ADVERTISEMENT
ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಕೇಂದ್ರ ಸಚಿವ ಮತ್ತು ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದ ಸಂಸದ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಲಿಂಗಾಯತ ಸಮುದಾಯ ಸಿಡಿದೆದ್ದಿದೆ.
ಲೋಕಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದಿಂದ ಪ್ರಹ್ಲಾದ್ ಜೋಶಿ ಬದಲು ಲಿಂಗಾಯತರಿಗೆ ಟಿಕೆಟ್ ನೀಡುವಂತೆ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ವಾಮೀಜಿಗಳ ಬಿಜೆಪಿಯನ್ನು ಒತ್ತಾಯಿಸಿದ್ದಾರೆ.
1952-2019ರವರೆಗೆ ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ನಡೆದ 19 ಚುನಾವಣೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ವಿಜಯ್ ಸಂಕೇಶ್ವರ ಅವರು ಮೂರು ಬಾರಿ ಸತತವಾಗಿ ಆಯ್ಕೆಯಾಗಿದ್ದರೆ, ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು 10 ಬಾರಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಗೆದ್ದಿದ್ದಾರೆ. 4 ಬಾರಿ ಕುರುಬ ಸಮುದಾಯಕ್ಕೆ ಸೇರಿದವರು ಗೆದ್ದಿದ್ದಾರೆ.
2004, 2009, 2014, 2019ರಲ್ಲಿ ಸತತ ನಾಲ್ಕು ಬಾರಿ ಪ್ರಹ್ಲಾದ್ ಜೋಶಿ ಗೆದ್ದಿದ್ದಾರೆ. 1996, 1998, 1999ರಲ್ಲಿ ವಿಜಯ್ ಸಂಕೇಶ್ವರ್ ಸತತವಾಗಿ ಮೂರು ಬಾರಿ ಗೆದ್ದಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿದ ಡಿ ಕೆ ನಾಯ್ಕರ್ ಅವರು 1980, 1984, 1989, 1991ರಲ್ಲಿ ಸತತ ನಾಲ್ಕು ಬಾರಿ ಕಾಂಗ್ರೆಸ್ನಿಂದ ಗೆದ್ದಿದ್ದಾರೆ. 1952, 1957ರಲ್ಲಿ ಬ್ರಾಹ್ಮಣ ಸಮುದಾಯದ ದತ್ತಾತ್ರೇಯ ಪರಶುರಾಮ ಕರ್ಮಕರ್ ಮತ್ತು 1962, 1967, 1971, 1977ರವರೆಗೆ ಸತತವಾಗಿ 4 ಬಾರಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಸರೋಜಿನಿ ಮಹಿಷಿ ಅವರು ಆಯ್ಕೆಯಾಗಿದ್ದಾರೆ.
1996ರ ಲೋಕಸಭಾ ಚುನಾವಣೆಯಿಂದ ಈ ಕ್ಷೇತ್ರ ಸತತ 7 ಚುನಾವಣೆಗಳಲ್ಲೂ ಬಿಜೆಪಿ ಹಿಡಿತದಲ್ಲೇ ಇದೆ.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 17 ಲಕ್ಷದ 91 ಸಾವಿರ. ಅಂದಾಜಿನಿ ಪ್ರಕಾರ ಈ ಕ್ಷೇತ್ರದಲ್ಲಿ ಲಿಂಗಾಯತ ಮತದಾರರ ಸಂಖ್ಯೆ ಶೇಕಡಾ 25ರಷ್ಟು, ಮುಸಲ್ಮಾನ ಮತದಾರರ ಸಂಖ್ಯೆ 23.59ರಷ್ಟು, ಬ್ರಾಹ್ಮಣ ಮತದಾರರ ಸಂಖ್ಯೆ 3.38ರಷ್ಟು ಮತ್ತು ಕುರುಬ ಮತದಾರರ ಸಂಖ್ಯೆ 6.91ರಷ್ಟು, ಮರಾಠ ಮತದಾರರ ಸಂಖ್ಯೆ 6.48ರಷ್ಟಿದೆ.
