ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಯಾಕೆ ಅಕ್ಕಿ ಕೊಡ್ಬೇಕು..? – BJP ಪರ ಮಾಜಿ ಸಿಎಂ HDK ವಕಾಲತ್ತು

ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಲು ಅಡ್ಡಿಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ತೀರ್ಮಾನವನ್ನು ಸಮರ್ಥಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಕರ್ನಾಟಕಕ್ಕೆ ಯಾಕೆ ಕೇಂದ್ರ ಸರ್ಕಾರ ಅಕ್ಕಿ ಕೊಡಬೇಕು ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಕೊಡಬೇಕು ಯಾಕೆ ಅಕ್ಕಿ.ಕೊಡಬೇಕು ನಿಮಗೆ..? ಕೇಂದ್ರ ಸರ್ಕಾರಕ್ಕೆ ಅವರದೇ ಆದ ಕಮಿಟ್‌ಮೆಂಟ್ ಇರುತ್ತದೆ. ನಮಗೆ ಅಕ್ಕಿ ಬೇಕು ಅಂದರೆ ಅವರು ಹೇಗೆ ಕೊಡ್ತಾರೆ..? ಕೇಂದ್ರ ಸರ್ಕಾರಕ್ಕೆ ಅರ್ಜಿ ಹಾಕಿಕೊಂಡಿದ್ರಾ ನೀವು..? ತಾನು ಎಸಗಿದ ಸ್ವಯಂಕೃತ ತಪ್ಪಿಗೆ ಕೇಂದ್ರ ಸರಕಾರ ಮೇಲೆ ಗೂಬೆ ಕೂರಿಸುತ್ತಾ ಜನರನ್ನು ಯಮಾರಿಸುತ್ತಿದೆ

ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕರ್ನಾಟಕ ವಿರೋಧಿ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಸಮರ್ಥಿಸಿಕೊಂಡರು.

ಯಾರೋ ಚುನಾವಣಾ ತಂತ್ರಗಾರರ ಮಾತು ಕೇಳಿಕೊಂಡು ಗ್ಯಾರಂಟಿ ಘೋಷಣೆ ಮಾಡಿದಾಗ, ಯೋಜನೆ ಜಾರಿಗೆ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಅಕ್ಕಿ ಗ್ಯಾರಂಟಿ ಬಗ್ಗೆ ಇವರೇನು ಕೇಂದ್ರ ಸರಕಾರಕ್ಕೆ ಅರ್ಜಿ ಹಾಕಿದ್ರಾ? ಪೊಳ್ಳು ಭರವಸೆ ಕೊಟ್ಟು ಗ್ಯಾರಂಟಿ ಎಂದು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ. ಸರಿ ತಪ್ಪು ಎನ್ನುವುದನ್ನು ನಾವು ಮಾಡಬೇಕಲ್ಲವೇ..?

ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿರ್ಧಾರವನ್ನು ಕುಮಾರಸ್ವಾಮಿ ಬೆಂಬಲಿಸಿದ್ದಾರೆ. 

ಕೇಂದ್ರ ಸರ್ಕಾರ ಕೊಡಬೇಕು ಯಾಕೆ ಅಕ್ಕಿ.ಕೊಡಬೇಕು ನಿಮಗೆ? ಕೇಂದ್ರ ಸರ್ಕಾರಕ್ಕೆ ಅರ್ಜಿ ಹಾಕಿಕೊಂಡಿದ್ರಾ ನೀವು? ಯಾವನೋ ಬಂದು ಎಲೆಕ್ಷನ್ ಸ್ಟ್ರಾಟೆಜಿಸ್ಟ್ ಐಡಿಯಾ ಕೊಟ್ಟ ಅಂತ ನೀವು ಫ್ರೀ ಫ್ರೀ ಅಂದ್ರಿ. ಸಚಿವರ ಹೆಂಡ್ತಿಗೂ ಫ್ರೀ, ನನ್ನ ಹೆಂಡತಿಗೂ ಫ್ರೀ ಎಂದು ಹೇಳಿ ಎಲ್ಲರೂ ಅರ್ಜಿ ಹಾಕಿಕೊಳ್ಳಬಹುದು ಎಂದ್ರಿ. ಈಗ ನೋಡಿದರೆ ಬೇರೆ ವರಸೆ ಶುರು ಮಾಡಿಕೊಂಡಿದ್ದೀರಿ

