ ವಿರುದ್ಧ ಬಿಜೆಪಿಗಿಂತಲೂ ಅಧಿಕ ಟೀಕೆ-ಟಿಪ್ಪಣಿಗಳು ಮಾಡಿದರೋ ಅದೇ ಪಕ್ಷ ಕೊಟ್ಟ ಮುಖ್ಯಮಂತ್ರಿ ಗಾದಿಯನ್ನೂ ಕ್ಷಣ ಮಾತ್ರ ಚಿಂತಿಸದೇ ಏರಿದ್ದರೂ ಕುಮಾರಸ್ವಾಮಿ. ತಮ್ಮ ಅಧಿಕಾರದ ಆತುರಕ್ಕೆ ಸರ್ಕಾರ ಬಿದ್ದ ಬಳಿಕ ಕಾರಣಗಳನ್ನು ಕೊಟ್ಟು ಸಮರ್ಥನೆಗಿಳಿದರು ಹೆಚ್ಡಿಕೆ.
2019ರ ಜುಲೈನಲ್ಲಿ ಸಮ್ಮಿಶ್ರ ಸರ್ಕಾರ ಬಿದ್ದ ಬಳಿಕ ಇದೇ ಕುಮಾರಸ್ವಾಮಿ ಮತ್ತೆ ತಮ್ಮ ಸೈದ್ಧಾಂತಿಕ ವರಸೆ ಬದಲಿಸಿದರು, ಜೊತೆಗಿದ್ದ ಮಿತ್ರ ಪಕ್ಷದ ವಿರುದ್ಧವೇ ಮುಗಿಬಿದ್ದರು.
ಅಧಿಕಾರ ಕಳೆದುಕೊಂಡ ಬಳಿಕ ಕುಮಾರಸ್ವಾಮಿ ಕಾಂಗ್ರೆಸ್, ಸಿದ್ದರಾಮಯ್ಯ, ಡಿಕೆಶಿವಕುಮಾರ್ ಅವರನ್ನು ಸಮಯ ಸಿಕ್ಕಾಗಲೆಲ್ಲ ತೆಗಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಲು ಶುರು ಮಾಡಿದರು. ಮೋದಿಯವರು ನನಗೆ ಮುಖ್ಯಮಂತ್ರಿ ಹುದ್ದೆಯ ಆಫರ್ನ್ನು ಕೊಟ್ಟಿದ್ದರು ಎಂದೂ ಹೇಳಿದರು ಹೆಚ್ಡಿಕೆ. ಆಡಳಿತದಲ್ಲಿದ್ದ ಬಿಜೆಪಿಗೆ ವಿರೋಧ ಪಕ್ಷವಾಗುವ ಬದಲು ವಿರೋಧ ಪಕ್ಷ ಕಾಂಗ್ರೆಸ್ಗೆ ವಿರೋಧ ಪಕ್ಷವಾದರು ಕುಮಾರಸ್ವಾಮಿ.
ಆದರೆ ಬಿಜೆಪಿಗೆ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ದೆಹಲಿಯಲ್ಲಿ ಹೀನಾಯ ಸೋಲಿನ ಮುಖಭಂಗವಾದಾಗ ಸಂಭ್ರಮಿಸಿದರು ಕುಮಾರಸ್ವಾಮಿ. ಪಶ್ಚಿಮ ಬಂಗಾಳಕ್ಕೆ ತೆರಳಿ ಮಮತಾ ಬ್ಯಾನರ್ಜಿ ಪಕ್ಷದ ಪರ ಪ್ರಚಾರವನ್ನೂ ಮಾಡಿದರು ಹೆಚ್ಡಿಕೆ.
