ಶಿವಮೊಗ್ಗ: ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ನಿರಂತರ ಕಾಳಜಿ ವಹಿಸಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಸುತ್ತಿರಬೇಕು ಎಂದು ಖ್ಯಾತ ಆಯುರ್ವೇದ ವೈದ್ಯ ಡಾ. ವರುಣ್ ಸಲಹೆ ನೀಡಿದರು.
ಶಿವಮೊಗ್ಗ ತಾಲೂಕಿನ ಆಯನೂರು ಹೋಬಳಿಯ ಹೊಸೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಹಯೋಗದಲ್ಲಿ ಸಂಗಮ್ ಹೆಲ್ತ್ ಕೇರ್ ಆಯುರ್ವೇದ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತಿಚೀನ ಜೀವನಶೈಲಿ ಹಾಗೂ ಹವಾಮಾನ ಬದಲಾವಣೆಯಿಂದ ಪ್ರತಿಯೊಬ್ಬರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಿರ್ಲಕ್ಷ್ಯ ಮಾಡದೇ ಸಕಾಲದಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಆರೋಗ್ಯ ಅತ್ಯಂತ ಮುಖ್ಯ. ಆರೋಗ್ಯ ಸಂಪತ್ತಿಗಿಂತ ಬೇರೆ ಸಂಪತ್ತಿಲ್ಲ. ಆರೋಗ್ಯ ಉತ್ತಮವಾಗಿ ಇಟ್ಟುಕೊಳ್ಳುವ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದು ಡಾ. ವರುಣ್ ತಿಳಿಸಿದರು.
ಶಿವಮೊಗ್ಗದ ವಿನೋಬನಗರದಲ್ಲಿರುವ ಸಂಗಮ್ ಹೆಲ್ತ್ ಕೇರ್ ಆಯುರ್ವೇದ ಆಸ್ಪತ್ರೆ ವತಿಯಿಂದ ಪ್ರತಿ ವರ್ಷ ಶಿವಮೊಗ್ಗದ ಗ್ರಾಮಾಂತರ ಪ್ರದೇಶಗಳಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಹಾಗೂ ಔಷದಿ ವಿತರಣೆ ಕಾರ್ಯಕ್ರಮ ನಡೆಯುತ್ತಿದೆ. ಈ ಬಾರಿ ರೋಟರಿ ಶಿವಮೊಗ್ಗ ಪೂರ್ವ ಹಾಗೂ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಘಟಕದ ಸಹಯೋಗದಲ್ಲಿ ಹೊಸೂರು ಗ್ರಾಮದಲ್ಲಿ ಶಿಬಿರ ನಡೆಸಲಾಗಿದೆ ಎಂದು ಡಾ. ವರುಣ್ ಮಾಹಿತಿ ನೀಡಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ಮಾತನಾಡಿ, ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ರೋಟರಿ ಸಂಸ್ಥೆಯ ಕ್ಲಬ್‌ಗಳು ಉತ್ತಮ ಕೆಲಸ ಮಾಡುತ್ತಿದ್ದು, ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ನೀಡಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಿವೆ. ಆರೋಗ್ಯದ ಶಿಬಿರದ ಮೂಲಕ ಸಾರ್ವಜನಿಕರಿಗೆ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿದೆ ಎಂದು ವಿವರ ನೀಡಿದರು.
ಶಿವಮೊಗ್ಗ ತಾಲೂಕು ಆಯನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸೂರು ಗ್ರಾಮದಲ್ಲಿ 300ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಔಷಧ ವಿತರಿಸಲಾಯಿತು.
ಉಚಿತ ಆರೋಗ್ಯ ಶಿಬಿರದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕುಮಾರಸ್ವಾಮಿ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷೆ ಸುಷ್ಮಾ ಹಿರೇಮಠ್, ಸಂತೋಷ್, ಮಂಜುನಾಥ್ ಕದಂ, ಅರುಣ್ ದೀಕ್ಷಿತ್, ಪ್ರಜ್ವಲ್, ಅಣ್ಣಪ್ಪ.ಆರ್, ಶರತ್ ಮೋಹನ್, ಮಾರುತಿ, ಪ್ರಕಾಶ್, ಹೊಸೂರಪ್ಪ, ಡಾ. ವರುಣ್ ಮತ್ತು ತಜ್ಞ ವೈದ್ಯರು ಪಾಲ್ಗೊಂಡಿದ್ದರು.