ಜುಲೈ 14ರಿಂದ ಗೃಹಲಕ್ಷ್ಮಿಗೆ ಅರ್ಜಿ; ಮನೆಗೆ ಬರ್ತಾರೆ ಪ್ರಜಾಪ್ರತಿನಿಧಿ

ಮನೆಯೊಡತಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಜುಲೈ 14ರಂದು ಶುರುವಾಗಲಿದೆ.

ಆಗಸ್ಟ್ 15ರಂದು ಅರ್ಹ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಹಣ ಜಮೆ ಆಗಲಿದೆ.

ಪ್ರಜಾಪ್ರತಿನಿಧಿಗಳ ನೇಮಕ

ಗೃಹಲಕ್ಷ್ಮಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

ಅರ್ಜಿ ಸ್ವೀಕರಿಸಲು ಹಳ್ಳಿ, ವಾರ್ಡ್ ಮಟ್ಟದಲ್ಲಿ ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಈಗಾಗಲೇ ಯೋಜನೆ ಅನುಷ್ಠಾನಕ್ಕೆ ಅಗತ್ಯವಾದ ತಂತ್ರಾಂಶ ಗೃಹಲಕ್ಷ್ಮಿ ಆಪ್ ಅನ್ನು ಸರ್ಕಾರ ಸಿದ್ದಪಡಿಸಿದೆ.

ಪ್ರಜಾಪ್ರತಿನಿಧಿಗಳ ಕೆಲಸ ಏನು?

ಪ್ರಜಾಪ್ರನಿಧಿಯಾಗಿ ನೇಮಕಗೊಂಡವರ ಮೊಬೈಲ್​ಗೆ ಈ ಆಪ್​ ಅಳವಡಿಸಿ, ಲಾಗಿನ ಆಗಲು ಪ್ರತ್ಯೇಕ ಪಾಸ್​ವರ್ಡ್ ನೀಡಲಾಗುತ್ತದೆ.

ಪ್ರಜಾಪ್ರತಿನಿಧಿಗಳು ಆಪ್​ಗೆ ಲಾಗಿನ್ ಆಗಿ ಆನ್​ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ, ಪೂರಕ ದಾಖಲೆಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳನ್ನು ಅಪ್​ಲೋಡ್​ ಮಾಡಲಿದ್ದಾರೆ.

ಮುದ್ರಿತ ಅರ್ಜಿ ಪ್ರತಿಯನ್ನು ಫಲಾನುಭವಿಯ ಮೊಬೈಲ್​ಗೆ ಕಳಿಸುತ್ತಾರೆ.

ಬೆಂಗಳೂರು ಒನ್, ಗ್ರಾಮ ಒನ್, ನಾಡ ಕಚೇರಿಯಲ್ಲಿಯೂ ಅರ್ಜಿ ಸಲ್ಲಿಸಬಹುದಾಗಿದೆ. ಸೇವಾಸಿಂಧು ಪೋರ್ಟಲ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.

ಆಗಸ್ಟ್ 15ರಿಂದ ಖಾತೆಗೆ ಜಮೆ:

ಆಗಸ್ಟ್ 15ರಿಂದ ಬಿಪಿಎಲ್ ಕಾರ್ಡ್​ನಲ್ಲಿ ಮನೆ ಯಜಮಾನಿ ಎಂದು ಗುರುತಿಸಿಕೊಂಡ ಮಹಿಳೆಯ ಖಾತೆಗೆ 2000 ರೂಪಾಯಿ ನಗದು ಜಮೆ ಆಗಲಿದೆ.

ಈ ಯೋಜನೆಯಡಿ 1.28 ಕೋಟಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಹಣ ಸಂದಾಯ ಆಗಲಿದೆ.

ಈ ಯೋಜನೆಗೆ 30ಸಾವಿರ ಕೋಟಿ ರೂಪಾಯಿ ಅಗತ್ಯ ಬೀಳಬಹುದು ಎಂದು ಅಂದಾಜಿಸಲಾಗಿದೆ.