ಇದಾದ ಬಳಿಕ ಕಳೆದ ವರ್ಷ ರಾಷ್ಟ್ರ ರಾಜಕಾರಣದ ಮಟ್ಟದಲ್ಲಿ ತೃತೀಯ ರಂಗಕ್ಕೆ ಹೊಸ ಜೀವ ಕೊಡಬೇಕೆಂಬ ಪ್ರಯತ್ನ ಮತ್ತೆ ಚುರುಕಾಯಿತು. ತೆಲಂಗಾಣ ರಾಷ್ಟ್ರಸಮಿತಿ (ಈಗಿನ ಬಿಆರ್ಎಸ್) ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್ ನೇತೃತ್ವದಲ್ಲಿ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕೆಸಿಆರ್ ಮತ್ತು ನಿತೀಶ್ ಕುಮಾರ್ ಇಬ್ಬರನ್ನೂ ಹೆಚ್ಡಿಕೆ ಭೇಟಿಯಾಗಿ ಬಿಜೆಪಿಯನ್ನು ದೇಶದಲ್ಲಿ ಅಧಿಕಾರದಿಂದ ಕಿತ್ತೊಗೆಯಲು ತೃತೀಯ ರಂಗ ಬಲವರ್ಧನೆಯ ಬಗ್ಗೆ ಮಾತಾಡಿದ್ದರು. ಡಿಸೆಂಬರ್ನಲ್ಲಿ ಕೆಸಿಆರ್ ಅವರ ಬಿಆರ್ಎಸ್ ಪಕ್ಷದ ಆರಂಭ ಕಾರ್ಯಕ್ರಮದಲ್ಲೂ ಹೆಚ್ಡಿಕೆ ಭಾಗಿಯಾಗಿದ್ದರು.
ಈ ವರ್ಷದ ಮಾರ್ಚ್ನಲ್ಲಿ ಮಮತಾ ಬ್ಯಾನರ್ಜಿ ಭೇಟಿ ವೇಳೆಯೂ ಹೆಚ್ಡಿಕೆ ರಣತಂತ್ರ ಬಿಜೆಪಿ ವಿರುದ್ಧವೇ ಇತ್ತು, ಮಮತಾ ಅವರಿಗೆ ಕರ್ನಾಟಕದಲ್ಲಿ ಜೆಡಿಎಸ್ ಪರ ಪ್ರಚಾರ ಮಾಡುವಂತೆ ಕರೆಯನ್ನೂ ನೀಡಿದ್ದರು ಹೆಚ್ಡಿಕೆ.
ಚುನಾವಣೆ ಬದಲಾದ ಬಳಿಕ ಬದಲಾದ ವರಸೆ:
ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಕುಮಾರಸ್ವಾಮಿ ಅವರು ಈಗ 2013ರಲ್ಲಿ ಮಾಡಿದಂತೆ ಮತ್ತೆ ಸಿಎಂ ಸಿದ್ದರಾಮಯ್ಯನವರ ವಿರುದ್ಧ, ಕಾಂಗ್ರೆಸ್ನ ವಿರುದ್ಧ ಮುಗಿಬಿದ್ದಿದ್ದಾರೆ. 2019ರಿಂದ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಬಹುತೇಕ ಮೌನ ವಹಿಸಿದ್ದ ಕುಮಾರಸ್ವಾಮಿ 7 ದಿನಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನರನ್ನು ಪ್ರಚೋದಿಸುವ ಪ್ರಯತ್ನ ತೀವ್ರಗೊಳಿಸಿದ್ದಾರೆ.
ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಕುಮಾರಸ್ವಾಮಿ ಮೌನ:
ಬಿಜೆಪಿ ಆಡಳಿತ ಬಗ್ಗೆ ಜನರಿಗೆ ಆಕ್ರೋಶ ಇತ್ತು. ನಾವು ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಹೆಚ್ಚು ಗಮನ ಕೊಡಲು ಆಗಲಿಲ್ಲ. ಅದರ ಬಗ್ಗೆ ಮಾತಾಡಿದರೆ ಜಾತಿ ಬಣ್ಣ ಕಟ್ಟಬಹುದು ಅಂತ ಸಮ್ಮನೆ ಆದ್ವಿ
ಎಂದು ಅತ್ಯಂತ ಬಾಲಿಶವಾದ ಸಮರ್ಥನೆಯನ್ನು ಜೆಡಿಎಸ್ ಆತ್ಮಾವಲೋಕನ ಸಭೆಯಲ್ಲಿ ಕೊಟ್ಕೊಂಡಿದ್ದಾರೆ ಹೆಚ್ಡಿಕೆ.
