1 ಮತದಿಂದ ಗೆದ್ದಿದ್ದ ನಾಯಕ – ಈ ಬಾರಿ ನಂಜನಗೂಡು ಕಾಂಗ್ರೆಸ್​ ಅಭ್ಯರ್ಥಿ – ಅಕಾಲಿಕ ನಿಧನದಿಂದ ಕಾಂಗ್ರೆಸ್​ಗೆ ಆಘಾತ

ಕರ್ನಾಟಕ ವಿಧಾನಸಭಾ ಚುನಾವಣೆಯ ಹೊತ್ತಲ್ಲಿ ಕಾಂಗ್ರೆಸ್​​ಗೆ ದೊಡ್ಡ ಆಘಾತ.

ಕಳೆದ 2 ವರ್ಷದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಧ್ರವನಾರಾಯಣ್​ ಅವರು ಇವತ್ತು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಧ್ರುವನಾರಾಯಣ್​ ಅವರಿಗೆ ಈ ಬಾರಿ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಟಿಕೆಟ್​ ಅಂತಿಮಗೊಳಿಸಿತ್ತು.

ಆದರೆ ಇವರ ಅಕಾಲಿಕ ಸಾವು ಕಾಂಗ್ರೆಸ್​ ನಾಯಕರು ಮತ್ತು ಕಾರ್ಯಕರ್ತರಿಗೆ ದೊಡ್ಡ ಆಘಾತವನ್ನೇ ಉಂಟು ಮಾಡಿದೆ.

2009 ಮತ್ತು 2014ರಲ್ಲಿ ಸತತ ಎರಡು ಬಾರಿ ಧ್ರುವನಾರಾಯಣ್​ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಗೆದ್ದು ಬಂದಿದ್ದರು.

ಆದರೆ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ವಿ ಶ್ರೀನಿವಾಸ್​ಪ್ರಸಾದ್​ ಅವರ ಎದುರು ಅತ್ಯಲ್ಪ ಮತಗಳಿಂದ ಸೋಲು ಅನುಭವಿಸಿದ್ದರು.

1961 ಜುಲೈ 31 ರಂದು ಚಾಮರಾಜ ನಗರದ ಹಗ್ಗವಾಡಿಯಲ್ಲಿ ಜನಿಸಿದ ಧ್ರುವನಾರಾಯಣ್​ ಬೆಂಗಳೂರಿನ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದರು.

1983ರಿಂದ ಕಾಂಗ್ರೆಸ್​​ಗೆ ಸೇರುವ ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಇವರು 1984ರಲ್ಲಿ ಜಿಕೆವಿಕೆಯ ಕಾಂಗ್ರೆಸ್​ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದರು.

ಆ ಬಳಿಕ 1986ರಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿ ನೇಮಕವಾದರು.

1999ರಲ್ಲಿ ಮೊದಲ ಬಾರಿಗೆ ಸಂತೆಮರಹಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಮೊದಲ ಬಾರಿ ಸ್ಪರ್ಧಿಸಿದರೂ ಸೋಲು ಅನುಭವಿಸಿದರು.

ಆದರೆ 2004ರಲ್ಲಿ ಅದೇ ಕ್ಷೇತ್ರದಿಂದ 1 ಮತದ ಅಂತರದಿಂದ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು. ಆ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಧ್ರುವನಾರಾಯಣ್​ ಅವರು 40,752 ಮತಗಳನ್ನು ಪಡೆದರೆ, ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಎ ಆರ್​ ಕೃಷ್ಣಮೂರ್ತಿ 40,751 ಮತಗಳನ್ನು ಪಡೆದಿದ್ದರು. 

ಆ ಬಳಿಕ 2008ರಲ್ಲಿ ಕೊಳ್ಳೆಗಾಲ ಕ್ಷೇತ್ರದಿಂದ ಸ್ಪರ್ಧಿಸಿ ಎರಡನೇ ಬಾರಿಯೂ ವಿಧಾನಸಭೆ ಪ್ರವೇಶಿಸಿದರು.

LEAVE A REPLY

Please enter your comment!
Please enter your name here