ಬೆಂಗಳೂರಿನ ಮಹದೇವಪುರದ ಶಾಸಕ ಅರವಿಂದ್ ಲಿಂಬಾವಳಿಯವರು (Aravind Limbavali) ತಮ್ಮ ಕ್ಷೇತ್ರದ ಮಹಿಳೆಯೊಬ್ಬರಿಗೆ ಬಳಸಿದ ಪದ ಬಳಕೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ. ಇಂದು ಮಾಧ್ಯಮದವರೊಡನೆ ಮಾತನಾಡುವ ವೇಳೆ, ನಾನು ಅವಳನ್ನ ರೇಪ್ ಮಾಡಿದ್ದೀನಾ ಎಂದು ಪ್ರಶ್ನಿಸಿ ಮತ್ತೊಮ್ಮೆ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಶನಿವಾರ ಬೆಳಿಗ್ಗೆ ಮಳೆಯಿಂದ ಹಾನಿಗೀಡಾದ ಮಹಾದೇವಪುರ ಕ್ಷೇತ್ರದ ಪ್ರದೇಶಕ್ಕೆ ವೀಕ್ಷಣೆಗೆ ಶಾಸಕ ಅರವಿಂದ ಲಿಂಬಾವಳಿ ಹೋಗಿದ್ದರು. ಈ ವೇಳೆ ಅಲ್ಲಿನ ಮಹಿಳೆಯೊಬ್ಬರು ಮನವಿ ಪತ್ರ ನೀಡಲು ಬಂದಿದ್ದರು. ಈ ವೇಳೆ ಶಾಸಕರು ಮಹಿಳೆಗೆ ಅವಾಚ್ಯವಾಗಿ ನಿಂದಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು.
ಇಂದು ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸುವ ವೇಳೆ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿಯವರು, ನೀವು ಜನತೆಯ ಬಗ್ಗೆ ತೋರಿಸಿ ಆ ಮಹಿಳೆಯ ಬಗ್ಗೆ ಅಲ್ಲ. ನಾನೇನು ಅವಳನ್ನ ರೇಪ್ ಮಾಡಿದ್ದೀನಾ ಎಂದು ಪ್ರಶ್ನಿಸಿದ್ದಾರೆ. ಇದೀಗ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
ಅರವಿಂದ ಲಿಂಬಾವಳಿಯವರ (Aravind Limbavali) ಈ ನಡವಳಿಕೆ ಮತ್ತು ಪದ ಬಳಕೆಯ ಬಗ್ಗೆ ಕಾಂಗ್ರೆಸ್ ನ ನಾಯಕರು ಹಾಗೂ ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಪಕ್ಷ , ಮಹಿಳೆಯ ಮೇಲೆ ದಬ್ಬಾಳಿಕೆ ಎಸಗಿದ್ದಲ್ಲದೆ “ನಾನೇನು ರೇಪ್ ಮಾಡಿದ್ನಾ” ಎಂದು ಉದ್ಧಟತನದಲ್ಲಿ ಕೇಳಿದ ಅರವಿಂದ್ ಲಿಂಬಾವಳಿ ಅವರ ಮಾತುಗಳು ಇಡೀ ಬಿಜೆಪಿ ಸಂಸ್ಕೃತಿಗೆ ಹಿಡಿದ ಕನ್ನಡಿ. ಲಿಂಬಾವಳಿಯ ಈ ಮಾತುಗಳು ಇಡೀ ಸ್ತ್ರೀ ಕುಲಕ್ಕೆ ಮಾಡಿದ ಘೋರ ಅವಮಾನ ಎಂದು ಆಕ್ರೋಶವ್ಯಕ್ತಪಡಿಸಿದೆ. ಹಾಗೂ ಬಿಜೆಪಿ ನಾಯಕರ ಹಲವು ಘಟನೆಗಳನ್ನು ಉದಾಹರಿಸಿ ವ್ಯಂಗ್ಯವಾಡಿದೆ.
ಮಹಿಳೆಯ ಮೇಲೆ ದಬ್ಬಾಳಿಕೆ ಎಸಗಿದ್ದಲ್ಲದೆ "ನಾನೇನು ರೇಪ್ ಮಾಡಿದ್ನಾ" ಎಂದು ಉದ್ಧಟತನದಲ್ಲಿ ಕೇಳಿದ ಅರವಿಂದ್ ಲಿಂಬಾವಳಿ ಅವರ ಮಾತುಗಳು ಇಡೀ ಬಿಜೆಪಿ ಸಂಸ್ಕೃತಿಗೆ ಹಿಡಿದ ಕನ್ನಡಿ.
ಲಿಂಬಾವಳಿಯ ಈ ಮಾತುಗಳು ಇಡೀ ಸ್ತ್ರೀ ಕುಲಕ್ಕೆ ಮಾಡಿದ ಘೋರ ಅವಮಾನ.
ಇಂತಹ ಕೊಳಕು ಮನಸ್ಥಿತಿಯ ಶಾಸಕನ ವಿರುದ್ಧ ಕ್ರಮ ಕೈಗೊಳ್ಳದೆ ಸಿಎಂ ಮೌನವಹಿಸಿರುವುದು ಏಕೆ? pic.twitter.com/4aHGnI4MJ0
— Karnataka Congress (@INCKarnataka) September 3, 2022
ಇನ್ನು, ಕಾಂಗ್ರೆಸ್ನ ಮಹಿಳಾ ನಾಯಕಿ ಕುಸುಮಾ ಹನುಮಂತರಾಯಪ್ಪ ಅವರೂ ಲಿಂಬಾವಳಿಯವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮನವಿ ಪತ್ರ ಸಲ್ಲಿಸಲು ಬಂದ ಮಹಿಳೆಯೊಂದಿಗೆ ದರ್ಪ ತೋರಿದ್ದಲ್ಲದೇ, ಮಹಿಳೆಯನ್ನು ಕುರಿತು ಮಾಧ್ಯಮದ ಮುಂದೆ ನಾಲಿಗೆ ಹರಿ ಬಿಟ್ಟಿರುವ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಮೂರೂ ಬಿಟ್ಟವರಂತೆ ಸೂಕ್ಷ್ಮತೆ ಇಲ್ಲದ ವಿಕೃತ ಮನಸ್ಸನ್ನು ಪ್ರದರ್ಶಿಸಿ ಜವಾಬ್ದಾರಿಯುತ ಜನಪ್ರತಿನಿಧಿಯಾಗಲು ಯೋಗ್ಯನಲ್ಲವೆಂದು ತನ್ನ ನೈಜ ಮುಖದ ಅನಾವರಣ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಶಾಸಕ ಅರವಿಂದ್ ಲಿಂಬಾವಳಿ ಪೊಲೀಸರಿಗೆ ಆ ಮಹಿಳೆಯ ಮೇಲೆ ದೂರು ನೀಡಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿ ಆಮಹಿಳೆಯನ್ನು ಬಂಧಿಸಿದ್ದಾರೆ.