ದಲಿತ, ಮುಸಲ್ಮಾನ ವಿರುದ್ಧ ಕುಮಾರಸ್ವಾಮಿ ಕಿಡಿ-ಕೆಂಡ:
ಬಿಜೆಪಿ ಆಡಳಿತದಲ್ಲಿ ಮುಸಲ್ಮಾನರ ವಿರುದ್ಧ ಸರ್ಕಾರ ನಡೆದುಕೊಂಡಿತ್ತು. ಆಗ ಆ ಸಮುದಾಯದ ಪರವಾಗಿ ಮಾತಾಡಿದ್ದು ನಾನು. ಆದರೆ ನಮಗೆ ಆ ಸಮುದಾಯ ಈ ಬಾರಿ ಕೈ ಹಿಡಿಯಲಿಲ್ಲ.
ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ಬಳಿಕ ಆ ಸಮುದಾಯ (ದಲಿತ ಸಮುದಾಯ) ಅವರ ಪರವಾಗಿ ನಿಂತಿದ್ದು ಅವರಿಗೆ ಪ್ಲಸ್ ಆಯಿತು. ಜೆಡಿಎಸ್ಗೆ ಮತ ಹಾಕಿದರೆ ಬಿಜೆಪಿಗೆ ಹೋಗ್ತಾರೆ ಎಂದು ಕಾಂಗ್ರೆಸ್ನವರು ಹೇಳಿದರು. ಇದು ಮತ್ತೊಂದು ಸಮಾಜದ ಮೇಲೆ ಪ್ರಭಾವ ಬೀರಿತು.
ಕಾಂಗ್ರೆಸ್ ಅಸ್ತ್ರಗಳೇ ಜೆಡಿಎಸ್ಗೆ ಅಸ್ತ್ರ. ಇದೊಂದೇ ಅಸ್ತ್ರ ಸಾಕು ನಿಮಗೆ. ಇದು ಅಸ್ತ್ರ ಇಟ್ಕೊಂಡು ಹೋಗಿ. ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟಿದರೆ ಅಧಿಕಾರ (ಜೆಡಿಎಸ್ಗೆ ಅಧಿಕಾರ) ಬರುವ ಅವಕಾಶ ದೂರ ಇಲ್ಲ. ಕಾಂಗ್ರೆಸ್ ಕುತಂತ್ರದಿಂದ ನಮಗೆ ಸೋಲಾಯಿತು
ಜೆಡಿಎಸ್ನ ಆತ್ಮಾವಲೋಕನ ಸಭೆಯಲ್ಲಿ ಕುಮಾರಸ್ವಾಮಿ ಅವರು ಆಡಿದ ಮಾತುಗಳನ್ನು ಗಮನಿಸಿದರೆ ಕುಮಾರಸ್ವಾಮಿ ಅವರು ಬಿಜೆಪಿಗೆ ಕಡೆಗೆ ಮತ್ತೊಮ್ಮೆ ವಾಲಿದಂತಿದೆ.
ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಚುನಾಯಿತ ಸರ್ಕಾರದ ವಿರುದ್ಧ ಬಿಜೆಪಿ ಜೊತೆ ಸೇರಿ ಜನರನ್ನು ಎತ್ತಿಕಟ್ಟಲು ಜೆಡಿಎಸ್ ಕಾರ್ಯಕರ್ತರಿಗೆ ಪ್ರಚೋದನೆ ನೀಡುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ.
ಬಿಜೆಪಿಯತ್ತ ಮತ್ತೆ ವಾಲಿದ ಕುಮಾರಸ್ವಾಮಿ:
ಹೀನಾಯ ಚುನಾವಣಾ ಸೋಲಿನ ಬಳಿಕ ಜೆಡಿಎಸ್ ಮತ್ತೆ ಬಿಜೆಪಿಯತ್ತ ವಾಲಿದೆ.
ಹೊಸ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಹೋಗಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ.
ವಿಚಿತ್ರ ಎಂದರೆ 2018ರಿಂದ ರಾಷ್ಟ್ರ ಮಟ್ಟದ ರಾಜಕೀಯದಲ್ಲೂ ಶಕ್ತಿಯಾಗಬೇಕೆಂದು ಕುಮಾರಸ್ವಾಮಿ ಯಾರ ಜೊತೆಗೆ ಓಡಾಡಿದರೋ ಅವರೆಲ್ಲರೂ ಈಗ ಉದ್ಘಾಟನಾ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದ್ದಾರೆ. ಬಿಜೆಪಿ ವಿರುದ್ಧ ರಾಷ್ಟ್ರೀಯ ಒಕ್ಕೂಟದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.