ಲಿಂಗಾಯತರ ಮತದಾರರ ಸಂಖ್ಯೆ 4.5 ಲಕ್ಷದಷ್ಟಿದೆ. ಮುಸಲ್ಮಾನ ಮತದಾರರ ಸಂಖ್ಯೆ 4.2 ಲಕ್ಷದಷ್ಟಿದೆ. ಬ್ರಾಹ್ಮಣ ಮತದಾರರ ಸಂಖ್ಯೆ ಕೇವಲ 60 ಸಾವಿರದಷ್ಟಿದೆ. ಕುರುಬ ಮತದಾರರ ಸಂಖ್ಯೆ 1.2 ಲಕ್ಷದಷ್ಟಿದೆ ಮತ್ತು ಮರಾಠ ಮತದಾರರ ಸಂಖ್ಯೆ 1.10 ಲಕ್ಷದಷ್ಟಿದೆ. ಎಸ್ಸಿ ಮತ್ತು ಎಸ್ಟಿ ಸಮುದಾಯ ಮತದಾರರ ಸಂಖ್ಯೆ 2.5 ಲಕ್ಷದಷ್ಟಿದೆ.
ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಹಿಂದುಳಿದ ಸಮುದಾಯದ ಯುವ ನಾಯಕ ವಿನೋದ್ ಅಸೂಟಿ ಅವರಿಗೆ ಟಿಕೆಟ್ ನೀಡಿದೆ. ಬಿಜೆಪಿ ಮತ್ತೆ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಶಿಗೆ ಟಿಕೆಟ್ ಕೊಟ್ಟಿದೆ.
ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ವಾಪಸ್ಸಾದ ಬಳಿಕ ಜೋಶಿ ಬದಲಿಗೆ ಶೆಟ್ಟರ್ ಅವರಿಗೆ ಧಾರವಾಡದಿಂದ ಟಿಕೆಟ್ ಸಿಗಬಹುದು ಎಂದು ಭಾವಿಸಲಾಗಿತ್ತು. ಆದರೆ ಜೋಶಿ ರಾಜಕೀಯ ಉಳಿಸಲು ಬಿಜೆಪಿ ಶೆಟ್ಟರ್ ಅವರನ್ನು ಬೆಳಗಾವಿ ಅಭ್ಯರ್ಥಿಯಾಗಿ ಎತ್ತಂಗಡಿ ಮಾಡಿದೆ.
ಯಡಿಯೂರಪ್ಪ ಅವರನ್ನು ಅವಧಿಗೂ ಮೊದಲೇ ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವ ಬಿ ಎಲ್ ಸಂತೋಷ್ ಬಣದ ಸಂಚಿನಲ್ಲಿ ಜೋಶಿಯೂ ಪಾತ್ರಧಾರಿ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದ ಬಳಿಕ ಜೋಶಿ ಅವರನ್ನು ಸಿಎಂ ಮಾಡುವ ಆಲೋಚನೆಯಲ್ಲಿತ್ತು ಸಂತೋಷ್ ಬಣ. ಇದೇ ಆರೋಪವನ್ನು ಈಗ ಲಿಂಗಾಯತ ಸ್ವಾಮೀಜಿಗಳು ಬಹಿರಂಗವಾಗಿ ಜೋಶಿ ವಿರುದ್ಧ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲ ಒಂದು ವೇಳೆ ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರೆ ಲಿಂಗಾಯತರ ಬದಲು ಪೇಶ್ವೆ ಬ್ರಾಹ್ಮಣ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡುವ ಆಲೋಚನೆಯಲ್ಲಿತ್ತು ಎಂಬುದನ್ನು ಈಗ ಬಿಜೆಪಿ ಜೊತೆಗೆ ಸಮ್ಮಿಲನವಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಹೇಳಿದ್ದರು.
ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವುದರಲ್ಲಿ ಜೋಶಿ ಪಾತ್ರವಿಲ್ಲವೆಂದು ಯಡಿಯೂರಪ್ಪ ಅನಿವಾರ್ಯವಾಗಿ ಪೇಶ್ವೆ ಬ್ರಾಹ್ಮಣ ಜೋಶಿ ಅವರ ಪರವಾಗಿ ಸಮರ್ಥನೆಗೆ ನಿಂತರೂ ಲಿಂಗಾಯತ ಸಮುದಾಯ ನಂಬುವ ಸ್ಥಿತಿಯಲ್ಲಿ ಇಲ್ಲ.
ADVERTISEMENT