ಎಂದು ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

ಗೃಹಜ್ಯೋತಿ ಕತ್ತಲಾಗಿ ಪರಿಣಮಿಸಿದೆ. ವಿದ್ಯುತ್ ಉಚಿತ ಕೊಡ್ತೀವಿ ಅಂತ ಹೇಳಿದವರು ಈಗಿನ ಪರಿಸ್ಥಿತಿಯನ್ನು ಅವಲೋಕನ ಮಾಡಬೇಕು. ವಿಟಿಯು ಉಪ ಕುಲಪತಿ ಬಾಯಿ ಬಡ್ಕೊತಿದ್ದಾರೆ. ವಿದ್ಯುತ್ ಬಿಲ್ ನೋಡಿ ಅವರು ಶಾಕ್ ಗೆ ಗುರಿಯಾಗಿದ್ದಾರೆ. ಬಾಕಿ ಮೊತ್ತ ಕಂಡು ಬೇಸ್ತು ಬಿದ್ದಿದ್ದಾರೆ. ಇನ್ನೆಷ್ಟು ಶಾಕ್ ಕೊಡುತ್ತೀರಿ..?

ಎಂದು ಮಾಜಿ ಮುಖ್ಯಮಂತ್ರಿ ಅವರು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಮುಖ್ಯಮಂತ್ರಿಗಳು ನೋಡಿದರೆ ಭಾರತದ ಆಹಾರ ನಿಗಮಕ್ಕೆ ಪತ್ರ ಬರೆದಿದ್ದೆ ಎಂದು ಹೇಳುತ್ತಿದ್ದಾರೆ. ಅವರು ಜವಾಬ್ದಾರಿ ಸ್ಥಾನದಲ್ಲಿ ಇದ್ದು ಇಂಥ ಉಡಾಫೆ ಉತ್ತರ ಕೊಟ್ಟರೆ ಹೇಗೆ? ಕೇಂದ್ರದಿಂದ ಅಕ್ಕಿ ಬೇಕು ಅಂದರೆ ಕೇಂದ್ರ ಸರಕಾರದ ಸಂಬಂಧಪಟ್ಟ ಸಚಿವರ ಜತೆ ಮಾತನಾಡಬೇಕಿತ್ತು. ಮನವಿ ಕೊಡಬೇಕಿತ್ತು. ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರೇ ಹೋಗಿ ಚರ್ಚೆ ನಡೆಸಬೇಕಿತ್ತು. ಅದನ್ನು ಬಿಟ್ಟು ಉಡಾಫೆ ಹೇಳಿಕೆ ಕೊಡ್ತಿದ್ದಾರೆ

ಎಂದು ಅವರು ಕಿಡಿಕಾರಿದರು.

ಕೇಂದ್ರ ಸರ್ಕಾರಕ್ಕೆ ಅವರದೇ ಆದ ಕಮಿಟ್‌ಮೆಂಟ್ ಇರುತ್ತದೆ. ನಮಗೆ ಅಕ್ಕಿ ಬೇಕು ಅಂದರೆ ಅವರು ಹೇಗೆ ಕೊಡ್ತಾರೆ..? ನಾನು ಸಾಲಾಮನ್ನಾ ಮಾಡಿದಾಗ ರಾಷ್ಟ್ರಿಕೃತ ಬ್ಯಾಂಕ್ ಗಳಲ್ಲಿದ್ದ ಸಾಲಮನ್ನಾ ಮಾಡಿದಾಗ ಪ್ರಧಾನಿಗಳ ಹತ್ತಿರ ಹೋಗಿ ಕೇಳಿದ್ನಾ..? ದರ್ದು ಇರೋದು ಕಾಂಗ್ರೆಸ್ ಪಕ್ಷಕ್ಕೆ, ಅವರಿಗೇನಿದೆ ದರ್ದು..? ನಿಮಗೆ ಬೇಕಾದ ವ್ಯವಸ್ಥೆ ನೀವೇ ಮಾಡಿಕೊಳ್ಳಬೇಕು

ಎಂದು ಜೆಡಿಎಸ್​ ನಾಯಕ, ಮಾಜಿ ಸಿಎಂ ಹೆಚ್​ಡಿಕೆ ಅವರು ಕಾಂಗ್ರೆಸ್​ ವಿರುದ್ಧ ಸಿಟ್ಟು ಹೊರಹಾಕಿದ್ದಾರೆ.