ಪ್ರತಿದಿನ ಒಂದಲ್ಲ ಒಂದು ಹಗರಣಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿದೆ. ಈ ಸರ್ಕಾರವನ್ನು ಯಾರು ತಾನೇ ಮೆಚ್ಚೆಕೊಳ್ತಾರೆ. ಬಿಜೆಪಿ ಕಾರ್ಯಕರ್ತರೂ ಮೆಚ್ಚುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸ್ವಪಕ್ಷದ ಸರ್ಕಾರದ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನಕ್ಕೊಂದು ಹಗರಣ ಬಯಲಾಗುತ್ತಿರುವಾಗ ಈ ಸರ್ಕಾರಕ್ಕೆ ಜನರಿಂದ ಒಳ್ಳೆಯ ಹೆಸರು ಬರುತ್ತದೆಯೇ? ಈ ಸರ್ಕಾರವನ್ನು ಬಿಜೆಪಿ ಕಾರ್ಯಕರ್ತರೂ ಮೆಚ್ಚುವುದಿಲ್ಲ ಎಂದು ಕೆಂಡಾಮಂಡಲವಾದರು.
ಸಾಫ್ಟ್ ಆಗಿ ಆಡಳಿತ ಮಾಡುತ್ತಿದ್ದೇನೆ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಗರಂ ಆದ ಅವರು, ಇದು ಒಬ್ಬ ಮುಖ್ಯಮಂತ್ರಿ ನೀಡುವ ಹೇಳಿಕೆಯಲ್ಲ. ಆಡಳಿತದಲ್ಲಿ ಸಾಫ್ಟ್ ಅಥವಾ ಹಾರ್ಡ್ ಅಂತಾ ಇಲ್ಲ. ಇರುವ ಸಾಂವಿಧಾನಿಕ ಅಧಿಕಾರವನ್ನು ಚಲಾಯಿಸಬೇಕು ಅಷ್ಟೇ. ನಿಮ್ಮ ಹಾರ್ಡ್ ವೆಪನ್ ಅನ್ನು ಹಗರಣ ಮಾಡಿದವರ ಮೇಲೆ ಬಳಸಿ ಎಂದು ಹೇಳಿದರು.
ಪಿಎಸ್ಐ ಹಗರಣದಲ್ಲಿ ಕಿಂಗ್ಪಿನ್ ಜೊತೆಗೆ ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದಾರೆ ಎಂದು ಹೇಳುತ್ತಿದ್ದಾರೆ. ಇಲ್ಲಿ ಶಾಸಕಾಂಗ, ಕಾರ್ಯಾಂಗ ಎರಡೂ ಹಗರಣದಲ್ಲಿ ಸೇರಿವೆ. ಸರ್ಕಾರಿ ತನಿಖಾ ಸಂಸ್ಥೆಗಳು ಪ್ರಾಮಾಣಿಕವಾಗಿ ವಿಚಾರಣೆ ನಡೆಸಿದಾಗ ಸಾರ್ವಜನಿಕರಿಗೆ ನಂಬಿಕೆ ಬರುತ್ತದೆ ಎಂದು ಸಲಹೆ ನೀಡಿದ್ದಾರೆ.
ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸಿದ ವಿಶ್ವನಾಥ್, ನಮ್ಮ ಪಕ್ಷದವರೇ ಆದ ಸಿ.ಟಿ.ರವಿ ಓಹೋಹೋ ಎಂದು ಬಾಯಿಗೆ ಬಂದಂತೆ ಮಾತನಾಡ್ತಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ವಿದ್ಯಮಾನಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡಬೇಕು. ನೀನು ಕಳ್ಳ-ನೀನು ಕಳ್ಳ ಎಂದರೆ ಸರಿಹೋಗುವುದಿಲ್ಲ ಎಂದು ಹೇಳಿದ್ದಾರೆ.