ಮೂರು ದಿನಗಳ ಹಿಂದೆ ನೆರೆಯ ತೆಲಂಗಾಣದ ನಿಜಾಮಾಬಾದ್ ಪಟ್ಟಣದಲ್ಲಿ ವಿದ್ಯುತ್ ವಾಹನದ ಬ್ಯಾಟರಿ ಸ್ಫೋಟಗೊಂಡು 80 ವರ್ಷದ ವ್ಯಕ್ತಿ ಸಾವಿಗೀಡಾದ ಘಟನೆ ಮಾಸುವ ಮುನ್ನವೇ ಆಂಧ್ರದಲ್ಲಿ ಮತ್ತೊಂದು ಇವಿ ಬೈಕ್ ಬ್ಯಾಟರಿ ಸ್ಫೋಟಗೊಂಡು ವ್ಯಕ್ತಿ ಸಾವಿಗೀಡಾದ ಘಟನೆ ವರದಿಯಾಗಿದೆ.
ಮಲಗುವ ಕೋಣೆಯಲ್ಲಿ ಹೊಸ ಎಲೆಕ್ಟ್ರಿಕ್ ಬೈಕ್ನ ಬ್ಯಾಟರಿ ಸ್ಫೋಟಗೊಂಡು 40 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ವಿಜಯವಾಡ ನಗರದಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ. ಅವರ ಪತ್ನಿಗೆ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಜೊತೆಗೆ ಅವರ ಇಬ್ಬರು ಮಕ್ಕಳು ಸಹ ಉಸಿರುಗಟ್ಟುವಿಕೆ ತೊಂದರೆಯಿಂದ ಬಳಲುತ್ತಿದ್ದು ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಸ್ವಯಂ ಉದ್ಯೋಗಿ ಡಿಟಿಪಿ ಕೆಲಸಗಾರನಾಗಿದ್ದ ಸಾವಿಗೀಡಾದ ಕೆ. ಶಿವಕುಮಾರ್ ಶುಕ್ರವಾರವಷ್ಟೇ ಎಲೆಕ್ಟ್ರಿಕ್ ಬೈಕ್ ಖರೀದಿಸಿದ್ದರು. ಶುಕ್ರವಾರ ರಾತ್ರಿ ಅವರ ಮಲಗುವ ಕೋಣೆಯಲ್ಲಿ ವಾಹನದ ಡಿಟ್ಯಾಚೇಬಲ್ ಬ್ಯಾಟರಿಯನ್ನು ಚಾರ್ಜ್ನಲ್ಲಿ ಇರಿಸಲಾಗಿತ್ತು ಮತ್ತು ಎಲ್ಲರೂ ಗಾಢ ನಿದ್ದೆಯಲ್ಲಿದ್ದಾಗ ಅದು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ ಎಂದು ಸೂರ್ಯರಾವ್ಪೇಟೆ ಪೊಲೀಸ್ ಇನ್ಸ್ಪೆಕ್ಟರ್ ವಿ ಜಾನಕಿ ರಾಮಯ್ಯ ತಿಳಿಸಿದ್ದಾರೆ.
.
ಸ್ಫೋಟದಿಂದಾಗಿ ಮನೆಯಲ್ಲಿ ಸಣ್ಣ ಬೆಂಕಿ ಕಾಣಿಸಿಕೊಂಡಿದ್ದು, ಹವಾನಿಯಂತ್ರಣ ಯಂತ್ರ ಮತ್ತು ಕೆಲವು ಗೃಹೋಪಯೋಗಿ ವಸ್ತುಗಳು ಸುಟ್ಟು ಹೋಗಿವೆ. ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡ ನೆರೆಹೊರೆಯವರು ಬಾಗಿಲು ಒಡೆದು ಒಳಗೆ ಸಿಲುಕಿದ್ದ ಕುಟುಂಬವನ್ನು ಹೊರತೆಗೆದಿದ್ದಾರೆ. ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸುವ ವೇಳೆ ಶಿವಕುಮಾರ್ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ADVERTISEMENT
ADVERTISEMENT