ಒಂದೆಡೆ ಪಂಚರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳನ್ನು ಗೆದ್ದಿರುವ ಬಿಜೆಪಿ ಇತ್ತ ಇವತ್ತು ಉಪ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನೂ ಗೆಲ್ಲದೇ ಮುಖಭಂಗ ಅನುಭವಿಸಿದೆ.
ಬಿಹಾರದಲ್ಲಿ ಮೈತ್ರಿ ಸರ್ಕಾರದ ಭಾಗವಾಗಿದ್ದರೂ ಬಿಜೆಪಿ ಅಭ್ಯರ್ಥಿಗೆ ಸೋಲಾಗಿದೆ ಮತ್ತು ಪಶ್ಚಿಮ ಬಂಗಾಳದಲ್ಲಿ ತನ್ನ ಬಳಿಯಿದ್ದ ಲೋಕಸಭಾ ಕ್ಷೇತ್ರವನ್ನು ಟಿಎಂಸಿಗೆ ಸೋತಿದೆ.
ಅಸನ್ಸೋಲ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿ ಮಾಜಿ ಸಚಿವ ಶತ್ರುಘ್ನ ಸಿನ್ಹಾ 3 ಲಕ್ಷದ 3 ಸಾವಿರ ಮತಗಳಿಂದ ಗೆದ್ದಿದ್ದಾರೆ. ಈ ಕ್ಷೇತ್ರದಲ್ಲಿ 2019ರಲ್ಲಿ ಬಿಜೆಪಿ ಸಂಸದರಾಗಿ ಬಾಬುಲ್ ಸುಪ್ರಿಯೋ ಗೆದ್ದಿದ್ದರು.
ಬಿಹಾರದ ಬೋಚಾಹಾನ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಅಭ್ಯರ್ಥಿಗೆ ಸೋಲಾಗಿದ್ದು ವಿರೋಧ ಪಕ್ಷ ಆರ್ಜೆಡಿ ಅಭ್ಯರ್ಥಿ ಅಮರ್ ಪಾಸ್ವಾನ್ 36,653 ಮತಗಳಿಂದ ಪ್ರಚಂಡ ಜಯಗಳಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಹಾಪುರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮಹಾಮೈತ್ರಿಕೂಟದ ಅಭ್ಯರ್ಥಿ ಕಾಂಗ್ರೆಸ್ನ ಜಾಧವ್ ಜಯಶ್ರೀ ಚಂದ್ರಕಾಂತ್ 19,307 ಮತಗಳಿಂದ ಗೆದ್ದಿದ್ದಾರೆ.
ಛತ್ತೀಸ್ಗಢದ ಕೈರ್ಘರ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಶೋದಾ ನೀಲಾಂಬರ್ ವರ್ಮಾ 13 ಸಾವಿರ ಮತಗಳಿಂದ ಗೆದ್ದಿದ್ದಾರೆ.
ಪಶ್ವಿಮ ಬಂಗಾಳದ ಬ್ಯಾಲಿಗುಂಗೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಬಿಟ್ಟು ತೃಣಮೂಲ ಕಾಂಗ್ರೆಸ್ ಸೇರಿದ್ದ ಮಾಜಿ ಸಂಸದ, ಟಿಎಂಸಿ ಅಭ್ಯರ್ಥಿ ಬಾಬುಲ್ ಸುಪ್ರಿಯೋ 20 ಸಾವಿರ ಮತಗಳಿಂದ ಗೆದ್ದಿದ್ದಾರೆ.