ರಾಜ್ಯದ ಅತಿದೊಡ್ಡ ಸ್ಥಳೀಯ ಆಡಳಿತ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ಅತಿ ಶೀಘ್ರದಲ್ಲೇ ದಿನಾಂಕ ಘೋಷಣೆಯಾಗಲಿದೆ.
1 ಕೋಟಗೂ ಅಧಿಕ ಜನರನ್ನು ಹೊಂದಿರುವ ಬಿಬಿಎಂಪಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ 4 ವರ್ಷಗಳ ಬಳಿಕ ಚುನಾವಣೆ ನಡೆಸಲು ಮುಹೂರ್ತ ಫಿಕ್ಸ್ ಮಾಡಿದೆ. ಮುಂದಿನ 3-4 ತಿಂಗಳಲ್ಲಿ ಬಿಬಿಎಂಪಿಯ 225 ವಾರ್ಡ್ಗಳಿಗೆ ಚುನಾವಣೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಸಿಎಂ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಸಭೆಯಲ್ಲಿ ಬೆಂಗಳೂರಿನ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಬಿಬಿಎಂಪಿ ವಾರ್ಡ್ ವಿಂಗಡಣೆ ಕುರಿತಾಗಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ ಸಿಎಂ ಸಿದ್ದರಾಮಯ್ಯ, ಬೆಂಗಳೂರಿನ ವಾರ್ಡ್ ಗಳಲ್ಲಿ ಕಾರ್ಪೊರೇಟರ್ ಗಳಿಲ್ಲದೆ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಸಭೆಯಲ್ಲಿ BBMPಯ ಎಲ್ಲಾ 225 ವಾರ್ಡ್ಗಳು ಹಾಗೂ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಶಾಸಕರು ಮನವಿ ಮಾಡಿಕೊಂಡರು.
ಸಭೆಯ ನಂತರ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ. ಈ ಬಾರಿ ಪಾಲಿಕೆಯ ವಾರ್ಡ್ ಗಳನ್ನು 5 ಭಾಗಗಳಾಗಿ ವಿಂಗಡನೆ ಮಾಡಲು ತೀರ್ಮಾಮಿಸಲಾಗಿದೆ. ಇನ್ನು ಬಹಳ ದಿನಗಳ ಕಾಲ ಪಾಲಿಕೆ ಚುನಾವಣೆ ಮುಂದೂಡಲು ಸಾಧ್ಯವಿಲ್ಲ. ಹೀಗಾಗಿ ಸಿಎಂ ನೇತೃತ್ವದಲ್ಲಿ 3-4 ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಸಬೇಕೆಂದು ಚರ್ಚೆಯಾಗಿದ್ದು, ಮಳೆಗಾಲ ಮುಗಿಯುತ್ತಿದ್ದಂತೆ ಪಾಲಿಕೆ ಚುನಾವಣೆ ನಡೆಸಲಾಗುತ್ತೆ ಅಂತ ಹೇಳಿದರು.