‘ಕಾಂತಾರ’ ಸಿನಿಮಾದ ವರಾಹ ರೂಪಂ ಹಾಡು ಡಿಲಿಟ್..!

ಕರ್ನಾಟಕ ಮಾತ್ರವಲ್ಲದೆ ದೇಶ-ವಿದೇಶಗಳಲ್ಲಿ ಹೊಸ ಹವಾ ಸೃಷ್ಟಿಸಿರುವ ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ ಸಿನಿಮಾ ಇದೀಗ ಮತ್ತೆ ಕೃತಿಚೌರ್ಯ ವಿಚಾರವಾಗಿ ಮುನ್ನೆಲೆಗೆ ಬಂದಿದೆ.

ಕಳೆದ ಹಲವು ದಿನಗಳಿಂದ ಕರ್ನಾಟಕ ಮಾತ್ರವಲ್ಲದೆ ದೇಶ-ವಿದೇಶಗಳಲ್ಲಿ ಹೊಸ ಹವಾ ಸೃಷ್ಟಿಸಿರುವ ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ ಸಿನಿಮಾ ಇದೀಗ ಮತ್ತೆ ಕೃತಿಚೌರ್ಯ ವಿಚಾರವಾಗಿ ಮುನ್ನೆಲೆಗೆ ಬಂದಿದೆ. ಸದ್ದಿಲ್ಲದೆ ಈ ಚಿತ್ರದ ‘ವರಾಹ ರೂಪಂ..’ ಹಾಡೀಗ ಡಿಲಿಟ್‌ ಆಗಿದೆ. ಈ ಮೂಲಕ ‘ವರಾಹ ರೂಪಂ..’ ಹಾಡಿನ ಮೇಲೆ ಕೃತಿಚೌರ್ಯ ಆರೋಪದ ಕೇಸ್‌ ದಾಖಲಿಸಿದ ಕೇರಳದ ನವರಸಂ ಆಲ್ಬಂನ ತೆಕ್ಕುಡಂ ಬ್ರಿಡ್ಜ್‌ ತಂಡ ಮುನ್ನಡೆ ಸಾಧಿಸಿದೆ.

ತೆಕ್ಕುಡಂ ಬ್ರಿಡ್ಜ್‌ ಸಂಸ್ಥೆ, ಹೊಂಬಾಳೆ ಫಿಲಂಸ್‌ ಮೇಲೆ ಕೇಸ್‌ ದಾಖಲಿಸುತ್ತಿದ್ದಂತೆ, ನ್ಯಾಯಾಲಯದ ಮೆಟ್ಟಿಲೇರಿದ್ದ ಈ ಪ್ರಕರಣದಲ್ಲಿ ಹಾಡನ್ನು ಪ್ರಸಾರ ಮಾಡದಂತೆ ತಡೆ ನೀಡಿ ಕೋರ್ಟ್‌ ಆದೇಶ ಹೊರಡಿಸಿತ್ತು. ಅದರಂತೆ, ಆರಂಭಿಕವಾಗಿ ಯೂಟ್ಯೂಬ್‌ನಿಂದ ಹಾಡನ್ನು ಡಿಲಿಟ್‌ ಮಾಡಲಾಗಿದೆ. ಅದೇ ರೀತಿ ಸಂಗೀತದ ಅಪ್ಲಿಕೇಷನ್‌ಗಳಾದ ಸಾವನ್‌ನಲ್ಲಿಯೂ ಚಿತ್ರದ ಪ್ಲೇ ಬಾಕ್ಸ್‌ನಲ್ಲಿ ಹಾಡು ಕಾಣಿಸುತ್ತಿಲ್ಲ. ಹೊಂಬಾಳೆಯ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿಯೂ ಹಾಡು ಡಿಲಿಟ್‌ ಮಾಡಲಾಗಿದೆ. ಈ ಮೂಲಕ ಕೋರ್ಟ್‌ ಆದೇಶವನ್ನು ಹೊಂಬಾಳೆ ಫಿಲಂಸ್‌ ಪಾಲಿಸಿದೆ.

ವರಾಹ ರೂಪಂ ಹಾಡು ವೈರಲ್‌ ಆಗುತ್ತಿದ್ದಂತೆ, ಈ ಹಾಡನ್ನು ನಕಲು ಮಾಡಲಾಗಿದೆ ಎಂದು ಮಲಯಾಳಂ ಮ್ಯೂಸಿಕ್ ಬ್ಯಾಂಡ್ ತೈಕ್ಕುಡಂ ಬ್ರಿಡ್ಜ್, ಕೊಯಿಕ್ಕೋಡು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಈ ದೂರಿನ ವಿಚಾರಣೆ ನಡೆಸಿದ ಕೊಯಿಕ್ಕೋಡು ನ್ಯಾಯಾಲಯ, ವರಾಹ ರೂಪಂ ಹಾಡನ್ನು ಚಿತ್ರಮಂದಿರಗಳಲ್ಲಿ ಪ್ರಸಾರ ಮಾಡದಂತೆ ಆದೇಶ ಹೊರಡಿಸಿತ್ತು. ಇದಲ್ಲದೆ, ಎಲ್ಲಾ ಪ್ರಮುಖ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಹಾಡನ್ನು ನಿಷೇಧಿಸಲಾಗಿತ್ತು. ತೈಕ್ಕುಡಮ್ ಬ್ರಿಡ್ಜ್ ಸಂಗೀತ ತಂಡದ ಅನುಮತಿಯಿಲ್ಲದೆ ‘ಕಾಂತಾರ’ ಚಿತ್ರದಲ್ಲಿ ವರಾಹ ರೂಪಂ ಹಾಡನ್ನು ತೋರಿಸದಂತೆ ಕೊಯಿಕ್ಕೋಡು ನ್ಯಾಯಾಲಯವು ‘ಕಾಂತಾರ’ ಚಿತ್ರತಂಡಕ್ಕೆ ಸೂಚಿಸಿತ್ತು.