ADVERTISEMENT
ಮಹತ್ವದ ಬೆಳವಣಿಗೆಯಲ್ಲಿ ಹೊಸದಾಗಿ ರಚನೆ ಆಗಿರುವ ಭಾರತೀಯ ಕುಸ್ತಿ ಒಕ್ಕೂಟವನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತು ಮಾಡಿದೆ.
ಭಾರತೀಯ ಕುಸ್ತಿ ಒಕ್ಕೂಟದ ಹೊಸ ಅಧ್ಯಕ್ಷರಾಗಿ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಆಯ್ಕೆಯಾಗಿದ್ದರು.
ಗುರುವಾರವಷ್ಟೇ ಕುಸ್ತಿ ಒಕ್ಕೂಟದ ಹೊಸ ಅಧ್ಯಕ್ಷರಾಗಿ ಸಂಜಯ್ ಸಿಂಗ್ ಆಯ್ಕೆಯಾಗಿದ್ದರು. ಸಂಸದನ ಆಪ್ತನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದನ್ನು ಖಂಡಿಸಿ ಕುಸ್ತಿ ಪಟು ಸಾಕ್ಷಿ ಮಲಿಕ್ ಅವರು ಕುಸ್ತಿ ಕ್ರೀಡೆಗೆ ನಿವೃತ್ತಿ ಘೋಷಿಸಿದ್ದರು.
ಅಷ್ಟೇ ಅಲ್ಲದೇ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಪದಕ ಗೆದ್ದಿದ್ದ ಭಜರಂಗ್ ಪೂನಿಯಾ ಅವರು ತಮಗೆ ನೀಡಲಾಗಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನಿವಾಸದ ಎದುರು ಇಟ್ಟು ಹಿಂದುರುಗಿಸಿದ್ದರು.
ಹೊಸದಾಗಿ ಆಯ್ಕೆಯಾಗಿರುವ ಕುಸ್ತಿ ಒಕ್ಕೂಟದ ಪದಾಧಿಕಾರಿಗಳು ಮಾಜಿ ಪದಾಧಿಕಾರಿಗಳ ನಿಯಂತ್ರಣದಲ್ಲೇ ಇದ್ದಾರೆ ಎಂದು ಕಟು ಅಭಿಪ್ರಾಯ ವ್ಯಕ್ತಪಡಿಸಿರುವ ಕ್ರೀಡಾ ಸಚಿವಾಲಯ ಒಕ್ಕೂಟದ ಸ್ಥಾಪಿತ ಕಾನೂನು ಮತ್ತು ಕಾನೂನುಗಳನ್ನು ಉಲ್ಲಂಘಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಮಾಜಿ ಪದಾಧಿಕಾರಿಗಳ ನಿಯಂತ್ರಣದಲ್ಲಿರುವ ಸ್ಥಳದಲ್ಲೇ ಹೊಸ ಪದಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸ್ಥಳದಲ್ಲೇ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ಕುಸ್ತಿಪಟುಗಳು ಆರೋಪಿದ್ದಾರೆ ಮತ್ತು ಆ ಪ್ರಕರಣ ಈಗ ನ್ಯಾಯಾಲಯದಲ್ಲಿದೆ.
ಉತ್ತರಪ್ರದೇಶದ ಗೊಂಡಾದಲ್ಲಿ 15 ವರ್ಷ ಕೆಳಗಿನ ಮತ್ತು 20 ವರ್ಷಕ್ಕಿಂತ ಕೆಳಗಿನವರ ಕುಸ್ತಿ ರಾಷ್ಟ್ರೀಯ ಚಾಂಪಿಯನ್ಶಿಪ್ ನಡೆಯಲಿದೆ ಎಂದು ಹೊಸ ಅಧ್ಯಕ್ಷರು ಘೋಷಣೆ ಮಾಡಿರುವುದು ಕೂಡಾ ನಿಯಮ ಉಲ್ಲಂಘನೆ. ಆ ಘೋಷಣೆ ಆತುರದ್ದು, ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಸಾಕಷ್ಟು ಸಮಯವಾಕಾಶ ನೀಡಲಾಗಿಲ್ಲ. ಈ ಮೂಲಕ ಒಕ್ಕೂಟದ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಕ್ರೀಡಾ ಸಚಿವಾಲಯ ಎಂದು ಕಟು ಶಬ್ದಗಳಲ್ಲಿ ಟೀಕಿಸಿದೆ.
ADVERTISEMENT