ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಹಂಗಾಮಿ ಅಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅವರ ಮನಪರಿವರ್ತನೆ ಆಗಿದೆ. ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ನಡೆಸುತ್ತಿರುವ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕ್ರೀಡೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕುಮಾರಸ್ವಾಮಿ ಅವರು ಮಾತಾಡಿದರು.
ಒಂದು ವೇಳೆ ನಾನು ಈ ಕಾರ್ಯಕ್ರಮಕ್ಕೆ ಬರದೇ ಹೋಗಿದ್ದರೆ ನನ್ನ ಜೀವನದಲ್ಲಿ ದೊಡ್ಡ ನಷ್ಟ ಆಗ್ತಿತ್ತು. ನನ್ನ ಕಣ್ಣು ತೆರೆಸಿದ್ದಾರೆ. ನಾನು ಪ್ರೀತಿಯಿಂದ ಬಂದಿದ್ದೇನೆ. ಕುಮಾರಸ್ವಾಮಿ ಈ ಹಿಂದೆ ಒಂದು ರೀತಿ ಮಾತಾಡ್ತಿದ್ರು, ಈಗ ಪ್ರಭಾಕರ್ ಭಟ್ ಅವರ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಹೇಳಿ ಬಹಳ ಜನ ಭಾವಿಸಬಹುದು. ಆ ಬದಲಾವಣೆಯನ್ನು ಇಲ್ಲಿ ನಾನು ಕಂಡಿದ್ದೇನೆ. ನನ್ನ ಹಿಂದಿನ ಕೆಲವು ಟೀಕೆಗಳು ಇರಬಹುದು, ಪ್ರತಿಕ್ರಿಯೆಗಳು ಇರಬಹುದು, ಅದಕ್ಕೆ ನಾನು ಅಂಜುವವನಲ್ಲ. ನನ್ನ ಮನಸ್ಸು ಪರಿವರ್ತನೆ ಆಗಿದೆ. ಯಾಕೆಂದ್ರೆ ಹಲವು ಬಾರಿ ತಪ್ಪುಗಳನ್ನು ಮಾಡ್ತೀವಿ. ಆ ತಪ್ಪುಗಳಾಗಬೇಕಾದರೆ ಕೆಲವರು ನಮಗೆ ಕೊಡುವ ಮಾಹಿತಿಗಳು ಇರುತ್ತವೆ, ನಮ್ಮನ್ನು ದಾರಿ ತಪ್ಪಿಸ್ತವೆ. ನಾನು ಈ ಸಂದರ್ಭದಲ್ಲಿ ವಿಷಾದವನ್ನೂ ವ್ಯಕ್ತಪಡಿಸಲಿಕ್ಕೆ ಇವತ್ತು ಪ್ರಾಮಾಣಿಕವಾಗಿ ನಾನು ಹೇಳ್ತಾ ಇದ್ದೇನೆ.
ಯಾವ ರೀತಿ ಇರಬೇಕೆಂದು ಕಲ್ಲಡ್ಕ ಪ್ರಭಾಕರ್ ಭಟ್ ಅವರು ನನಗೆ ಮಾರ್ಗದರ್ಶನ ಮಾಡಿದ್ದಾರೆ. ನನ್ನನ್ನು ಕರೆದು ಇಲ್ಲಿ ಮಾರ್ಗದರ್ಶನ ಮಾಡಿದ್ದಾರೆ
ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಮಾತಾಡಿದರು.
ಈ ಮೂಲಕ ಬಿಜೆಪಿ ಜೊತೆಗಿನ ಮೈತ್ರಿ ಬಳಿಕ ಕುಮಾರಸ್ವಾಮಿ ಅವರು ತಮ್ಮ ಸೈದ್ಧಾಂತಿಕ ಪಲ್ಲಟವನ್ನು ತೀವ್ರಗೊಳಿಸಿದ್ದಾರೆ.