ಬಿಆರ್ಎಸ್ (ಈ ಹಿಂದಿನ ಟಿಆರ್ಎಸ್), ಆಮ್ ಆದ್ಮಿ ಪಕ್ಷ, ತೃಣಮೂಲ ಕಾಂಗ್ರೆಸ್, ನಿತೀಶ್ ಅವರ ಜೆಡಿಯು, ಆರ್ಜೆಡಿ, ಸಿಪಿಐ, ಸಿಪಿಐಎಂ, ಸಮಾಜವಾದಿ ಪಕ್ಷ, ವಿಸಿಕೆ ಈ ಪಕ್ಷಗಳೆಲ್ಲವೂ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿವೆ, ಆದ್ರೆ ಜೆಡಿಎಸ್ ಮಾತ್ರ ಭಾಗವಹಿಸುತ್ತಿದೆ.
ಸೈದ್ಧಾಂತಿಕ ಬದ್ಧತೆ ಕಳೆದುಕೊಂಡ ಕುಮಾರಸ್ವಾಮಿ:
ಬಹುಶಃ ಭಾರತದ ರಾಜಕಾರಣದಲ್ಲಿ ಇಷ್ಟು ವೇಗದಲ್ಲಿ, ಆತುರದಲ್ಲಿ, ಪ್ರತಿ ಚುನಾವಣೆಗೂ ಸಿದ್ಧಾಂತಗಳನ್ನು ಬದಲಾಯಿಸಿಕೊಳ್ಳುತ್ತಿರುವ ಪಕ್ಷ ಮತ್ತು ನಾಯಕ ಮತ್ಯಾರಿಲ್ಲ, ಅದು ಜೆಡಿಎಸ್ ಮತ್ತು ಕುಮಾರಸ್ವಾಮಿ ಮಾತ್ರ ಎಂದರೆ ಉತ್ಪ್ರೇಕ್ಷೆ ಆಗಲಾರದು.
ಯಾವುದೇ ಮೈತ್ರಿಕೂಟದ ಜೊತೆಗೆ ಗುರುತಿಸಿಕೊಳ್ಳದ ಪಕ್ಷಗಳೂ ಕುಮಾರಸ್ವಾಮಿ ಅವರಷ್ಟು ವೇಗದಲ್ಲಿ ಸಮಯಲಾಭಕ್ಕಾಗಿ ಸಿದ್ಧಾಂತ ಬದಲಿಸಿಕೊಂಡಿಲ್ಲ. ಹೀಗಾಗಿ ಕುಮಾರಸ್ವಾಮಿ ಅವರು ಇತರೆ ಪ್ರಾದೇಶಿಕ ನಾಯಕರಾದ ಎಂಕೆ ಸ್ಟಾಲಿನ್, ಮಮತಾ ಬ್ಯಾನರ್ಜಿ, ಪಿಣರಾಯ್ ವಿಜಯನ್ ಅವರ ಸಾಲಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ.
ಈ ಬಾರಿ ಹೀನಾಯ ಚುನಾವಣಾ ಸೋಲಿಗೆ ಕುಮಾರಸ್ವಾಮಿ ಅವರು ಸೈದ್ಧಾಂತಿಕ ಬದ್ಧತೆ ಕಳೆದುಕೊಂಡಿದ್ದು ಮತ್ತು ಅಧಿಕಾರಕ್ಕಾಗಿ ಯಾರ ಜೊತೆಗೆ ಬೇಕಾದರೂ ಸಿದ್ಧಾಂತ ಮರೆತು ಹೋಗಲು ತುದಿಗಾಲಲ್ಲಿ ನಿಂತಿರುತ್ತಾರೆ ಎಂಬ ಜನಾಭಿಪ್ರಾಯವೇ ಪ್ರಮುಖ ಕಾರಣವಾಯಿತು.
ADVERTISEMENT