ಬಿಎಸ್​ವೈಗೆ ಮತ್ತೆ ಪ್ರಾಮುಖ್ಯತೆ.. ಯಾರಾಗ್ತಾರೆ ವಿರೋಧಪಕ್ಷದ ನಾಯಕ?

16ನೇ ವಿಧಾನಸಭೆಯ ಮೊದಲ ಜಂಟಿ ಅಧಿವೇಶನ ಶುರುವಾಗಲು ಕೇವಲ ಒಂದು ದಿನ ಉಳಿದಿದೆ. ಆದರೂ, ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂಬ ಗೊಂದಲದಲ್ಲಿ ಬಿಜೆಪಿ ಇದೆ.

ಭಾನುವಾರ ನಿಗದಿಯಾಗಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಸೋಮವಾರಕ್ಕೆ ಮುಂದೂಡಿಕೆ ಆಗಿದೆ. ಸೋಮವಾರ ಬೆಳಗ್ಗೆ ಕಲಾಪ ಶುರುವಾಗುವ ಮುನ್ನ ಬಿಜೆಪಿ ಶಾಸಕಾಂಗಪಕ್ಷದ ಸಭೆ ನಡೆಯುವ ಸಂಭವ ಇದೆ.

ಯಡಿಯೂರಪ್ಪಗೆ ಮತ್ತೆ ಪ್ರಾಮುಖ್ಯತೆ:

ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಯಡಿಯೂರಪ್ಪಗೆ ಮತ್ತೆ ಪ್ರಾಮುಖ್ಯತೆ ಸಿಕ್ಕಿದೆ. ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಹೈಕಮಾಂಡ್ ನಾಯಕರು ಬುಲಾವ್ ನೀಡಿದ್ದಾರೆ.

ಇಂದು ಮಧ್ಯಾಹ್ನ ದೆಹಲಿ ತಲುಪಲಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ. ವಿ

ರೋಧ ಪಕ್ಷದ ನಾಯಕರನ್ನಾಗಿ ಯಾರನ್ನು ಆರಿಸಬೇಕು? ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರನ್ನು ತಂದರೇ ಉತ್ತಮ ಎಂಬ ಬಗ್ಗೆ ಚರ್ಚೆ ನಡೆಸಲಿರುವ ಹೈಕಮಾಂಡ್​, ಯಡಿಯೂರಪ್ಪರಿಂದ ಅಭಿಪ್ರಾಯ ಪಡೆಯಲಿದೆ. ಬಳಿಕ ವಿರೋಧ ಪಕ್ಷದ ನಾಯಕರನ್ನು ಬಿಜೆಪಿ ವರಿಷ್ಠರು ಆಯ್ಕೆ ಮಾಡಲಿದ್ದಾರೆ.

ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಈವರೆಗೂ ರಾಜ್ಯದ ಯಾವ ನಾಯಕರಿಗೂ ಹೈಕಮಾಂಡ್ ಬುಲಾವ್ ನೀಡಿರಲಿಲ್ಲ ಎನ್ನುವುದು ಗಮನಾರ್ಹ ವಿಚಾರ.

ಯಾರಾಗ್ತಾರೆ ವಿರೋಧಪಕ್ಷದ ನಾಯಕ?

ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಪ್ರಮುಖವಾಗಿ ಬಸವರಾಜ ಬೊಮ್ಮಾಯಿ, ಬಸನಗೌಡಪಾಟೀಲ್  ಹೆಸರು ಕೇಳಿಬರುತ್ತಿವೆ. ಆದರೆ, ನಿರಂತರವಾಗಿ ತಮ್ಮ ವಿರುದ್ಧ ಬಹಿರಂಗವಾಗಿ ಹತ್ತು ಹಲವು ಆರೋಪ ಮಾಡಿ, ಸರ್ಕಾರದ ವರ್ಚಸ್ಸು ಕೆಡಲು ಯತ್ನಾಳ್ ಕಾರಣರಾಗಿದ್ದಾರೆ ಎಂಬ ಕೋಪ, ಅಸಮಾಧಾನ ಯಡಿಯೂರಪ್ಪರಲ್ಲಿ ಇದೆ.

ಹೀಗಾಗಿ ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ಯತ್ನಾಳ್ ಹೆಸರನ್ನು ಯಡಿಯೂರಪ್ಪ ಒಪ್ಪುವ ಸಾಧ್ಯತೆ ಬಹುತೇಕ ಕಡಿಮೆ ಇದೆ. ಹೀಗಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗುವ ಸಂಭವ ಹೆಚ್ಚಿದೆ.

ಆದರೆ, ಡಾರ್ಕ್ ಹಾರ್ಸ್ ರೀತಿ ಈ ಇಬ್ಬರನ್ನು ಹೊರತುಪಡಿಸಿ ಮೂರನೇಯವರನ್ನು ಪಕ್ಷದ ವರಿಷ್ಠರು ತಂದು ಕೂರಿಸಿದರೇ ಅಚ್ಚರಿ ಇಲ್ಲ ಎಂಬ ಮಾತು ಕೇಳಿಬರುತ್ತಿವೆ.

ಮೋದಿ ಸಂಪುಟದಲ್ಲಿ ರಾಜ್ಯದ ಯಾರಿಗೆ ಚಾನ್ಸ್?

ಶೀರ್ಘರವೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನಾರಚನೆ ಆಗಲಿದೆ. ಲೋಕಸಭೆ ರಾಜ್ಯದ ಯಾರನ್ನು ಕೈಬಿಟ್ಟು ಯಾರನ್ನು ಸೇರಿಸಿಕೊಂಡರೇ ಉತ್ತಮ ಎಂಬ ಚರ್ಚೆಗಳು ಹೈಕಮಾಂಡ್ ಮಟ್ಟದಲ್ಲಿ ನಡೆದಿವೆ. ಈ ಬಗ್ಗೆ ಯಡಿಯೂರಪ್ಪ ಅವರಿಂದ ಹೈಕಮಾಂಡ್ ನಾಯಕರು ಅಭಿಪ್ರಾಯ ಪಡೆಯಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