ಬೆಂಗಳೂರು: ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರ ಭವ್ಯ ಮಂದಿರ ತಲೆಯೆತ್ತಿನಿಂತಿದ್ದು, ಜನವರಿ 22 ರಂದು ರಾಮಲಲ್ಲಾ (ಬಾಲರಾಮ) ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಇದೇ ದಿನದಂದು ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿಯಲ್ಲಿ ಶ್ರೀರಾಮ ಟ್ರಸ್ಟ್ ನಿರ್ಮಿಸಿರುವ ಸೀತಾ, ರಾಮ, ಲಕ್ಷ್ಮಣ, ಆಂಜನೇಯ ದೇವಾಲಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಸೀತಾ ರಾಮ ಲಕ್ಷ್ಮಣ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ನೂತನ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಭಾಗಿಯಾಗಲಿದ್ದಾರೆ.
ಅಯೋಧ್ಯೆ ರಾಮ ಮಂದಿರದ ಲೋಕಾರ್ಪಣಾ ಕಾರ್ಯಕ್ರಮದಿಂದ ಕಾಂಗ್ರೆಸ್ ದೂರ ಉಳಿದಿದೆ. ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ರಾಮ ವಿರೋಧಿ, ಹಿಂದೂ ವಿರೋಧಿ, ಮುಸ್ಲಿಂ ವೋಟ್ ಬ್ಯಾಂಕ್ಗಾಗಿ ಈ ನಿರ್ಧಾರ ಮಾಡಿದೆ ಎಂದು ಟೀಕಿಸುತ್ತಿದೆ. ಸಿದ್ದರಾಮಯ್ಯ ರಾಮ ವಿರೋಧಿ ಅಂತಾನೂ ಬಿಂಬಿಸಲಾಗುತ್ತಿದೆ. ಇದಕ್ಕೆಲ್ಲ ರಾಜ್ಯ ಕಾಂಗ್ರೆಸ್ ನಾಯಕರು ಪ್ರತ್ಯುತ್ತರ ನೀಡುತ್ತಿದ್ದು, ಸಿದ್ದರಾಮಯ್ಯ ಅವರು ತವರೂರಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಸ್ವತಃ ಸಿದ್ದರಾಮಯ್ಯ ಅವರೂ ಮಾಹಿತಿ ನೀಡಿದ್ದರು. ಹೌದು, ಸಿದ್ದರಾಮಯ್ಯ ಅವರು ಸಿದ್ದರಾಮನಹುಂಡಿಯಲ್ಲಿ 45 ಲಕ್ಷ ವೆಚ್ಚದಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮಂದಿರದ ಕಾಮಗಾರಿ ನಡೆಯುತ್ತಿದ್ದು, ಶೇ.80 ರಷ್ಟು ಕಾಮಗಾರಿ ಸಂಪೂರ್ಣಗೊಂಡಿದೆ. ಸುಮಾರು 120 ಅಡಿ ಉದ್ದದ ಹಾಗೂ 45 ಅಡಿ ಎತ್ತರದ ರಾಮ ಮಂದಿರ ಇದಾಗಿದ್ದು, ಗರ್ಭಗುಡಿ 40X60 ಅಡಿ ವಿಶಾಲವಾಗಿದೆ. ಗರ್ಭಗುಡಿ ಸುತ್ತ 10 ದೇವರ ಸ್ಥಾಪನೆಗೆ ಪ್ರಭಾವಳಿಗಳನ್ನು ನಿರ್ಮಾಣ ಮಾಡಲಾಗಿದೆ.