ಬಿಜೆಪಿ ಸಮಾವೇಶದಲ್ಲಿ ನಟ ದರ್ಶನ್​ ಪ್ರತ್ಯಕ್ಷ – ಈ ಬಾರಿ ಬಿಜೆಪಿ ಸ್ಟಾರ್​ ಕ್ಯಾಂಪೇನರ್​ ಆಗ್ತಾರಾ..?

ನಟ, ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರು ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಬೆಂಗಳೂರು ದಕ್ಷಿಣ ಮಹಿಳಾ ಮೋರ್ಚಾದ ಜಿಲ್ಲಾ ಸಮಾವೇಶದಲ್ಲಿ ದರ್ಶನ್​ ಅವರು ಕಾಣಿಸಿಕೊಂಡಿದ್ದಾರೆ.

ಬಿಜೆಪಿ ಸಮಾವೇಶದಲ್ಲಿ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್​ ರೆಡ್ಡಿ, ಕಂದಾಯ ಸಚಿವ ಆರ್​ ಅಶೋಕ್​, ಇತ್ತೀಚೆಗಷ್ಟೇ ಬಿಜೆಪಿಗೆ ಬೆಂಬಲ ಘೋಷಿಸಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​, ಬೆಂಗಳೂರು ಬಿಜೆಪಿ ಮುಖಂಡ ಎನ್​ ಆರ್​ ರಮೇಶ್​ ಭಾಗವಹಿಸಿದ್ದರು.

ನಟ ದರ್ಶನ್​ ಅವರು ಬಿಜೆಪಿ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿದ್ದು ಈಗ ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನಟ ದರ್ಶನ್​ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರಾ ಎಂಬ ಕುತೂಹಲ ಸೃಷ್ಟಿಸಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದರ್ಶನ್​ ಅವರು ರಾಕಿಂಗ್​ ಸ್ಟಾರ್​ ಯಶ್​ ಅವರ ಜೊತೆಗೆ ಸುಮಲತಾ ಅಂಬರೀಶ್​ ಪರ ಪ್ರಚಾರ ನಡೆಸಿದ್ದರು.

ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಹಾಲಿ ಸಚಿವ ಮುನಿರತ್ನ ಅವರ ಪರವೂ ಇಡೀ ದಿನ ಪ್ರಚಾರ ನಡೆಸಿದ್ದರು.

ಈ ಹಿಂದೆ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಸತೀಶ್​ ರೆಡ್ಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟ ದರ್ಶನ್​ ಭಾಗವಹಿಸಿದ್ದರು.