ಕಾಂಗ್ರೆಸ್​ನಿಂದ 200 ಯುನಿಟ್​ ಉಚಿತ ವಿದ್ಯುತ್​ ಘೋಷಣೆ – ಇಂಧನ ಸಚಿವ ಸುನಿಲ್​ ಕುಮಾರ್​ಗೆ ಸಿದ್ದರಾಮಯ್ಯ ಮರು ಪ್ರಶ್ನೆಗಳ ಸುರಿಮಳೆ

V Sunil Kumar Energy Minister
V Sunil Kumar Energy Minister
ವಿಧಾನಸಭಾ ಚುನಾವಣೆಯ ಮೊದಲ ಪ್ರಣಾಳಿಕೆಯಾಗಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಉಚಿತವಾಗಿ 200 ಯುನಿಟ್​ ವಿದ್ಯುತ್​ ನೀಡುವ ಪ್ರಶ್ನೆ ಕೇಳಿದ್ದ ಇಂಧನ ಸಚಿವ ಸುನಿಲ್​ ಕುಮಾರ್​​ ಅವರಿಗೆ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮರು ಪ್ರಶ್ನೆಗಳನ್ನು ಹಾಕಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಸ್ಕಾಂ ಗಳಿಗೆ ನೀಡಿದ್ದು 6000 ಕೋಟಿಯೋ? 9000 ಕೋಟಿಯೋ? ಯಾವುದು ನಿಜ ಲೆಕ್ಕ? ಯಾವುದು ಸುಳ್ಳು ಲೆಕ್ಕ? ಎಂಬುದನ್ನು ಸಚಿವ ಸುನೀಲ್ ಕುಮಾರ್ ಅವರು ಮೊದಲು ಹೇಳಬೇಕು.
2013ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಹೊತ್ತಿಗೆ ಹಿಂದಿನ ಸರ್ಕಾರ ವಿದ್ಯುತ್ ಇಲಾಖೆಯ ಮೇಲೆ ದೊಡ್ಡ ಮೊತ್ತದ ಸಾಲದ ಗಂಟನ್ನು ಹೊರಿಸಿ ಹೋಗಿತ್ತು, ಸಾಲ ಮಾಡಿ ಈ ಎಸ್ಕಾಂಗಳ ಬಾಕಿ ಮೊತ್ತ ತೀರಿಸಿ, ಕುತ್ತಿಗೆವರೆಗೂ ಮುಳುಗಿದ್ದ ಎಸ್ಕಾಂಗಳನ್ನು ಮೇಲೆತ್ತಿದವರು ನಾವು.
ಅಗತ್ಯ ಇರುವ ಕ್ಷೇತ್ರಕ್ಕೆ ಹಣ ಹಾಕುವುದನ್ನು ನಷ್ಟ ಎನ್ನುವುದಿಲ್ಲ, ಬದಲಾಗಿ ಬಂಡವಾಳ ಹೂಡಿಕೆ ಎನ್ನುತ್ತಾರೆ ಎಂಬ ಅರ್ಥ ಶಾಸ್ತ್ರದ ಸರಳ ತತ್ವದ ಅರಿವಿಲ್ಲದ ಸುನೀಲ್ ಕುಮಾರ್ ಅವರ ಜ್ಞಾನಭಂಡಾರದ ಬಗ್ಗೆ ಅನುಕಂಪವಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ 2014-15 ರಲ್ಲಿ ರಾಜ್ಯದಲ್ಲಿ ಒಟ್ಟು ಉತ್ಪಾದನೆಯಾಗುತ್ತಿದ್ದ ವಿದ್ಯುತ್ ಪ್ರಮಾಣ 14,825 ಮೆ.ವ್ಯಾ ಮಾತ್ರ. ಅದರಲ್ಲಿ ಸೋಲಾರ್ ಮೂಲದಿಂದ 118 ಮೆ.ವ್ಯಾ ಮತ್ತು ಗಾಳಿ ಮೂಲದಿಂದ 2,655 ಮೆ. ವ್ಯಾ ವಿದ್ಯುತ್ ಉತ್ಪಾದನೆ ಆಗುತ್ತಿತ್ತು.
2018 ರ ವೇಳೆಗೆ ಸೋಲಾರ್ ಮೂಲದಿಂದ 6157 ಮೆ.ವ್ಯಾ. ಮತ್ತು ಗಾಳಿ ಮೂಲದಿಂದ 4730 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಶಕ್ತಿ ತುಂಬಿದವರು ನಾವು. ವಿದ್ಯುತ್ ಉತ್ಪಾದನೆ ಹೆಚ್ಚಾದರೆ ಇಲಾಖೆಗೆ ಲಾಭವಾಗುತ್ತಾ? ನಷ್ಟವಾಗುತ್ತಾ?
