SC/ST ಗೆ ಬಿಗ್ ಶಾಕ್ – ಬೊಮ್ಮಾಯಿ ಸರ್ಕಾರದ ಮೀಸಲಾತಿ ಬಲೂನ್ ಮೋದಿ ಸರ್ಕಾರದ ಪಿನ್..!

ಮೀಸಲಾತಿ ಪ್ರಮಾಣವನ್ನು 50%ಕ್ಕಿಂತ ಹೆಚ್ಚಿಸುವ ಪ್ರಸ್ತಾಪ ಇಲ್ಲವೆಂದು ಲೋಕಸಭೆಯಲ್ಲಿ ಕೇಂದ್ರ ಸಚಿವರೇ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸಿದ ರಾಜ್ಯ ಬಿಜೆಪಿ ಸರ್ಕಾರದ  ಬಲೂನ್ ಗೆ ಮೋದಿ ಸರ್ಕಾರವೇ ಸೂಜಿ ಚುಚ್ಚಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳದ ನಿರ್ಧಾರ ಹಿಂದೆ ಇದ್ದದ್ದು ಆ ಸಮುದಾಯದ ಬಗೆಗಿನ ಕಾಳಜಿ ಅಲ್ಲ, ಅದು ರಾಜಕೀಯ ಲಾಭದ ದುರುದ್ದೇಶ ಮಾತ್ರ ಎನ್ನುವುದನ್ನು ನಾವು ಹೇಳುತ್ತಲೇ ಬಂದಿದ್ದೇವೆ. ಈಗ ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರದ ಬಣ್ಣ ಬಯಲು ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶೇಕಡಾ 50ರ ಒಟ್ಟು ಮೀಸಲಾತಿ ಪ್ರಮಾಣದ ಮಿತಿಯನ್ನು ಕಿತ್ತುಹಾಕದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಹೇಗೆ ಹೆಚ್ಚಿಸಲು ಸಾಧ್ಯ?  ಕೆಲವರನ್ನು ಕೆಲವು ಕಾಲ ಮರುಳು ಮಾಡಬಹುದು.. ಆದರೇ ಎಲ್ಲರನ್ನೂ ಎಲ್ಲ ಕಾಲದಲ್ಲಿಯೂ ಮರುಳು ಮಾಡಲು ಸಾಧ್ಯವಿಲ್ಲ ಬಿಜೆಪಿಯವರೇ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಹೆಚ್ಚಿಸುವ ಮತ್ತು ಕಡಿಮೆ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇರುವುದರಿಂದ ಬೊಮ್ಮಾಯಿ  ಸರ್ಕಾರ ಮೊದಲು ಇದನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟು ಒಪ್ಪಿಸಬೇಕಿತ್ತು. ಈ ಕರ್ತವ್ಯದಲ್ಲಿ ರಾಜ್ಯ ಸರ್ಕಾರ ಸೋತಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಪ್ರಾಮಾಣಿಕ ಕಾಳಜಿ ಇದ್ದಿದ್ದರೆ ತಕ್ಷಣ ಪ್ರಧಾನಿ ಕಾರ್ಯಲಯವನ್ನು ಭೇಟಿ ಮಾಡಿ ಮೀಸಲಾತಿ ಹೆಚ್ಚಳಕ್ಕೆ ಕೈಗೊಳ್ಳಬೇಕಾಗಿರುವ ಉಪಕ್ರಮಗಳ ಪ್ರಕ್ರಿಯೆಯನ್ನು ಶುರುಮಾಡುವಂತೆ ಮನವರಿಕೆ ಮಾಡಿಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ
ಮತ್ತೆ ಯಾವ ಕರ್ಮಕ್ಕೆ ಈ ಡಬಲ್ ಎಂಜಿನ್ ಸರ್ಕಾರ? ಎಂದು ಪ್ರಶ್ನೆ ಮಾಡಿದ್ದಾರೆ.

ಬೊಮ್ಮಾಯಿ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಯವರ ಜೊತೆ ಮಾತನಾಡುವ ಧೈರ್ಯ ಇಲ್ಲದೆ ಇದ್ದರೆ ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ಯಲಿ.. ಮೀಸಲಾತಿ ಹೆಚ್ಚಳದ ಅವಶ್ಯಕತೆ ಬಗ್ಗೆ ನಾವು ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡುತ್ತೇವೆ. ಇದನ್ನು ಬಿಟ್ಟು ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಾ ಬಣ್ಣ ಬಯಲು ಮಾಡಿಕೊಳ್ಳಬೇಡಿ ಎಂದು ಸಿದ್ದರಾಮಯ್ಯ ಚುಚ್ಚಿದ್ದಾರೆ.

LEAVE A REPLY

Please enter your comment!
Please enter your name here