ಅಯೋಧ್ಯೆ: ಸೋಮವಾರ ನಡೆಯಲಿರುವ ಅಯೋಧ್ಯೆಯ ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭದ ಸಮಯದಲ್ಲಿ ವಿಶ್ವದ ಅತ್ಯಂತ ದುಬಾರಿ ಮೌಲ್ಯದ ರಾಮಾಯಣ ಕೃತಿಯೊಂದನ್ನು ನೀವು ಕಾಣಬಹುದಾಗಿದೆ.
ಈ ರಾಮಾಯಣ ಕೃತಿಯನ್ನು ವಿಶಿಷ್ಟವಾಗಿ ರೂಪಿಸಲಾಗಿದ್ದು, ಪುಸ್ತಕ ಮಾರಾಟಗಾರ ಮನೋಜ್ ಸತಿ ಈ ವಿಶೇಷ ಆವೃತ್ತಿಯನ್ನು ಅಯೋಧ್ಯೆಗೆ ತಂದಿದ್ದಾರೆ.
ಇದನ್ನು ವಿಶೇಷವಾಗಿ ರಾಮ ಮಂದಿರ ಉದ್ಘಾಟನೆ ಸಂದರ್ಭಕ್ಕಾಗಿಯೇ ಅಚ್ಚು ಹಾಕಲಾಗಿದೆ.
ಅಂದವಾಗಿ ರಚಿಸಲಾದ ಈ ಪುಸ್ತಕದ ವಿನ್ಯಾಸ ನಿರ್ಮಾಣ ಹಂತದಲ್ಲಿರುವ ರಾಮಮಂದಿರದ ಮೂರು ಮಹಡಿಗಳನ್ನು ಪ್ರತಿಬಿಂಬಿಸುತ್ತದೆ. ಈ ರಾಮಾಯಣ ಕೃತಿಯ ಹೊರಗಿನ ಪೆಟ್ಟಿಗೆಗೆ ಅಮೇರಿಕನ್ ಆಕ್ರೋಟ್ ಮರವನ್ನು ಬಳಸಲಾಗಿದೆ. ಪುಸ್ತಕ ಮೂರು ಭಾಗಗಳಲ್ಲಿದ್ದು, ದೊಡ್ಡ ಪೆಟ್ಟಿಯ ಮೂರು ವಿಭಾಗಗಳಲ್ಲಿ ಇದನ್ನು ಇಡಲಾಗಿದೆ. ಪೆಟ್ಟಿಗೆ ಮುಚ್ಚಳ 360 ಡಿಗ್ರಿಗಳಷ್ಟು ತಿರುಗುವಂತಿದ್ದು, ಅದನ್ನು ವ್ಯಾಸಪೀಠದಂತೆ ಪುಸ್ತಕ ಇಟ್ಟು ಓದಲು ಬಳಸುವಂತಿದೆ.
ಪುಸ್ತಕದ ಮುಖಪುಟವನ್ನು ಆಮದು ಮಾಡಿಕೊಳ್ಳಲಾದ ವೀಶೇಷ ಬಗೆಯ ಕಾಗದದಿಂದ ರೂಪಿಸಲಾಗಿದೆ. ಮುಖಪುಟ ಹಾಗೂ ಒಳಪುಟಗಳಲ್ಲಿ ಸುಂದರವಾದ ಚಿತ್ರಗಳಿವೆ. ಒಳಪುಟಗಳಿಗೆ ಫ್ರೆಂಚ್ ನಿರ್ಮಾಣದ, ಆಮ್ಲ-ಮುಕ್ತ, ಪೇಟೆಂಟ್ ಪೇಪರ್ ಅನ್ನು ಬಳಸಲಾಗಿದೆ. ಮುದ್ರಣಕ್ಕೆ ಬಳಸಿರುವ ಶಾಯಿ ಕೂಡ ಜಪಾನ್ ಮೂಲದ್ದು ಹಾಗೂ ಸಾವಯವ. ಆವೃತ್ತಿಯ ಪ್ರತಿಯೊಂದು ಪುಟವೂ ವಿಭಿನ್ನ ವಿನ್ಯಾಸವನ್ನು ಹೊಂದಿದ್ದು, ಪ್ರತಿ ಪುಟವೂ ಓದುಗರಿಗೆ ಹೊಸ ಅನುಭವವನ್ನು ನೀಡುತ್ತದೆ.
‘ನಾವು ನಮ್ಮ ಸುಂದರ ರಾಮಾಯಣದೊಂದಿಗೆ ಇಲ್ಲಿಗೆ ಬಂದಿದ್ದೇವೆ. ಅಯೋಧ್ಯೆಯ ಟೆಂಟ್ ನಗರದಲ್ಲಿ ಇಡಲಾಗಿದೆ. ಇದು ವಿಶ್ವದ ಅತ್ಯಂತ ದುಬಾರಿ ರಾಮಾಯಣವಾಗಿದೆ’ ಎಂದು ಸತಿ ತಿಳಿಸಿದ್ದಾರೆ. ‘ಇದರ ಮೌಲ್ಯ ₹1.65 ಲಕ್ಷ. ಈ ಪುಸ್ತಕ 400 ವರ್ಷಗಳವರೆಗೆ ಉಳಿಯುತ್ತದೆ. ಸುಂದರವಾದ ಪುಸ್ತಕದ ಕಪಾಟು ಇರುವುದರಿಂದ ಇದು ಸುರಕ್ಷಿತವಾಗಿ ಉಳಿಯುತ್ತದೆ. ಈ ಪುಸ್ತಕವನ್ನು ನಾಲ್ಕು ತಲೆಮಾರುಗಳು ಓದಬಹುದು’ ಎಂದು ಅವರು ಹೇಳಿದರು.