ಕಲ್ಲಿದ್ದಲು ಮೂಲದ ಉಷ್ಣ ವಿದ್ಯುತ್ ಉತ್ಪಾದನೆ 2014-15 ರಲ್ಲಿ 6,197 ಮೆಗಾವ್ಯಾಟ್ ಇದ್ದದ್ದು, 2018 ರ ವೇಳೆಗೆ 11,366 ಮೆಗಾವ್ಯಾಟ್ ಗೆ ತಲುಪಿತ್ತು.
ಇಂದು ನೀವು ವಿದ್ಯುತ್ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದರೆ ಅದರ ಹಿಂದಿರುವುದು ನಮ್ಮ ಸರ್ಕಾರದ ಶ್ರಮ. 2014-15 ರಲ್ಲಿ ನವೀಕರಿಸಬಹುದಾದ ಇಂಧನ ಮೂಲದಿಂದ ಒಟ್ಟು ಉತ್ಪಾದನೆಯಾಗುತ್ತಿದ್ದ ವಿದ್ಯುತ್ ಪ್ರಮಾಣ 4,855 ಮೆಗಾ ವ್ಯಾಟ್. 2018 ರ ವೇಳೆಗೆ ಇದು 13,500 ಮೆಗಾ ವ್ಯಾಟ್ ಗಿಂತ ಹೆಚ್ಚಾಯಿತು.ಇದನ್ನು ನಷ್ಟ ಎಂದು ಯಾವ ಗಣಿತದ ಲೆಕ್ಕ ಹೇಳುತ್ತದೆ?
ಒಂದು ಕಾಲದಲ್ಲಿ ಕೇವಲ 2-3 ಗಂಟೆ ವಿದ್ಯುತ್ ಒದಗಿಸಲು ಸಂಕಷ್ಟ ಪಡುತ್ತಿದ್ದ ರಾಜ್ಯವು 2018 ರ ವೇಳೆಗೆ 28,741 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಹಂತಕ್ಕೆ ತಲುಪಿತ್ತು.
ನಮ್ಮ 5 ವರ್ಷಗಳ ಆಡಳಿತದ ಅವಧಿಯಲ್ಲಿ 13,175 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿದ್ದೆವು.
ರಾಜ್ಯದ ಅಗತ್ಯತೆಗೆ ಸಾಕಾಗಿ, ಹೊರರಾಜ್ಯಗಳಿಗೆ ಮಾರಾಟ ಮಾಡುವಷ್ಟು ವಿದ್ಯುತ್ ಅನ್ನು ನಾವೇ ಉತ್ಪಾದನೆ ಮಾಡುತ್ತಿದ್ದರು, ದುಪ್ಪಟ್ಟು ದರ ನೀಡಿ ಹೊರಗಿನಿಂದ ಖರೀದಿ ಮಾಡುತ್ತಿರುವ ನಿಮ್ಮ ಸರ್ಕಾರ ಎಸ್ಕಾಂ ಗಳನ್ನು ಉದ್ಧಾರ ಮಾಡಿದೆ ಎಂಬುದು ತಮಾಷೆಯಾಗಿದೆ.
ಸಚಿವ ಸುನೀಲ್ ಕುಮಾರ್ ಅವರ ಅಸಾಮರ್ಥ್ಯಕ್ಕೆ ತಕ್ಕುದಾಗಿ ರಾಜ್ಯದ ವಿದ್ಯುತ್ ಇಲಾಖೆ ಕೆಲಸ ಮಾಡುತ್ತಿದೆ. ನಾವು ಅಧಿಕಾರಕ್ಕೆ ಬಂದ ಮೇಲೆ ಇಲಾಖೆಯನ್ನು ಲಾಭದ ಹಳಿಗೆ ತಂದು, ರಾಜ್ಯದ ಜನರಿಗೆ ಉಚಿತವಾಗಿ 200 ಯುನಿಟ್ ವಿದ್ಯುತ್ ನೀಡುತ್ತೇವೆ.
ಸನ್ಮಾನ್ಯ ಸುನೀಲ್ ಕುಮಾರ್ ಅವರೇ, ನಾವು ನುಡಿದಂತೆ ನಡೆಯುವವರು. ಈ ಬಗ್ಗೆ ಅನುಮಾನವೇ ಬೇಡ. ರಾಜ್ಯದ ಜನರಿಗೆ 200 ಯುನಿಟ್ ಉಚಿತ ಘೋಷಣೆ ಮಾಡಿ, ಕಾರ್ಯಕ್ರಮಕ್ಕೆ ನಿಮ್ಮನ್ನೂ ಆಹ್ವಾನಿಸುತ್ತೇವೆ.
ತಪ್ಪದೇ ಬನ್ನಿ
ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

LEAVE A REPLY

Please enter your comment!
Please enter your name here