ಶೇಕಡಾ 40ರಷ್ಟು ಕಮಿಷನ್ ಆರೋಪ ಮತ್ತು ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಸ್ಥಾನಕ್ಕೆ ಕೆ ಎಸ್ ಈಶ್ವರಪ್ಪ ರಾಜೀನಾಮೆ ನೀಡಿದ ಮುಜುಗರದ ನಡುವೆಯೇ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಎರಡು ದಿನಗಳ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಆರಂಭ ಆಗಿದೆ.
ಆದರೆ ಕಾರ್ಯಕಾರಿಣಿಯಲ್ಲಿ ಭಾಗಿ ಆಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಸರಿ ಬಣ್ಣದ ಬಿಜೆಪಿ ಟೋಪಿಯನ್ನು ಧರಿಸಿಲ್ಲ.
ಬಿಜೆಪಿ ಧ್ವಜಾರೋಹಣ ಕಾರ್ಯಕ್ರಮ ಮತ್ತು ವೇದಿಕೆ ಕಾರ್ಯಕ್ರಮದಲ್ಲೂ ಯಡಿಯೂರಪ್ಪ ಬಿಜೆಪಿ ಟೋಪಿ ಧರಿಸದೇ ಇರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವ ಆನಂದ್ ಸಿಂಗ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಬಿಜೆಪಿ ಟೋಪಿ ಧರಿಸಿದ್ದರು.
ಆದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಾತ್ರ ಬಿಜೆಪಿ ಟೋಪಿ ಧರಿಸಿರಲಿಲ್ಲ.
ವೇದಿಕೆ ಮೇಲೆ ಬಾರದ ಸಂತೋಷ್:
ಇನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ವೇದಿಕೆ ಮೇಲೆ ಬರಲೇ ಇಲ್ಲ. ಎಷ್ಟೇ ಕರೆದರೂ ಬಾರದ ಸಂತೋಷ್ ಸಚಿವ ಅಶ್ವತ್ಥ್ ನಾರಾಯಣ್ ಅವರ ಪಕ್ಕದಲ್ಲೇ ವೇದಿಕೆಯ ಕೆಳಗೆ ಗಣ್ಯರಿಗೆ ಮೀಸಲಾಗಿದ್ದ ಆಸನದ ಮೊದಲ ಸಾಲಿನಲ್ಲಿ ಕುಳಿತುಕೊಂಡರು.
ನಿದ್ದೆ ಮಾಡುತ್ತಿದ್ದ ಸಚಿವ ಬೈರತಿ ಬಸವರಾಜ್:
ಬಿ ಎಲ್ ಸಂತೋಷ್ ಹಿಂದಿನ ಆಸನದ ಸಾಲಿನಲ್ಲಿ ಕುಳಿತಿದ್ದ ಸಚಿವ ಬೈರತಿ ಬಸವರಾಜ್ ಅವರು ನಿದ್ದೆ ಮಾಡುತ್ತಿದ್ದರು.